ಮಳೆ ಕೊರತೆ: ಈವರೆಗೆ ಶೇ.3ರಷ್ಟು ಮಾತ್ರ ಬಿತ್ತನೆ

KannadaprabhaNewsNetwork |  
Published : Jul 11, 2026, 01:00 AM IST
ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಮಳೆಕೊರತೆ ಯಿಂದ ನೆಲಬಿಟ್ಟು ಮೇಲೆಳದ ಸಜ್ಜೆ,ಬೆಳೆ | Kannada Prabha

ಸಾರಾಂಶ

ಜಮೀನು ಸ್ವಚ್ಛಗೊಳಿಸಿ ಕೊಟ್ಟಿಗೆ ಗೊಬ್ಬರ ಬೆರೆಸಿ, ಬಿತ್ತನೆಗೆ ಸರ್ವ ಸಿದ್ಧತೆ ಮಾಡಿಕೊಂರು ರೈತರು ಮಳೆಗಾಗಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.

ಎನ್.ಪಂಪನಗೌಡ ಬಾದನಹಟ್ಟಿ

ಕುರುಗೋಡು: ತಾಲೂಕು ವ್ಯಾಪ್ತಿಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಮಳೆಯಾಶ್ರಿತ ಭೂಮಿ ಹೊಂದಿರುವ ರೈತರು ಕಂಗಾಲಾಗಿದ್ದಾರೆ. ಮಳೆಯ ಕೊರತೆ ಪರಿಣಾಮ ಈ ವರ್ಷ ಮಳೆಯಾಶ್ರಿತ ಭೂಮಿಯಲ್ಲಿ ಶೇ.೩ರಷ್ಟು ಮಾತ್ರ ಬಿತ್ತನೆಯಾಗಿದೆ.

ಜಮೀನು ಸ್ವಚ್ಛಗೊಳಿಸಿ ಕೊಟ್ಟಿಗೆ ಗೊಬ್ಬರ ಬೆರೆಸಿ, ಬಿತ್ತನೆಗೆ ಸರ್ವ ಸಿದ್ಧತೆ ಮಾಡಿಕೊಂರು ರೈತರು ಮಳೆಗಾಗಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ. ತಾಲೂಕಿನಲ್ಲಿ ೩,೫೦೦ ಹೆಕ್ಟೇರ್ ಮಳೆಯಾಶ್ರಿತ ಮತ್ತು ೧೭,೫೦೦ ನೀರಾವರಿ ಭೂಮಿ ಇದೆ. ಕಳೆದ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ ೫೪೦.೨ ಎಂ.ಎಂ. ಮಳೆಯಾಗಿತ್ತು. ಆದರೆ ಈ ವರ್ಷ ಕೇವಲ ೧೯೭ ಎಂ.ಎಂ. ಮಳೆಯಾಗಿದೆ. ವಾಡಿಕೆಯಂತೆ ೪೯೯ ಎಂ.ಎಂ. ಮಳೆಯಾಗಬೇಕಿತ್ತು ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ೬೦೦ ಹೆಕ್ಟೇರ್ ತೊಗರಿ, ೬೦೦ ಹೆಕ್ಟೇರ್ ಸೂರ್ಯಕಾಂತಿ, ೩೦೦ ಹೆಕ್ಟೇರ್ ಸಜ್ಜೆ, ೭೦೦ ಹೆಕ್ಟೇರ್ ನವಣೆ, ೯೦ ಹೆಕ್ಟೇರ್ ಶೇಂಗಾ ಮತ್ತು ೫೦ ಹೆಕ್ಟೇರ್ ಔಡಲ ಸೇರಿ ಒಟ್ಟು ೨೩೪೦ ಹೆಕ್ಟೇರ್ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆಯಾಗಿತ್ತು.

ಅನೇಕ ರೈತರು ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಂದ ಬೆಳೆ ಸಾಲ ಪಡೆದಿದ್ದಾರೆ. ಕೆಲವರು ಖಾಸಗಿ ಮೂಲಗಳಿಂದಲೂ ಸಾಲ ಮಾಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೃಷಿ ಪರಿಕರ ಖರೀದಿಸಿದ್ದಾರೆ. ಆದರೆ ಮಳೆಯಲ್ಲದೆ ಬಿತ್ತನೆ ವಿಳಂಬವಾಗುತ್ತಿರುವುದರಿಂದ ಸಾಲದ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಕುಟುಂಬಗಳು ತೀರ್ವ ಸಂಕಷ್ಟಕ್ಕೆ ಸಿಲುಕಿವೆ.

ಮಳೆಯ ಕೊರತೆಯಿಂದ ತಾಲೂಕಿನ ಗ್ರಾಮಗಳಲ್ಲಿ ನೀರಿನ ಕೆರೆ-ಕಟ್ಟೆ ಹಾಗೂ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಬೋರ್‌ವೆಲ್‌ಗಳಲ್ಲಿಯೂ ನೀರು ಕಡಿಮೆಯಾಗುತ್ತಿರುವುದರಿಂದ ಕೃಷಿ ಮಾತ್ರವಲ್ಲ ಜಾನುವಾರುಗಳಿಗೂ ಕುಡಿಯುವ ನೀರು ಮತ್ತು ಮೇವು ಒದಗಿಸುವುದು ಕಷ್ಟವಾಗಿದೆ.

ರಾಜ್ಯ ಸರ್ಕಾರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಸಣ್ಣ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಬ್ಯಾಂಕ್, ಸಹಕಾರ ಸಂಘಗಳಿಂದ ರೈತರ ಬೆಳೆ ಸಾಲಮನ್ನಾ ಮಾಡಬೇಕು. ಜಾನುವಾರು ಸಾಕಣೆದಾರರ ಮನೆ ಮನೆಗೆ ಮೇವು ಸರಬರಾಜು ಮಾಡಬೇಕು ಎನ್ನುತ್ತಾರೆ ಬಾದನಹಟ್ಟಿ ರೈತ ಬಿ.ಕೆ. ಪರಶುರಾಮ್.

ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಎಲ್ಲ ರೈತರು ಕಡ್ಡಾಯವಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿವಿಧ ಕೃಷಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬೇಕು ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದೇವರಾಜ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಬಾಕುಮುಕ್ತ ಗ್ರಾಮಗಳೆಂದು ಕಲಬಾವಿ, ಹರೇಗಾಳಿ ಗುರುತು
ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಶೀಘ್ರ ₹62.56 ಕೋಟಿ ಜಮೆ