ದಾಂಡೇಲಿ: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗವತಿ ವ್ಯಾಪ್ತಿಯ ಕಲಬಾವಿ ಹಾಗೂ ಯಡೋಗಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹರೇಗಾಳಿ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳೆಂದು ಗುರುತಿಸಲಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮರಿ ಹೇಳಿದರು.

ಮೌಲ್ಯಮಾಪನ ಸಮೀಕ್ಷೆ ಉದ್ದೇಶಿಸಿ ಅವರು ಮಾತನಾಡಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಸಿ. ಹಾದಿಮನಿ ಮಾತನಾಡಿ, ತಂಬಾಕುಮುಕ್ತ ಗ್ರಾಮ ಎಂದು ಘೋಷಿಸುವ ಸನಿಹದಲ್ಲಿರುವುದು ಹೆಗ್ಗಳಿಕೆಯ ಸಾಧನೆಯಾಗಿದ್ದು, ಈ ನಿಟ್ಟಿನಲ್ಲಿ ಎರಡು ಗ್ರಾಮಗಳ ಜನರು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದ್ದು ಶ್ಲಾಘನೀಯ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಅನಿಲ್ ಕುಮಾರ ನಾಯ್ಕ ಮಾತನಾಡಿ, ಈ ಸಾಧನೆ ಗುರುತರ ಹೆಜ್ಜೆಯಾಗಿದೆ. ಮುಂದುವರಿಸಿಕೊಂಡು ಹೋಗುವುದು ಸಮುದಾಯದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಈ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಬೇಕು. ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಂಚಾಯತ್‌ ರಾಜ್ ಸಿಬ್ಬಂದಿ ಮತ್ತು ಗ್ರಾಮಸ್ಥರ ಒತ್ತಾಸೆಯ ನಿಲುವು ಶ್ಲಾಘನೀಯ ಎಂದರು.

ತಂಬಾಕು ಮುಕ್ತ ಕಾರ್ಯಕ್ರಮದ ಮೌಲ್ಯಮಾಪನ ಚಟುವಟಿಕೆಯ ಪರಿಶೀಲನೆಗಾಗಿ ರಾಜ್ಯ ಮಟ್ಟದಿಂದ ಆಗಮಿಸಿದ ಅಧಿಕಾರಿಗಳಾದ ಬೆಂಗಳೂರಿನ ರಾಜ್ಯ ತಂಬಾಕು ನಿಯಂತ್ರಣ ಘಟಕ ವಿಭಾಗೀಯ ಸಂಯೋಜಕ ಪ್ರೇಮ್ ಕುಮಾರ ನಾಯಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಅಧಿಕಾರಿ ನದಾಫ, ಪಿಡಿಒ ಸಂತೋಷ ಹೆಳವರ, ಪಂಚಾಯಿತಿ ಕಾರ್ಯದರ್ಶಿ ಮಹಾದೇವ, ದಿನೇಶ ನಾಯಕ, ಬಸವರಾಜ ಸೋಲಾಪುರಿ, ಪ್ರಾಥಮಿಕ ಸಮುದಾಯ ಆರೋಗ್ಯ ಅಧಿಕಾರಿ ನಾಗರಾಜ ಹೊಸಮನಿ ಇದ್ದರು.


ಗ್ರಾಮದಲ್ಲಿ ಸಂಚರಿಸಿ ವೀಕ್ಷಣೆ ಮಾಡಿ ತಂಬಾಕು ಮುಕ್ತ ಹಳ್ಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಪ್ರಕ್ರಿಯೆ ಕೈಗೊಂಡು ತಂಬಾಕುಮುಕ್ತ ಮಾರ್ಗಸೂಚಿ ಪ್ರಕಾರ ಪರಿಶೀಲನೆ ನಡೆಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಹಳ್ಳಿಗಳನ್ನು ತಂಬಾಕುಮುಕ್ತ ಹಳ್ಳಿಗಳೆಂದು ಘೋಷಿಸಲು ಮುಂದಿನ ಪ್ರಕ್ರಿಯೆಗೆ ತಾಪಂ ಇಒಗಳಿಗೆ ವರದಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.