ಮುಂದುವರಿದ ವರುಣಾರ್ಭಟ, ಉಕ್ಕಿದ ನದಿಗಳು

KannadaprabhaNewsNetwork |  
Published : Jul 07, 2026, 03:30 AM ISTUpdated : Jul 07, 2026, 04:56 AM IST
Rain

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಜಿಲ್ಲಾದ್ಯಂತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಸೋಮವಾರವೂ ಮುಂದುವರಿದಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಕೃಷ್ಣಾ ಹಾಗೂ ಅದರ ಉಪನದಿಗಳ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗಿದೆ.  

 ಬೆಳಗಾವಿ :  ಜಿಲ್ಲಾದ್ಯಂತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಸೋಮವಾರವೂ ಮುಂದುವರಿದಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಕೃಷ್ಣಾ ಹಾಗೂ ಅದರ ಉಪನದಿಗಳ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸುಮಾರು 78 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇದರಿಂದಾಗಿ ಜಿಲ್ಲೆಯ ಹಲವು ಕೆಳಹಂತದ ಸೇತುವೆಗಳು ಜಲಾವೃತವಾಗಿವೆ.

ದೂಧಗಂಗಾ, ವೇದಗಂಗಾ ಸೇರಿದಂತೆ ಕೃಷ್ಣಾ ಉಪನದಿಗಳು ಮೈದುಂಬಿ ಹರಿಯುತ್ತಿವೆ

ದೂಧಗಂಗಾ, ವೇದಗಂಗಾ ಸೇರಿದಂತೆ ಕೃಷ್ಣಾ ಉಪನದಿಗಳು ಮೈದುಂಬಿ ಹರಿಯುತ್ತಿದ್ದು, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಕರದಗಾ-ಭೋಜ, ಭಾರವಾಡ-ಕುಣ್ಣೂರ, ಅಕ್ಕೋಳ-ಸಿದ್ನಾಳ, ಯಡೂರು-ಕಲ್ಲೋಳ, ಜತ್ರಾಟ- ಭೀವಶಿ, ಭೋಜವಾಡಿ- ಗಜಭರವಾಡಿ, ಮಲಿಕವಾಡ- ದತ್ತವಾಡ ಹಾಗೂ ಮಾಂಜರಿ-ಭಾವನಸೌಂದತ್ತಿ ಸೇರಿದಂತೆ ಏಳುಕ್ಕೂ ಹೆಚ್ಚು ಕೆಳಹಂತದ ಸೇತುವೆಗಳು ಜಲಾವೃತವಾಗಿವೆ. ಸೇತುವೆಗಳ ಮೇಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ವಾಹನಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುತ್ತಿವೆ.

ಸದ್ಯ ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದ್ದರೂ, ನದಿ ತೀರದ ಗ್ರಾಮಗಳಲ್ಲಿ ಆತಂಕದ ಪರಿಸ್ಥಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಚಿಕ್ಕೋಡಿ ತಾಲೂಕಿನ ಮಲಿಕವಾಡ ಬಳಿ ದೂಧಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ಕೆಲವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಡುಮಟ್ಟದವರೆಗೆ ನೀರಿನಲ್ಲಿ ಇಳಿದು ವೃದ್ಧನೊಬ್ಬ ಮೀನು ಹಿಡಿಯುತ್ತಿರುವ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿದ್ದರೂ ಅಪಾಯವನ್ನು ಲೆಕ್ಕಿಸದಿರುವುದು ಕಳವಳಕ್ಕೆ ಕಾರಣವಾಗಿದೆ.

ಜಿಲ್ಲೆಯ ಹಲವೆಡೆ ಸೇತುವೆಗಳು ಮುಳುಗಿ ಸಂಚಾರ ಬಂದ್ ಆಗಿದ್ದರೂ ಕೆಲವು ಕಡೆಗಳಲ್ಲಿ ಎಚ್ಚರಿಕೆ ಫಲಕ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮಗಳಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಜಾಂಬೋಟಿ ಬಳಿ ಮರ ಬಿದ್ದು ಹೆದ್ದಾರಿ ಬಂದ್

ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ರಾಜ್ಯ ಹೆದ್ದಾರಿಯ ಮೇಲೆಯೇ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಬೆಳಗಾವಿ-ಗೋವಾ ರಸ್ತೆ ಸಂಪರ್ಕ ತಾತ್ಕಾಲಿಕ ಸ್ಥಗಿತಗೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮರ ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ ಎರಡೂ ಬದಿಗಳಲ್ಲಿ ವಾಹನಗಳು ಸಾಲಾಗಿ ನಿಂತಿದ್ದವು. ನಿರಂತರ ಮಳೆಯಿಂದ ಖಾನಾಪುರ ತಾಲೂಕಿನ ಉಲಮನಿ ಗ್ರಾಮದಲ್ಲಿ ಗುಡ್ಡ ಕುಸಿದು ಬೃಹತ್ ಮರ ಮುಖ್ಯ ರಸ್ತೆಯ ಮೇಲೆ ಬಿದ್ದಿದೆ. ಮಣ್ಣು ಇನ್ನೂ ಕುಸಿಯುತ್ತಿರುವ ಕಾರಣ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಕೊಟ್ಟಿಗೆ ಕುಸಿದು ಗರ್ಭಿಣಿ ಎಮ್ಮೆ ಸಾವು

ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮದಲ್ಲಿ ನಿರಂತರ ಮಳೆಯಿಂದ ದನದ ಕೊಟ್ಟಿಗೆ ಕುಸಿದು ಬಿದ್ದ ಪರಿಣಾಮ ಗರ್ಭಿಣಿ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ. ಕೊಟ್ಟಿಗೆ ಲಕ್ಷ್ಮಣ ಕಂಠಿಬಾಳಿ ಎಂಬುವರಿಗೆ ಸೇರಿದ್ದು, ಘಟನೆಯಿಂದ ಅವರಿಗೆ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ.

ಮಲಪ್ರಭೆಗೆ ಮತ್ತೆ ಜೀವಕಳೆ

ಮುಂಗಾರು ಆರಂಭದಲ್ಲಿ ಬತ್ತಿಹೋಗಿದ್ದ ಮಲಪ್ರಭಾ ನದಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಇದೀಗ ಮೈದುಂಬಿ ಹರಿಯುತ್ತಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ ಹಾಗೂ ಹುಬ್ಬಳ್ಳಿ ಸೇರಿದಂತೆ ನಾಲ್ಕು ಜಿಲ್ಲೆಗಳ ಜೀವನಾಡಿಯಾಗಿರುವ ಮಲಪ್ರಭೆಯಲ್ಲಿ ನೀರಿನ ಹರಿವು ಹೆಚ್ಚಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಜಲಾಶಯಗಳಿಗೆ ಒಳಹರಿವು ಇನ್ನು ಹೆಚ್ಚುವ ನಿರೀಕ್ಷೆಯಿದೆ.

 ಮರ ಬಿದ್ದು ಕಾರ್‌ ಜಖಂ

ನಗರದ ಭಾಗ್ಯನಗರ 3ನೇ ಕ್ರಾಸ್‌ನಲ್ಲಿ ರಸ್ತೆ ಬದಿಯ ಬೃಹತ್ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ನಿರಂತರ ಮಳೆಯಿಂದ ಮರದ ಬೇರುಗಳು ಸಡಿಲಗೊಂಡಿದ್ದರಿಂದ ಈ ಘಟನೆ ಸಂಭವಿಸಿದೆ. ಘಟನೆಯ ವೇಳೆ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಮರ ಬೀಳುವ ವೇಳೆ ವಿದ್ಯುತ್ ಕಂಬಗಳೂ ನೆಲಕ್ಕುರುಳಿದ ಪರಿಣಾಮ ಕೆಲಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ನಗರದ ಕುವೆಂಪು ನಗರದಲ್ಲಿಯೂ ಮಳೆ ಹಾಗೂ ಗಾಳಿಯ ಪರಿಣಾಮ ಮರ ಉರುಳಿ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಸೇರಿದ ಕಾರಿನ ಮೇಲೆ ಬಿದ್ದಿದೆ. ಆರು ತಿಂಗಳ ಹಿಂದಷ್ಟೇ ಖರೀದಿಸಿದ್ದ ಕಾರು ಹಾನಿಗೊಳಗಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಆನ್ ಸಂಸ್ಥೆ ಸಹಯೋಗದಿಂದ ಶಿಶು ಮಂದಿರದಲ್ಲಿ 12 ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಹಸ್ತಾಂತರ
ರಾಮಚರಿತ ಮಾನಸ ಸೇರಿ ಅಮೂಲ್ಯ ಕಾಣಿಕೆ ಪ್ರದರ್ಶನ