ಹೂವಿನಹಡಗಲಿ: ಪಟ್ಟಣದಲ್ಲಿ ತಾಲೂಕು ಆಡಳಿತ, ತಾಪಂ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಜಾಥಾಕ್ಕೆ ತಾಲೂಕು ಕಚೇರಿ ಬಳಿ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ, ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಬೈಕ್ ರ್‍ಯಾಲಿ ಜಾಥಾವು ಜರುಗಿತು.
ಆ ವೇಳೆ ಎಸ್‌ಐಆರ್ ಬೈಕ್ ಜಾಗೃತಿ ರ್‍ಯಾಲಿ ಪಟ್ಟಣದ ಬೇರೆ ಕಡೆಗೆ ತನ್ನ ಮಾರ್ಗ ಬದಲಿಸಿತು. ರಾಜೀವ್‌ನಗರ, ನಜೀರ್ ನಗರದಲ್ಲಿ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದೆ. ಬೈಕ್‌ನಲ್ಲಿ ಓಡಾಡಲು ಆಗುತ್ತಿಲ್ಲ. ಸಾಕಷ್ಟು ಜನ ಕೆಸರಿನಲ್ಲೇ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಸರಿಯಾಗಿ ಕುಡಿಯುವ ನೀರಿಲ್ಲ. ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಚರಂಡಿಗಳ ದುರಸ್ತಿ ಇಲ್ಲ. ಈ ರಸ್ತೆ ಕಾಮಗಾರಿ ಮಾಡಲು ಕಳೆದ 2 ತಿಂಗಳ ಹಿಂದೆಯೇ ಶಾಸಕ ಕೃಷ್ಣನಾಯ್ಕ ಭೂಮಿ ಪೂಜೆ ಮಾಡಿದ್ದಾರೆ. ಆದರೆ ಈವರೆಗೂ ಕಾಮಗಾರಿ ಆರಂಭವಾಗಿಲ್ಲ. ನಾವೆಲ್ಲ ರೋಸಿ ಹೋಗಿದ್ದೇವೆ. ನಮ್ಮ ಪ್ರದೇಶಕ್ಕೆ ಎಸ್‌ಐಆರ್ ಬೈಕ್ ರ್‍ಯಾಲಿ ಬರುವುದು ಬೇಡ ಎಂದು ನಡು ರಸ್ತೆಗೆ ಟ್ರ್ಯಾಕ್ಟರ್ ನಿಲ್ಲಿಸಿ ತಡೆಯೊಡ್ಡಿದ ಪ್ರಸಂಗ ಜರುಗಿತು.
ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ, ನಿವಾಸಿಗರ ಸಮಸ್ಯೆಯನ್ನು ಆಲಿಸಿ, ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.ನಿವಾಸಿಗಳಾದ ವಲಿಸಾಬ್, ಪೀರ್‌ಸಾಬ್, ಸುಮಂತ, ಖಾಸಿಂಸಾಬ್ ಇದ್ದರು.