ಕನ್ನಡಪ್ರಭವಾರ್ತೆ ಕುಶಾಲನಗರ
ಈ ಅವಧಿಯಲ್ಲಿ ಜಲಾಶಯದಿಂದ 7000 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಇದೀಗ ಜಲಾಶಯದಲ್ಲಿ 5.01 ಟಿ ಎಂ ಸಿ ಪ್ರಮಾಣದ ನೀರಿನ ಸಂಗ್ರಹ ಕಾಣಬಹುದು. ಜಲಾಶಯ ಭರ್ತಿಯಾಗಲು ಇನ್ನೂ 3.5 ಟಿಎಂಸಿ ನೀರಿನ ಅಗತ್ಯ ಇದೆ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ. ವಾಡಿಕೆಯಂತೆ ಮಳೆಗಾಲದ ಅವಧಿಯಲ್ಲಿ ಮೂರು ಬಾರಿ ಜಲಾಶಯ ತುಂಬಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಕಳೆದ ವರ್ಷ ಜೂನ್ ಪ್ರಥಮ ವಾರದಲ್ಲಿ ಅಣೆಕಟ್ಟು ತುಂಬಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿತ್ತು.
ಇದೀಗ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಮಳೆ ಸಂಪೂರ್ಣ ಕ್ಷೀಣಗೊಂಡಿದೆ. ಇದರ ಪರಿಣಾಮವಾಗಿ ಹಾರಂಗಿ ಅಣೆಕಟ್ಟು ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಕೃಷಿ ಚಟುವಟಿಕೆ ನಡೆಸಲು ಕೊಳವೆಬಾವಿ ನೀರನ್ನು ಅವಲಂಬಿಸುವಂತಾಗಿದೆ. ಹಿರಿಯ ಭೂ ವಿಜ್ಞಾನಿ ಡಾ ಎಚ್ ಎಸ್ ಎಂ ಪ್ರಕಾಶ್ ಅವರು ಅಧ್ಯಯನ ಪ್ರಕಾರ ಜುಲೈ ಅಂತ್ಯ ಅಥವಾ ಆಗಸ್ಟ್ ತಿಂಗಳ ಆರಂಭದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಕನ್ನಡಪ್ರಭದೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ನೀರಿನ ಕೊರತೆ ಹಿನ್ನೆಲೆಯಲ್ಲಿ ಮೈಸೂರು ಮಂಡ್ಯ ಭಾಗದಲ್ಲಿ ಮೋಡ ಬಿತ್ತನೆ ಮೂಲಕ ಮಳೆ ಸುರಿಸಲು ಸರ್ಕಾರ ಚಿಂತನೆ ಹರಿಸಿದೆ. ಈ ನಿಟ್ಟಿನಲ್ಲಿ ತಜ್ಞರ ಅಭಿಮತ ಕೋರಿರುವುದಾಗಿ ಅವರು ತಿಳಿಸಿದ್ದಾರೆ.ಕಳೆದ ಎರಡು ದಿನಗಳಿಂದ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಕಂಡು ಬಂದಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕೂಡ ಕುಸಿತವಾಗಿರುವುದು ಕಂಡುಬಂದಿದೆ.