ಕೊಡಗಿನಲ್ಲಿ ಮಳೆ ಇಳಿಮುಖ: ಭಾರಿ ಗಾಳಿಗೆ ಬಿದ್ದ ಮರಗಳು

KannadaprabhaNewsNetwork | Published : Jul 28, 2024 2:01 AM

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆ ಪ್ರಮಾಣ ಇಳಿಮುಖವಾಗಿದೆ. ಭಾರಿ ಗಾಳಿಯಿಂದಾಗಿ ಹಲವು ಮರಗಳು ಧರೆಗುಳಿದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಾದ್ಯಂತ ಶನಿವಾರ ಮಳೆ ಪ್ರಮಾಣ ಇಳಿಮುಖವಾಗಿದೆ. ಆದರೆ ಭಾರಿ ಗಾಳಿಯಿಂದಾಗಿ ಹಲವು ಮರಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಅಲ್ಲದೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಕೆಲವು ಕಡೆ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ.

ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಮುಳುಗಡೆಯಾಗಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಮೇಲೂ ಹರಿಯುತ್ತಿದೆ.

ಕಾವೇರಿ ಹಲವೆಡೆ ಪ್ರವಾಹದ ಭೀತಿ ಸೃಷ್ಟಿಸಿದೆ. ಕೊಟ್ಟಮುಡಿ ಮೂರ್ನಾಡು ರಸ್ತೆ ಮೇಲೆ ಕಾವೇರಿ ನದಿ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ನಾಪೋಕ್ಲು-ಚೆರಿಯಪರಂಬು ರಸ್ತೆ ಮೇಲೆ ಕಾವೇರಿ ನದಿ ಹರಿಯುತ್ತಿದೆ. ನಾಪೋಕ್ಲು ಚರಿಯಪರಂಬು ಕಲ್ಲುಮೊಟ್ಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಭಾರಿ ಮಳೆ ಹಿನ್ನೆಲೆಯಲ್ಲಿ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ವಿದ್ಯುತ್ ಮಾರ್ಗ ಸರಿಪಡಿಸಲು ಕೆಇಬಿ ಸಿಬ್ಬಂದಿ ಹರಸಾಹಸಪಡುವಂತಾಗಿದೆ. ವಿರಾಜಪೇಟೆ ತಾಲೂಕಿನ ಮಕ್ಕಿಮೊಟ್ಟೆ ಎಂಬಲ್ಲಿ ಹಲವು ವಿದ್ಯುತ್ ಕಂಬಗಳು ಬಿದ್ದಿದ್ದು, ಕೆಇಬಿ ಸಿಬ್ಬಂದಿ ಎದೆಮಟ್ಟದ ಭಾರಿ ನೀರಿನಲ್ಲಿ ಹೋಗಿ ವಿದ್ಯುತ್ ಲೈನ್ ಸರಿಪಡಿಸುತ್ತಿದ್ದಾರೆ. ಕೆಇಬಿ ಸಿಬ್ಬಂದಿ ಕಾರ್ಯಕ್ಕೆ ಜನರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ತಾಲೂಕಿನ ಕೊಟ್ಟಮುಡಿ ಜಂಕ್ಷನ್ ನಲ್ಲಿ ಪ್ರವಾಹದ ನೀರು ಕಾಫಿ ಕ್ಯೂರಿಂಗ್ ವರ್ಕ್ಸ್ ಗೂ ನುಗ್ಗಿದೆ.

