ಕನ್ನಡಪ್ರಭವಾರ್ತೆ, ರಾಮನಾಥಪುರ
ಈ ಬಾರಿ ಮುಸುಕಿನ ಜೋಳ ಅಲ್ಪಸಲ್ಪ ಮಳೆಯಿಂದ ಬೆಳೆದು ಕಾಳು ಕಟ್ಟುವ ವೇಳೆಗೆ ಮಳೆ ಇಲ್ಲದೆ ಒಣಗುತ್ತಿದೆ. ಹಾಗಾಗಿ ಜೋಳದ ಬೆಳೆಯನ್ನು ರಾಸುಗಳಿಗೆ ಹಾಕಲು ಜನರು ಕಟಾವು ಮಾಡುತ್ತಿದ್ದಾರೆ. ರಾಗಿ, ಶಂಠಿ, ಹೆಸರು, ಶೇಂಗಾ, ತೊಗರಿ, ಸಜ್ಜೆ ಮೆಕ್ಕೆಜೋಳದ ಬೆಳೆ ಒಣಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಸರ್ಕಾರ ಕೂಡಲೇ ಬರ ಘೋಷಿಸಿ ಪರಿಹಾರ ಒದಗಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಯೋಗಣ್ಣ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ರಾಮನಾಥಪುರದಲ್ಲಿನ ಚತುರ್ಯುಗಮೂರ್ತಿ ಶ್ರೀ ರಾಮೇಶ್ವರ ದೇವಾಲಯದಲ್ಲಿ ಇತ್ತೀಚಗೆ ಮೂರು ದಿನಗಳು ವಿಶೇಷ ಪರ್ಜನ್ಯ ಜಪ ಮತ್ತು ಸೋಮಸೂತ್ರ ದಾರ್ಮಿಕ ವಿಧಿಗಳು, ಶ್ರೀ ರಾಮೇಶ್ವರಸ್ವಾಮಿಗೆ ನಾಂದಿ, ಏಕಾದಶ ರುದ್ರಾಭಿಷೇಕ, ಪರ್ಜನ್ಯ ಜಪ, ನವಗ್ರಹ ಜಪ, ಗಣಪತಿ ಜಪ, ಗಣಪತಿ ಹೋಮದ ಮುಖೇನ ಮಳೆಗಾಗಿ ಪ್ರಾರ್ಥಿಸಲಾಯಿತು. ಇಂದ್ರಾಕ್ಷಿ ಅಮ್ಮನವರಿಗೆ ಜಪವನ್ನು ವೈದಿಕ ಸೋಮನಹಳ್ಳಿ ಪ್ರಕಾಶ್ ನೇತೃತ್ವದಲ್ಲಿ ಸುಮಾರು 40 ಯತ್ವಿಜರು ನೆರವೇರಿಸಿದ್ದಾರೆ.ಬರಗಾಲದ ಸಂಧರ್ಭದಲ್ಲಿ ರಾಮೇಶ್ವರನಿಗೆ ಸೋಮಸೂತ್ರ ಕಟ್ಟಿದರೆ ಮಳೆ ಸುರಿಯುತ್ತದೆ ಎಂಬ ಪೂರ್ವಿಕರ ನಂಬಿಕೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ವಿಶೇಷ ಪೂಜಾ ಕೈಂಕರ್ಯ, ಸೋಮಸೂತ್ರದ ಆಚರಣೆ ಅಂಗವಾಗಿ ಕಾವೇರಿ ನದಿಯಿಂದ ನೀರನ್ನು ತಂದು ಭಕ್ತರು, ವೈದಿಕರು ಶ್ರದ್ದಾಭಕ್ತಿಯಿಂದ ಶ್ರೀ ರಾಮೇಶ್ವರನಿಗೆ ರುದ್ರಾಭಿಷೇಕ ನೆರವೇರಿಸಿದ್ದಾರೆ. ಹಿನ್ನೆಲೆಯಲ್ಲಿ 3 ದಿನಗಳ ಕಾಲ ಕೊಡಗಿನಲ್ಲಿ ಉತ್ತಮ ಮಳೆಯಾಗಿ ಕಾವೇರಿ ಪೂರ್ಣ ಕಾವೇರಿಯಾಗಿ ಹರಿಯಿತು. ಅದರೆ ಇಲ್ಲಿ ಬಿದ್ದ ಅಲ್ಪ ಸಲ್ಪ ಮಳೆಯಿಂದ ಕೆಲವು ಕಡೆ ತಂಬಾಕು ಬೆಳೆಯಲು ಅನುಕೂಲವಾಯಿತು. ಇನ್ನಿತರ ಬೆಳೆಗಳು ನಷ್ಟದಲ್ಲಿವೆ ಎಂದು ಅವರು ತಿಳಿಸಿದ್ದಾರೆ.