ಹಲಸಿನ ಪರಿಮಳಕ್ಕೆ ಮನಸೋತ ಕುಷ್ಟಗಿ ಜನ

KannadaprabhaNewsNetwork |  
Published : Jul 11, 2026, 01:00 AM IST
ಪೋಟೊ10ಕೆಎಸಟಿ3: ಕುಷ್ಟಗಿ ಪಟ್ಟಣದಲ್ಲಿ ತಳ್ಳುಗಾಡಿಯಲ್ಲಿ ಹಲಸಿನ ಹಣ್ಣನ್ನು ಮಾರಾಟ ಮಾಡುತ್ತಿರುವದು. | Kannada Prabha

ಸಾರಾಂಶ

ಹಸಿದಾಗ ಹಲಸು, ಉಂಡಾಗ ಮಾವು ಎಂಬ ಗಾದೆ ಮಾತಿನಂತೆ ಹೊಟ್ಟೆ ತುಂಬಿಸುವ ಗುಣದ ಜತೆಗೆ ಸಾಕಷ್ಟು ಪೌಷ್ಟಿಕಾಂಶ ಹೊಂದಿರುವ ಹಲಸು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ನೆಚ್ಚಿನ ಹಣ್ಣಾಗಿದೆ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಮಳೆಗಾಲದ ಆರಂಭದೊಂದಿಗೆ ಪಟ್ಟಣದಲ್ಲಿ ಹಲಸಿನ ಪರಿಮಳ ಹರಡಿದ್ದು, ಹಣ್ಣು ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಮಲೆನಾಡಿನಿಂದ ಆಗಮಿಸುತ್ತಿರುವ ಹಲಸಿನ ಹಣ್ಣುಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

ಪಟ್ಟಣದ ಪ್ರಮುಖ ರಸ್ತೆ, ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ವಿವಿಧ ಬಡಾವಣೆಗಳಲ್ಲಿ ತಳ್ಳುಗಾಡಿ ಮೂಲಕ ವ್ಯಾಪಾರ ಭರದಿಂದ ನಡೆಯುತ್ತಿದೆ.

ಹಸಿದಾಗ ಹಲಸು, ಉಂಡಾಗ ಮಾವು ಎಂಬ ಗಾದೆ ಮಾತಿನಂತೆ ಹೊಟ್ಟೆ ತುಂಬಿಸುವ ಗುಣದ ಜತೆಗೆ ಸಾಕಷ್ಟು ಪೌಷ್ಟಿಕಾಂಶ ಹೊಂದಿರುವ ಹಲಸು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ನೆಚ್ಚಿನ ಹಣ್ಣಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಈ ಹಣ್ಣಿನ ಸಿಹಿ ರುಚಿ ಹಾಗೂ ಪರಿಮಳ ಗ್ರಾಹಕರನ್ನು ಸೆಳೆಯುತ್ತಿದೆ.

ಮಲೆನಾಡಿನಿಂದ ಕುಷ್ಟಗಿಗೆ: ಶಿವಮೊಗ್ಗ, ಸಾಗರ, ಶಿಕಾರಿಪುರ, ಶಿರಸಿ ಸೇರಿದಂತೆ ಮಲೆನಾಡಿನ ವಿವಿಧ ಭಾಗಗಳಲ್ಲಿ ಬೆಳೆಯುವ ಹಲಸಿನ ಹಣ್ಣುಗಳನ್ನು ಹೊಸಪೇಟೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಂದ ಖರೀದಿಸಿ ಕುಷ್ಟಗಿಗೆ ತರಲಾಗುತ್ತಿದೆ. ಕೆಲವರು ಸಂಪೂರ್ಣ ಹಣ್ಣನ್ನು ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವರು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ವ್ಯಾಪಾರದಿಂದ ಹಲವಾರು ಕುಟುಂಬಗಳು ಜೀವನೋಪಾಯ ಕಂಡುಕೊಂಡಿವೆ.

ಗಾತ್ರಕ್ಕೆ ತಕ್ಕಂತೆ ಬೆಲೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಸಣ್ಣ ಗಾತ್ರದ ಹಲಸಿನ ಹಣ್ಣಿಗೆ ₹150, ಮಧ್ಯಮ ಗಾತ್ರದ ಹಣ್ಣಿಗೆ ₹ 200ರಿಂದ ₹250 ಹಾಗೂ ದೊಡ್ಡ ಗಾತ್ರದ ಹಣ್ಣಿಗೆ ₹300ರವರೆಗೆ ಬೆಲೆ ಇದೆ. ತೊಳೆ ತೆಗೆದು ಮಾರಾಟ ಮಾಡುವ ಹಲಸಿನ ಹಣ್ಣಿಗೆ ಕೆಜಿಗೆ ₹200 ರವರೆಗೆ ದರ ನಿಗದಿ ಮಾಡಿದ್ದಾರೆ.

