ಕೈಕೊಟ್ಟ ಮಳೆ: ಕೊಟ್ಟೂರು ತಾಲೂಕಲ್ಲಿ 2000 ಮಂದಿ ಗುಳೆ

KannadaprabhaNewsNetwork |  
Published : Jul 07, 2026, 03:00 AM IST
Farmers

ಸಾರಾಂಶ

ತಾಲೂಕಿನಲ್ಲಿ ಮೇ ಕೊನೆಯ ವಾರದಲ್ಲಿ ಸುರಿದ ಮಳೆಯನ್ನು ನಂಬಿ ರೈತರು ಅಲ್ಪ ಸ್ವಲ್ಪ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ ಜೂನ್‌ನಿಂದ ಜುಲೈ ತಿಂಗಳ ಇಲ್ಲಿವರೆಗೆ ಮಳೆ ಬರುವ ಯಾವ ಲಕ್ಷಣವೂ ಕಂಡುಬರುತ್ತಿಲ್ಲ. ಆತಂಕಗೊಂಡ ಜನತೆ ಸಾವಿರಾರು ಸಂಖ್ಯೆಯಲ್ಲಿ ಗುಳೆ ಹೊರಟಿದ್ದಾರೆ.

ಜಿ.ಸೋಮಶೇಖರ

ಕೊಟ್ಟೂರು: ತಾಲೂಕಿನಲ್ಲಿ ಮೇ ಕೊನೆಯ ವಾರದಲ್ಲಿ ಸುರಿದ ಮಳೆಯನ್ನು ನಂಬಿ ರೈತರು ಅಲ್ಪ ಸ್ವಲ್ಪ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ ಜೂನ್‌ನಿಂದ ಜುಲೈ ತಿಂಗಳ ಇಲ್ಲಿವರೆಗೆ ಮಳೆ ಬರುವ ಯಾವ ಲಕ್ಷಣವೂ ಕಂಡುಬರುತ್ತಿಲ್ಲ. ಆತಂಕಗೊಂಡ ಜನತೆ ಸಾವಿರಾರು ಸಂಖ್ಯೆಯಲ್ಲಿ ಗುಳೆ ಹೊರಟಿದ್ದಾರೆ.

ದೂಪದಹಳ್ಳಿ ಮತ್ತು ದೂಪದಹಳ್ಳಿ ತಾಂಡಾದ 500 ಜನ, ಮೋತಿಕಲ್‌ ತಾಂಡಾ- 480, ತಿಮಲ್ಲಾಪುರ ದೊಡ್ಡ ತಾಂಡಾ- 450, ತಿಮಲ್ಲಾಪುರ ಸಣ್ಣ ತಾಂಡಾ- 300, ಅಕ್ಕಾಪುರ- 120, ಗಜಾಪುರ- 110, ಕಂದಗಲ್‌ 50 ಮಂದಿ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಸುಮಾರು 2000ಕ್ಕೂ ಅಧಿಕ ಮಂದಿ ಗುಳೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಗುಳೆ ಹೋಗುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ರಾತ್ರೋರಾತ್ರಿ ಬಸ್ಸಲ್ಲಿ ಗುಳೆ:  

ತಾಲೂಕಿನ ರೈತ ಕುಟುಂಬಗಳು ಉದ್ಯೋಗ ಅರಸಿ ಬಹುತೇಕ ಮಂದಿ ಮೈಸೂರು ಸೀಮೆಯತ್ತ ಗುಳೆ ಹೋಗತೊಡಗಿದ್ದಾರೆ. ಇನ್ನುಳಿದವರು ಚಿಕ್ಕಮಗಳೂರಿನ ಕಾಫಿ ತೋಟಗಳತ್ತ ತೆರಳಿದ್ದಾರೆ. ಕೃಷಿಕರು ತಮ್ಮ ತುತ್ತಿನ ಚೀಲವನ್ನು ತುಂಬಿಕೊಳ್ಳಲು ಕುಟುಂಬ ಸಮೇತ ರಾತ್ರೋರಾತ್ರಿ ಬಸ್ಸಿನಲ್ಲಿ ತೆರಳುತ್ತಿದ್ದಾರೆ.

ಚಿಕ್ಕಮಗಳೂರಿನ ಕಾಫೀ ತೋಟಗಳಲ್ಲಿ ಕೆಲಸ ಮಾಡಿದರೆ ಕೈತುಂಬ ಕೂಲಿ ಸಿಗುವ ಆಶಯ ಹೊಂದಿ ರೈತರು ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದಾರೆ. ಮುಂದಿನ ವರ್ಷದವರೆಗೆ ಜೀವನ ಸಾಗಿಸಲು ಬೇಕಾದಷ್ಟು ದುಡ್ಡು ಮಾಡಿಕೊಂಡು ವಾಪಸಾಗಲಿದ್ದಾರೆ. ಎರಡು- ಮೂರು ತಿಂಗಳ ನಂತರ ತಾಲೂಕಿನ ತಾಂಡಾಗಳಿಗೆ ಬರಲಿದ್ದಾರೆ.

