ವ್ಯಸನಮುಕ್ತ ಸಮಾಜ ನಿರ್ಮಾಣವೇಆರೋಗ್ಯವಂತ ರಾಷ್ಟ್ರದ ಅಡಿಪಾಯ

KannadaprabhaNewsNetwork |  
Published : Jul 11, 2026, 01:00 AM IST
ಪೋಟೊ10ಕೆಎಸಟಿ1: ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಅಟಲ್ ಜಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ 2083ನೇ ಮದ್ಯವರ್ಜನ ಶಿಬಿರವನ್ನು  ದಿಶಾ ಸಮಿತಿಯ ಸದಸ್ಯ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ ಅವರ ಉದ್ಘಾಟಿಸಿದರು. ಇತರರು ಇದ್ದರು. | Kannada Prabha

ಸಾರಾಂಶ

ಮದ್ಯಪಾನ ಆರಂಭದಲ್ಲಿ ಹವ್ಯಾಸದಂತೆ ಕಾಣಬಹುದು. ಆದರೆ ಕಾಲಕ್ರಮೇಣ ಅದು ವ್ಯಸನವಾಗಿ ವ್ಯಕ್ತಿಯ ಆಲೋಚನೆ, ವರ್ತನೆ ಮತ್ತು ಜೀವನ ಶೈಲಿ ಬದಲಾಯಿಸುತ್ತದೆ

ಕುಷ್ಟಗಿ: ಒಬ್ಬ ವ್ಯಕ್ತಿಯ ಮದ್ಯ ವ್ಯಸನ ಆತನ ಬದುಕನ್ನಷ್ಟೇ ಅಲ್ಲ,ಇಡೀ ಕುಟುಂಬದ ನೆಮ್ಮದಿ, ಮಕ್ಕಳ ಭವಿಷ್ಯ ಹಾಗೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ. ವ್ಯಸನಮುಕ್ತ ಸಮಾಜ ನಿರ್ಮಾಣವೇ ಆರೋಗ್ಯವಂತ ರಾಷ್ಟ್ರದ ಅಡಿಪಾಯವಾಗಿದ್ದು, ಈ ದಿಸೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ದಶಕಗಳಿಂದ ನಡೆಸುತ್ತಿರುವ ಮದ್ಯವರ್ಜನ ಅಭಿಯಾನ ನಿಜಕ್ಕೂ ಸಮಾಜ ಪರಿವರ್ತನೆಯ ಚಳವಳಿಯಾಗಿದೆ ಎಂದು ದಿಶಾ ಸಮಿತಿಯ ಸದಸ್ಯ ದೊಡ್ಡಬಸವನಗೌಡ ಪಾಟೀಲ ಬಯ್ಯಾಪುರ ಹೇಳಿದರು.

ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಅಟಲ್ ಜಿ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಹಿರೇಬನ್ನಿಗೋಳ ಗ್ರಾಪಂ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ನವಜೀವನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ 2083ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮದ್ಯಪಾನ ಆರಂಭದಲ್ಲಿ ಹವ್ಯಾಸದಂತೆ ಕಾಣಬಹುದು. ಆದರೆ ಕಾಲಕ್ರಮೇಣ ಅದು ವ್ಯಸನವಾಗಿ ವ್ಯಕ್ತಿಯ ಆಲೋಚನೆ, ವರ್ತನೆ ಮತ್ತು ಜೀವನ ಶೈಲಿ ಬದಲಾಯಿಸುತ್ತದೆ. ಮದ್ಯದ ಅವಲಂಬನೆಯಿಂದ ವ್ಯಕ್ತಿ ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡು ಆರೋಗ್ಯ, ಆರ್ಥಿಕ ಸ್ಥಿರತೆ ಹಾಗೂ ಸಾಮಾಜಿಕ ಗೌರವ ಕಳೆದುಕೊಳ್ಳುತ್ತಾನೆ. ಅನೇಕ ಕುಟುಂಬ ಬೀದಿಗೆ ಬೀಳುವಂತಹ ಪರಿಸ್ಥಿತಿಗೂ ಇದು ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದಿನ ಯುವಕರು ಅಲ್ಪವಯಸ್ಸಿನಲ್ಲಿಯೇ ಮದ್ಯ ವ್ಯಸನಕ್ಕೆ ಬಲಿಯಾಗಿ ಯಕೃತ್, ಹೃದಯ ಹಾಗೂ ಇತರ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದುಡಿಮೆ ಮಾಡುವ ಶಕ್ತಿ ಕಳೆದುಕೊಳ್ಳುವುದರ ಜತೆಗೆ ಕುಟುಂಬಕ್ಕೂ ಹೊರೆಯಾಗುತ್ತಿದ್ದಾರೆ. ಇಂತಹವರಿಗೆ ಚಿಕಿತ್ಸೆ, ಸಮಾಲೋಚನೆ ಹಾಗೂ ಆತ್ಮವಿಶ್ವಾಸ ತುಂಬುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಶ್ಲಾಘನೀಯ. ವ್ಯಸನಿಗಳ ಕುಟುಂಬದವರು ಕೂಡ ಇಂತಹ ಶಿಬಿರಗಳ ಮಾಹಿತಿ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಮರಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ನಿರ್ದೇಶಕ ವಿಠ್ಠಲ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯಾದ್ಯಂತ ಈಗಾಗಲೇ 2082 ಮದ್ಯವರ್ಜನ ಶಿಬಿರ ಯಶಸ್ವಿಯಾಗಿ ನಡೆದಿದ್ದು, 1.36 ಲಕ್ಷಕ್ಕೂ ಅಧಿಕ ವ್ಯಸನಿಗಳಿಗೆ ಚಿಕಿತ್ಸೆ ಹಾಗೂ ಪುನರ್ವಸತಿ ಒದಗಿಸಲಾಗಿದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣಾಭಿವೃದ್ಧಿ ಯೋಜನೆ ಮದ್ಯವರ್ಜನೆಗೆ ಮಾತ್ರ ಸೀಮಿತವಾಗದೆ ಹಲವು ಕ್ಷೇತ್ರಗಳಲ್ಲಿ ಮಾದರಿ ಕಾರ್ಯ ನಡೆಸುತ್ತಿದೆ.ಕೆರೆಗಳ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ, ಮಹಿಳಾ ಸಬಲೀಕರಣ, ಸ್ವ-ಸಹಾಯ ಸಂಘಗಳ ಬಲವರ್ಧನೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮಾಸಾಶನ, ಸರ್ಕಾರಿ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನೇಮಕ, ಪರಿಸರ ಸಂರಕ್ಷಣೆ ಹಾಗೂ ಗ್ರಾಮಾಭಿವೃದ್ಧಿಯ ಅನೇಕ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಸಿಪಿಐ ವಿಶ್ವನಾಥ ಹಿರೇಗೌಡರ ಮಾತನಾಡಿ, ಮದ್ಯ ವ್ಯಸನದಿಂದ ಅನೇಕ ಕುಟುಂಬ ಕಲಹ, ರಸ್ತೆ ಅಪಘಾತ ಹಾಗೂ ಅಪರಾಧ ಪ್ರಕರಣ ಹೆಚ್ಚುತ್ತಿವೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು ಎಂದು ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ವೀರೇಶ ಬಂಗಾರಶೆಟ್ಟರ ಮಾತನಾಡಿ, ಮದ್ಯವರ್ಜನ ಶಿಬಿರ ಕೇವಲ ಚಿಕಿತ್ಸಾ ಕಾರ್ಯಕ್ರಮಗಳಲ್ಲ ಅವು ಸಾವಿರಾರು ಕುಟುಂಬಗಳಲ್ಲಿ ಹೊಸ ಬದುಕಿನ ಆಶಾಭಾವನೆ ಮೂಡಿಸುವ ಸಮಾಜಮುಖಿ ಚಳವಳಿಗಳಾಗಿವೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಮಲ್ಲೇಶಯ್ಯ ಹಿರೇಮಠ ಹಾಗೂ ಚನ್ನಬಸಯ್ಯ ಹಿರೇಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಸವಂತಪ್ಪ ಗದ್ದಿ, ರಹಮಾನಸಾಬ್ ದೊಡ್ಡಮನಿ, ಹಾಲು ಒಕ್ಕೂಟ ಅಧ್ಯಕ್ಷ ಮಂಜುನಾಥ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಹಾಂತಯ್ಯ ಅರಳೇಲಿಮಠ, ವಿ.ವಿ.ಹಿರೇಮಠ, ಜಯತೀರ್ಥರಾವ್ ದೇಸಾಯಿ, ರುದ್ರಪ್ಪ ಅಕ್ಕಿ, ಯೋಜನಾಧಿಕಾರಿ ಎಂ.ಆರ್.ನಿರಂಜನ್, ಯೋಜನೆಯ ಅಧಿಕಾರಿ ಅರುಣ, ಮಹೇಶ, ಗಣೇಶ, ಶರಣಪ್ಪ, ಪ್ರಕಾಶ, ನವೀನ್, ರಾಘವೇಂದ್ರ, ಮಂಜುಳಾ, ನಂದಾ, ಅಕ್ಕಮಹಾದೇವಿ, ಸಂಗೀತ, ದೀಪಿಕಾ, ರೀಹಾನ ಸೇರಿದಂತೆ ಯೋಜನೆಯ ಸಿಬ್ಬಂದಿ, ಸೇವಾ ಪ್ರತಿನಿಧಿ, ಸ್ವ-ಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ಮದ್ಯ ವ್ಯಸನ ವ್ಯಕ್ತಿಯಷ್ಟೇ ಅಲ್ಲ, ಇಡೀ ಕುಟುಂಬದ ಭವಿಷ್ಯ ಹಾಳು ಮಾಡುತ್ತದೆ. ವ್ಯಸನಮುಕ್ತ ಜೀವನವೇ ನಿಜವಾದ ಗೆಲುವು ಎಂದು ದಿಶಾ ಸಮಿತಿಯ ಸದಸ್ಯ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಬಾಕುಮುಕ್ತ ಗ್ರಾಮಗಳೆಂದು ಕಲಬಾವಿ, ಹರೇಗಾಳಿ ಗುರುತು
ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಶೀಘ್ರ ₹62.56 ಕೋಟಿ ಜಮೆ