ಕಲಬುರಗಿಯಲ್ಲಿ ಮತ್ತೆ ಮಳೆಯಬ್ಬರ- ಸೇಡಂನಲ್ಲಿ ಯುವಕ ನೀರುಪಾಲಾದ ಶಂಕೆ

KannadaprabhaNewsNetwork | Published : Sep 9, 2024 1:36 AM

ಸಾರಾಂಶ

ಯುವಕ ನಾಪತ್ತೆ ಪ್ರಕರಣ ದಾಖಲು, ವಿಪತ್ತು ಪಡೆಗಳಿಂದ ಶೋಧ ಕಾರ್ಯ

ಕನ್ನಡಪ್ರಭ ವಾರ್ತೆ ಕಲಬುರಗಿ, ಸೇಡಂ,

ಕಳೆದ 3 ದಿನದಿಂದ ವಿರಾಮ ನೀಡಿದ್ದ ಮಳೆರಾಯ ಜಿಲ್ಲೆಯಲ್ಲಿ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಶನಿವಾರ ರಾತ್ರಿ ಜಿಲ್ಲೆಯ ಸೇಡಂ, ಜೇವರ್ಗಿ, ಯಡ್ರಾಮಿ, ವಾಡಿ, ಶಹಾಬಾದ್‌, ಕಲಬುರಗಿ ತಾಲೂಕು ಹಾಗೂ ನಗರ ವ್ಯಾಪ್ತಿಯಲ್ಲಿ ಬಿರುಸಿನ ಮಳೆ ಸುರಿದಿದೆ. ಏತನ್ಮಧ್ಯೆ ಸೇಡಂ ಪಟ್ಟಣದಲ್ಲಿ ಬಹಿರ್ದೆಸೆಗೆ ತೆರಳಿದ್ದ 17 ವರ್ಷದ ಬಾಲಕ ಈಜಲು ಹೋಗಿ ನೀರು ಪಾಲಿಗಿರುವ ಬಲವಾದ ಶಂಕೆ ವ್ಯಕ್ತವಾಗಿದೆ.

ಸೇಡಂ ತಾಲೂಕಿನಲ್ಲಿ ನಿನ್ನೆ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆ ಅವಾಂತರ ಹುಟ್ಟು ಹಾಕಿದೆ. ಪಟ್ಟಣದ ದೊಡ್ಡ ಅಗಸಿ ನಿವಾಸಿ ರಾಹುಲ್ ನಾಗಪ್ಪ ಎಳ್ಳಿ (17) ವರ್ಷ ಈತನು ಬಹಿರ್ದೇಸೆಗೆ ಹೋದ ವೇಳೆ ನೀರಲ್ಲಿ ಈಜಲು ಹೋಗಿ ಕಾಣೆಯಾಗಿರುವ ಘಟನೆ ನಡೆದಿದೆ.

ರವಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬಹಿರ್ದೆಸೆಗೆ ಹೋಗಿದ್ದ ವೇಳೆ ಈಜಾಡಲು ಕಲಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಸ್ಥಳಕ್ಕೆ ತೆರಳಿದ್ದಾನೆ. ಕಾಮಗಾರಿ ಮಾಡಿದ ಸಂದರ್ಭದಲ್ಲಿ ಸಂದರ್ಭದಲ್ಲಿ ಬ್ಲಾಸ್ಟಿಂಗ್ ಮಾಡಿದ ಕಂಟ್ರ್ಯಾಕ್ಟರ್ ನಿರ್ಲಕ್ಷ್ಯ ದಿಂದ ಕಾಮಗಾರಿ ನಿರ್ವಹಿಸಿದ ಸ್ಥಳದಲ್ಲಿ ದೊಡ್ಡ ಕಂದಕಗಲು ಬಿದ್ದಿವೆ. ಇದರಿಂದಾಗಿ ಅಲ್ಲಿ ಭಾರಿ ನೀರು ಸಂಗ್ರಹವಾಗಿದೆ.

ಇದೇ ನೀರಲ್ಲಿ ಈಜಲು ಹೋಗಿ ಬಯುವಕ ರಾಹುಲ್‌ ಸಾವನ್ನಪ್ಪಿರುವ ಶಂಕೆ ನಿವಾಸಿಗಳು ವ್ಯಕ್ತಪಡಿಸಿದ್ದಾರೆ. ಇದೇ ನೀರಲ್ಲೇ ಅವಘಡ ಸಂಭವಿಸಿದೆ ಎಂದು ದೊಡ್ಡ ಅಗಸಿ ನಿವಾಸಿಗಳ ಆರೋಪವಾಗಿದೆ. ನೀರಿಗೆ ಇಳಿದ ಯುವಕ ಕಾಣೆಯಾಗಿದ್ದಾನೆ, ಸೇಡಂ ಪುರಸಭೆ ಸಿಬ್ಬಂದಿ ಎನ್ ಡಿ ಆರ್ ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಸೇಡಂ ಠಾಣೆಯಲ್ಲಿ ಯುವಕ ನೀರಿನಲ್ಲಿ ಕೊಚ್ಚಿ ಹೋದ ಬಗ್ಗೆ ಪ್ರಕರಣ ದಾಖಲಾಗಿದೆ.

ಸೇಡಂನಲ್ಲಿ ಶನಿವಾರ ರಾತ್ರಿ 45 ಮಿಮೀ ಮಳೆ ಸುರಿದಿದೆ, ಕೋಲಕುಂದಾ, ಆಡಕಿ, ಮುಧೋಳ, ಕೋಡ್ಲಾದಲ್ಲಿ ಸರಾಸರಿ 30 ಮಿಮೀ ಮಳೆಯಾಗಿದೆ. ಚಿತ್ತಾಪುರ, ಗುಂಡಗುರ್ತಿಲ್ಲೂ ಸರಾಸರಿ 30 ಮಿಮೀ ಮಳೆ ಸುರಿದಿದೆ.

Share this article