ಜನಜಾಗೃತಿಗಾಗಿ ಚೆಸ್ ಸ್ಪರ್ಧೆ
ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ದೋಷರಹಿತ ಮತದಾರರ ಪಟ್ಟಿ ತಯಾರಿಸುವ ನಿಟ್ಟಿನಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026 ಆರಂಭಿಸಲಾಗಿದೆ. ಎಸ್ಐಆರ್ ಎಂದರೇನು, ಯಾಕೆ ಕೈಗೊಳ್ಳಲಾಗುತ್ತಿದೆ, ನಾಗರಿಕರಿಗೆ ಅದರಿಂದ ಆಗುವ ಪ್ರಯೋಜನವೇನು, ಈ ಪ್ರಕ್ರಿಯೆ ಹೇಗೆ ನಡೆಸಲಾಗುತ್ತಿದೆ ಎಂಬುದರ ಬಗ್ಗೆ ಅತ್ಯಂತ ಸರಳವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಡಾ. ದಿಲೀಷ್ ಶಶಿ ಪಾಠ ಮಾಡಿದರು.
ಜಿಲ್ಲಾ ಆಡಳಿತ, ಜಿಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2026ರ ಅಂಗವಾಗಿ ಆಯೋಜಿಸಲಾಗಿದ್ದ ಚದುರಂಗ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಭವಿಷ್ಯದ ಪ್ರಜೆಗಳಾದ ಮಕ್ಕಳು ಎಸ್ಐಆರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು. ನಿಮ್ಮ ಪಾಲಕರಿಗೆ ಅಥವಾ ನೆರೆಹೊರೆಯವರಿಗೆ ಎಸ್ಐಆರ್ ಬಗ್ಗೆ ಏನಾದರೂ ಗೊಂದಲವಿದ್ದರೆ ನೀವು ಸಹಾಯ ಮಾಡಬೇಕು. ಅಗತ್ಯ ಮಾಹಿತಿಯನ್ನು ತಿಳಿಸಿ ಹೇಳಬೇಕು ಎಂದರು.
ಸ್ಪರ್ಧೆಯಲ್ಲಿ 33 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಜೇತರಿಗೆ 28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡುವುದಾಗಿ ಆಯೋಜಕರು ತಿಳಿಸಿದರು.