ಸಿಂಗಟಾಲೂರು ಬ್ಯಾರೇಜ್‌ನಿಂದ ಕಾಲುವೆಗೆ ನೀರು

KannadaprabhaNewsNetwork |  
Published : Jul 11, 2026, 01:00 AM IST
ಹೂವಿನಹಡಗಲಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಕಾಲುವೆಗಳಿಗೆ ನೀರು ಹರಿಸಲು ಚಾಲನೆ ನೀಡಿದ ಶಾಸಕ ಕೃಷ್ಣನಾಯ್ಕ.ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್‌ನಿಂದ ಹೊರಗೆ ಹರಿಯುತ್ತಿರುವ ನೀರು.ಹೂವಿನಹಡಗಲಿ ತಾಲೂಕಿನ ಮಾಗಳ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.  | Kannada Prabha

ಸಾರಾಂಶ

ಮಾಗಳ, ಕೆ.ಅಯ್ಯನಹಳ್ಳಿ, ಹೂವಿನಹಡಗಲಿ 2ನೇ ಹಂತದ ಮುಖ್ಯ ಕಾಲುವೆಗಳಿಗೆ, ನೀರು ಹರಿಸಲು ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದ್ದಾರೆ.

ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್‌ಗೆ ಒಳಹರಿವು ಹೆಚ್ಚಿದ್ದು, ಕಾಲುವೆ, ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಮಳೆ ಇಲ್ಲದೇ ಒಣಗುತ್ತಿದ್ದ ಬೆಳೆಗಳಿಗೆ ಆಸರೆಯಾಗಿದೆ.

ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ತುಂಗಭದ್ರಾ ನದಿಗೆ 42,236 ಕ್ಯೂಸೆಕ್‌ ನೀರು ಒಳ ಹರಿವು ಇರುವುದರಿಂದ ತಾಲೂಕಿನ ರಾಜವಾಳ, ಮಾಗಳ, ಕೆ.ಅಯ್ಯನಹಳ್ಳಿ, ಹೂವಿನಹಡಗಲಿ 2ನೇ ಹಂತದ ಮುಖ್ಯ ಕಾಲುವೆಗಳಿಗೆ, ನೀರು ಹರಿಸಲು ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದ್ದಾರೆ.

ಮಳೆ ಇಲ್ಲದೇ ಬತ್ತಿ ಹೋಗಿರುವ ಕೆರೆಗಳಿಗೆ ಬ್ಯಾರೇಜ್‌ ಹಿನ್ನೀರಿನ ಮಾಗಳ ಬಳಿಯ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಜಾಕ್ವೆಲ್‌ಗಳಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಜನ ಜಾನುವಾರುಗಳಿಗೆ ನೀರಿನ ದಾಹ ನೀಗಿದಂತಾಗಿದೆ. ಜತೆಗೆ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟವೂ ಅಭಿವೃದ್ಧಿಯಾಗುತ್ತದೆ.

ರೈತರು ಮಳೆ ಹಾಗೂ ಕಾಲುವೆ ನೀರು ನಂಬಿಕೊಂಡು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಸಕಾಲದಲ್ಲಿ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿದ್ದವು. ಕಾಲುವೆಗಳಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಚಾಲನೆ ನೀಡಿದ ಶಾಸಕ:

ಯೋಜನೆಯಿಂದ ಕಾಲುವೆ, ಕೆರೆಗಳಿಗೆ ನೀರು ಹರಿಸಲು ಚಾಲನೆ ನೀಡಿದ ಶಾಸಕ ಕೃಷ್ಣನಾಯ್ಕ ಮಾತನಾಡಿ, ಸಿಂಗಟಾಲೂರು ಏತ ನೀರಾವರಿ ಯೋಜನೆ ತಾಲೂಕಿನ ರೈತರಿಗೆ ವರದಾನವಾಗಿದೆ. ಮಳೆ ಕೊರತೆಯಿಂದ ರೈತರ ಬೆಳೆಗಳು ಒಣಗಿ ಹೋಗಿದ್ದವು. ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಿಂದ ಒಳ ಹರಿವು ಹೆಚ್ಚಾಗಿದೆ. ತುಂಗಭದ್ರೆ ತುಂಬಿ ಹರಿಯುತ್ತಿದೆ. ತಾಲೂಕಿನಲ್ಲಿ ವಾಡಿಕೆಯಷ್ಟು ಮಳೆ ಇಲ್ಲದೇ ಶೇ.50ರಷ್ಟು ಬಿತ್ತನೆ ಕೊರತೆಯಾಗಿತ್ತು. ಬಿತ್ತನೆಯಾದ ಬೆಳೆಗಳಿಗೆ ಸಕಾಲದಲ್ಲಿ ಕಾಲುವೆ ನೀರು ಹರಿಯುತ್ತಿದ್ದು, ರೈತರಿಗೆ ಅನುಕೂಲವಾಗಿದೆ ಎಂದರು.

ತಾಲೂಕಿನ ಎಲ್ಲ ಕೆರೆಗಳು ಮಳೆ ಇಲ್ಲದೇ ಒಣಗಿ ಹೋಗಿವೆ. ಮಾಗಳ ಬಳಿಯ ಜಾಕ್ವೆಲ್‌ನಿಂದ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ನೀರು ಹರಿಸಲಾಗುತ್ತಿದೆ. ಶಾಕಾರ ಬಳಿಯ ಜಾಕ್ವೆಲ್‌ನಿಂದ ಹ್ಯಾರಡ ಹೊಸ ಮಲಿಯಮ್ಮ, ಹಳೆ ಮಲಿಯಮ್ಮ ಮತ್ತು ದಾಸನಹಳ್ಳಿ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುವ ಜತೆಗೆ, ಅಂತರ್ಜಲ ಮಟ್ಟವೂ ಹೆಚ್ಚಳವಾಗಿ ರೈತರ ಕೊಳವೆ ಬಾವಿಗಳ ಮೂಲಕ ಬೆಳೆಗಳನ್ನು ಬೆಳೆಯಲು ಅನುಕೂಲವಾಗಿದೆ ಎಂದರು. ಈ ವೇಳೆ ಯೋಜನೆಯ ಎಇಇ ರಾಘವೇಂದ್ರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಬಾಕುಮುಕ್ತ ಗ್ರಾಮಗಳೆಂದು ಕಲಬಾವಿ, ಹರೇಗಾಳಿ ಗುರುತು
ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಶೀಘ್ರ ₹62.56 ಕೋಟಿ ಜಮೆ