ಅಲ್ಪ ಸ್ವಲ್ಪ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಸಾಲ-ಶೂಲ ಮಾಡಿ ಹೆಚ್ಚಿನ ಹಣ ವ್ಯಯಿಸಿ ಬಿತ್ತನೆ ಮಾಡಿದ್ದಾರೆ. ಮಳೆಯ ಅವಕೃಪೆಯಿಂದಾಗಿ ಸಾಲ ತೀರಿಸಲು ದಾರಿ ಕಾಣದೇ ಗುಳೆ ಹೋಗುತ್ತಿದ್ದಾರೆ.

ಗಂಭೀರ ಬರದ ಸ್ಥಿತಿ:  

ತಾಲೂಕಿನಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶಗಳ ಕೃಷಿ ಭೂಮಿ ಪೈಕಿ ಕೇವಲ 8 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ಬಿತ್ತಿರುವ ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಗಳು ಮಳೆ ಕಾಣದೇ ಕಮರಿ ಹೋಗುತ್ತಿವೆ. ಕೊಟ್ಟೂರು ಕೆರೆಯಲ್ಲಿ ಮಾತ್ರ ಸ್ವಲ್ಪ ನೀರಿದೆ. ತಾಲೂಕಿನ ಇತರೆ ಕೆರೆಗಳು ನೀರಿಲ್ಲದೇ ಬಣಗೂಡುತ್ತಿವೆ. ತಾಲೂಕಿನಲ್ಲಿ ಜಲ ಸಂಕಷ್ಟ ಎದುರಾಗುವ ಲಕ್ಷಣಗಳು ಕಂಡುಬರುತ್ತಿದೆ.

ಕೊಟ್ಟೂರು ತಾಲೂಕಿನಲ್ಲಿ ಮೇ ತಿಂಗಳಲ್ಲಿ ಮಾತ್ರ ಒಂದು ದೊಡ್ಡ ಮಳೆ ಸುರಿಯಿತು. ಅದು ಬಿಟ್ಟರೆ ಅಂತಹ ಮಳೆ ಬಂದಿಲ್ಲ. ರೈತರು ಬಿತ್ತಿರುವ ಅಲ್ಪ ಸ್ವಲ್ಪ ಬೆಳೆಗಳು ಬೆಳವಣಿಗೆ ಕಾಣದೇ ನೆಲಕಚ್ಚುತ್ತಿವೆ. ಮುಂಬರುವ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಹೊಂದಿ ರೈತರಿಗೆ ಬೇಕಾಗುವ ಎಲ್ಲ ಬಗೆಯ ಬೀಜಗಳನ್ನು ಇಲಾಖೆ ಸಾಕಷ್ಟು ದಾಸ್ತಾನು ಮಾಡಿಕೊಂಡಿದೆ ಎನ್ನುತ್ತಾರೆ ಕೃಷಿ ಸಹಾಯಕ ಅಧಿಕಾರಿ ಶ್ಯಾಮ್ ಸುಂದರ್.

ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೊಟ್ಟೂರಿನ ಹಳ್ಳಿಗಳು ಸೇರಿದಂತೆ ಕೆಲ ತಾಂಡಾಗಳ ರೈತರು ಪ್ರತಿದಿನ ತಂಡೋಪತಂಡವಾಗಿ ಗುಳೆ ಹೋಗುತ್ತಿದ್ದಾರೆ. ಅಲ್ಲಿ ಸಿಗುವ ಹೆಚ್ಚಿನ ದುಡ್ಡು ಜೀವನ ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಬಯಕೆಯಿಂದ ವಿಧಿಯಿಲ್ಲದೇ ಗುಳೆ ಹೋಗುತ್ತಿದ್ದಾರೆ. ಸರ್ಕಾರದವರು ಗುಳೆ ಹೋಗುವುದನ್ನು ತಡೆಯಬೇಕು. ಅವರಿಗೆ ಇಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ದೂಪದಹಳ್ಳಿ ತಾಂಡಾ ರೈತ ವೆಂಕಟೇಶ ನಾಯ್ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೇಕೆದಾಟಿಂದ ತ.ನಾಡಿಗೆ ಅನ್ಯಾಯ ಆಗಲ್ಲ: ಡಿಕೆಶಿ
43.80 ಲಕ್ಷ ಮತದಾರರಿಗೆ ನೋಟಿಸ್‌ ನೀಡಲು ಸಿದ್ಧತೆ