ಆರೋಗ್ಯದ ಕಣಜ: ಹಲಸಿನ ಹಣ್ಣು ವಿಟಮಿನ್–ಎ, ವಿಟಮಿನ್–ಸಿ, ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ನಾರಿನಾಂಶ ಸಮೃದ್ಧವಾಗಿ ಹೊಂದಿದೆ. ಇದು ಜೀರ್ಣಕ್ರಿಯೆ ಸುಧಾರಿಸಲು, ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು,ಹೃದಯದ ಆರೋಗ್ಯ ಕಾಪಾಡಲು ಮತ್ತು ಮೂಳೆ ಬಲಪಡಿಸಲು ಸಹಕಾರಿ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಹಲಸಿನ ಬೀಜಗಳಲ್ಲಿಯೂ ಪ್ರೋಟೀನ್ ಮತ್ತು ಪೌಷ್ಟಿಕಾಂಶ ಅಧಿಕವಾಗಿದ್ದು, ಅವುಗಳಿಂದಲೂ ಹಲವು ಬಗೆಯ ತಿನಿಸು ತಯಾರಿಸಲಾಗುತ್ತದೆ.

ಬಹುಪಯೋಗಿ ಮರ:ಹಲಸಿನ ಮರದ ಪ್ರತಿಯೊಂದು ಭಾಗಕ್ಕೂ ಉಪಯೋಗವಿದೆ. ಹಲಸಿನ ಕಾಯಿಯಿಂದ ಚಿಪ್ಸ್, ಹಪ್ಪಳ, ಪಲ್ಯ, ಸಾರು ಸೇರಿದಂತೆ ಅನೇಕ ತಿನಿಸು ತಯಾರಿಸಲಾಗುತ್ತದೆ. ಎಲೆಗಳನ್ನು ಸಾಂಪ್ರದಾಯಿಕ ಅಡುಗೆ ಹಾಗೂ ಇತರ ಬಳಕೆಗಳಿಗೆ ಬಳಸಲಾಗುತ್ತದೆ. ಹೀಗಾಗಿ ಹಲಸಿನ ಮರ ಗ್ರಾಮೀಣ ಭಾಗದಲ್ಲಿ ಬಹುಪಯೋಗಿ ಮರವೆಂದು ಪರಿಗಣಿಸಲಾಗುತ್ತದೆ.

ತುಮಕೂರ, ಹೊಸಪೇಟೆಯಿಂದ ಗುಣಮಟ್ಟದ ಹಲಸಿನ ಹಣ್ಣು ತಂದು ಕುಷ್ಟಗಿಯಲ್ಲಿ ಮಾರಾಟ ಮಾಡುತ್ತಿದ್ದೇವೆ. ಸೀಸನ್ ಆರಂಭವಾಗಿರುವುದರಿಂದ ಪ್ರತಿದಿನ ಉತ್ತಮ ವ್ಯಾಪಾರವಾಗುತ್ತಿದೆ. ತೊಳೆ ತೆಗೆದು ಕೆಜಿಗೆ 200ಕ್ಕೆ ಮಾರಾಟ ಮಾಡುತ್ತಿದ್ದೇವೆ. ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಕುಷ್ಟಗಿ ಹಲಸು ಹಣ್ಣಿನ ವ್ಯಾಪಾರಿ ಅಯ್ಯನಗೌಡ ಕಟ್ಟಿಗೌಡ್ರ ತಿಳಿಸಿದ್ದಾರೆ.

ಹಲಸಿನ ಹಣ್ಣು ನಮ್ಮ ಕುಟುಂಬದ ನೆಚ್ಚಿನ ಹಣ್ಣು ಸೀಸನ್ ಆರಂಭವಾದರೆ ವಾರಕ್ಕೊಮ್ಮೆ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗುತ್ತೇವೆ. ರುಚಿಯ ಜತೆಗೆ ಆರೋಗ್ಯಕ್ಕೂ ಉತ್ತಮವಾಗಿರುವುದರಿಂದ ಮಕ್ಕಳು ಹಾಗೂ ಹಿರಿಯರು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಸ್ಥಳೀಯ ಮಾರುಕಟ್ಟೆಯಲ್ಲೇ ಹಣ್ಣು ಸಿಗುತ್ತಿರುವುದು ಸಂತಸದ ಸಂಗತಿ ನಡುವಲಕೊಪ್ಪ ಗ್ರಾಮದ ಗ್ರಾಹಕ ರಮೇಶ ಗೋಪಾಲನಾಯಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಬಾಕುಮುಕ್ತ ಗ್ರಾಮಗಳೆಂದು ಕಲಬಾವಿ, ಹರೇಗಾಳಿ ಗುರುತು
ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಶೀಘ್ರ ₹62.56 ಕೋಟಿ ಜಮೆ