ಪ್ರವಾಹದ ನೀರು ನುಗ್ಗಿ ಚೀಲದಲ್ಲಿ ತುಂಬಿರಿಸಿದ್ದ ಕಾಫಿ ಬೀಜ ಹಾಳಾಗಿದೆ. ಲಕ್ಷಾಂತರ ರು.ಪಾಯಿ ಮೌಲ್ಯದ ಕಾಫಿ ಬೀಜ ಹಾಳಾಗಿದೆ. ಕಾಫಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ಕಾವೇರಿ ನೀರು ಆವರಣದಲ್ಲೆಲ್ಲಾ ಮೂರ್ನಾಲ್ಕು ಅಡಿ ನಿಂತಿದೆ. ಪ್ರವಾಹದ ನೀರಿನಲ್ಲೇ ನಾಲ್ಕು ವಾಹನಗಳು ಸಿಲುಕಿದೆ. ಕಾಫಿ ಕ್ಯೂರಿಂಗ್ ವರ್ಕ್ಸ್ ನ ಕಾರ್ಮಿಕರು ಮನೆಗಳು ಜಲಾವೃತವಾಗಿದೆ.

ಸೋಮವಾರಪೇಟೆ ತಾಲೂಕಿನ ಐಗೂರು ಹೊಸತೋಟದ ನಡುವೆ ಮರ ಬಿದ್ದು ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದ್ದು, ಮರ ತೆರವು ಕಾರ್ಯ ನಡೆದಿದೆ.

ಪೂಕಳ-ಬಿರುನಾಣಿ ನಡುವೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಜೋಡುಪಾಲದ ಹತ್ತಿರದ ಮುಖ್ಯ ರಸ್ತೆಯಿಂದ 100 ಮೀಟರ್ ಅಂತರದಲ್ಲಿ ಉದ್ದಮ ಮೊಟ್ಟೆಗೆ ಹೋಗುವ ಸೇತುವೆಗೆ ದೊಡ್ಡ ಮರ ಬಿದ್ದಿದ್ದು, ತೆರವುಗೊಳಿಸುವ ಕಾರ್ಯ ನಡೆದಿದೆ. ಬಿಳುಗುಂದ ಗ್ರಾಮ ನಿವಾಸಿ ಕೆ ಎಂ ಕುಶಾಲಪ್ಪನವರ ವಾಸದ ಮನೆಗೆ ಬೃಹತ್ ಮರ ಬಿದ್ದು ಹಾನಿಯಾಗಿದೆ.

ಕರ್ಣಂಗೇರಿ ಗ್ರಾಮದ ಮೊನಕಾಮ್ಮರಿ ಶಾಲೆಯ ಹಿಂಭಾಗದ ಹೇಮವತಿ ನಾಗರಾಜು ಅವರ ಮನೆಗೆ ಮರ ಬಿದ್ದು ಪೂರ್ಣ ಹಾನಿಯಾಗಿದೆ. ಈ ಬಗ್ಗೆ ತಹಸೀಲ್ದಾರ್ ಪ್ರವೀಣ್ ಕುಮಾರ್ ಅವರು ಪರಿಶೀಲನೆ ನಡೆಸಿ ಕುಟುಂಬದವರಿಗೆ ಆಹಾರ ಕಿಟ್ ನೀಡಿದರು. ಭಾಗಮಂಡಲ ಹೋಬಳಿಯ ದೋಣಿಕಾಡು ಎಂಬಲ್ಲಿ ಕಾವೇರಿ ನದಿ ನೀರಿನ ಪ್ರವಾಹದ ರಕ್ಷಣೆಗೆ ದೋಣಿ ಸಹಾಯದಿಂದ ನದಿ ದಾಟುವ ಜನರಿಗೆ ಸುರಕ್ಷತೆಗಾಗಿ ಜಿಲ್ಲಾಡಳಿತದಿಂದ ಜೀವ ರಕ್ಷಕ ಜಾಕೆಟ್ ಗಳನ್ನು ನೀಡಲಾಗಿದೆ.

ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ವ್ಯಾಪ್ತಿಯ ಹರೀಶ್ ಅವರ ವಾಸದ ಮನೆಯು ಮಳೆ ಗಾಳಿಯಿಂದಾಗಿ ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿ ಸ್ಥಳ ಪರಿಶೀಲಿಸಿದ್ದಾರೆ.

Share this article