ಜಿಲ್ಲೆಯ ವಿವಿಧೆಡೆ ಮಳೆ: ಕೃಷಿ ಚಟುವಟಿಕೆ ಚುರುಕು

KannadaprabhaNewsNetwork |  
Published : May 20, 2024, 01:30 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಈ ಬಾರಿಯಾದರೂ ಮಳೆ ಚೆನ್ನಾಗಿ ಆಗಿದ್ದರೆ ಎಂಬ ಆಶಾವಾದದಲ್ಲಿದ್ದರು. ಅದೀಗ ನಿಜವಾಗುವ ಸಾಧ್ಯತೆ ಕಾಣಿಸಿದೆ.

ಕಾರವಾರ: ಉತ್ತರ ಕನ್ನಡದ ವಿವಿಧೆಡೆ ಮಳೆಯಾಗುತ್ತಿದೆ. ಇನ್ನೂ ಮಳೆ ಮುಂದುವರಿಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಸಂತಸಗೊಂಡಿದ್ದಾರೆ.

ಕಳೆದ ಸಾಲಿನಲ್ಲಿ ಮಳೆಯ ಭಾರಿ ಕೊರತೆ ಎದುರಾಗಿತ್ತು. ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿತ್ತು. ರೈತರು ಮಳೆ ಕೊರತೆಯಿಂದಾಗಿ ಚಿಂತಿತರಾಗಿದ್ದರು. ಹೀಗಾಗಿ ಬೆಳೆಯೂ ಕೈಕೊಟ್ಟಿತು. ಈ ಬಾರಿಯಾದರೂ ಮಳೆ ಚೆನ್ನಾಗಿ ಆಗಿದ್ದರೆ ಎಂಬ ಆಶಾವಾದದಲ್ಲಿದ್ದರು. ಅದೀಗ ನಿಜವಾಗುವ ಸಾಧ್ಯತೆ ಕಾಣಿಸಿದೆ.

ಈ ಬಾರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನೀರಿನ ಅಭಾವ ಉಂಟಾಗಿತ್ತು. ಕುಡಿಯುವ ನೀರನ್ನು ಟ್ಯಾಂಕರ್‌ಗಳಲ್ಲಿ ಪೂರೈಕೆ ಮಾಡಲಾಗುತ್ತಿದೆ. ಜಾನುವಾರುಗಳು ಹಾಗೂ ಕಾಡುಪ್ರಾಣಿಗಳಿಗೂ ನೀರಿನ ಕೊರತೆಯ ಬಿಸಿ ತಟ್ಟಿತ್ತು. ಉತ್ತರ ಕನ್ನಡದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ, ತೆಂಗು ಹಾಗೂ ಬಾಳೆ ತೋಟಗಳಿಗೂ ನೀರಿಲ್ಲದೆ ಸಮಸ್ಯೆ ಉಂಟಾಗಿತ್ತು. ಈಗ ಮುಂಗಾರು ಪೂರ್ವ ಮಳೆಯಾಗುತ್ತಿರುವುದರಿದ ಈ ಸಮಸ್ಯೆ ನಿವಾರಣೆಯಾಗುತ್ತಿದೆ.

ಈಗಾಗಲೆ ಮುಂಗಾರು ಪೂರ್ವ ಮಳೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭರ್ಜರಿಯಾಗಿಯೇ ಉಂಟಾಗಿದೆ. ಇನ್ನೂ ಐದು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ತೆರೆದಿಟ್ಟಿದೆ. ಜತೆಗೆ ಜೂ. 1 ಅಥವಾ 2ರಂದು ರಾಜ್ಯದಲ್ಲಿ ಮುಂಗಾರು ಪ್ರವೇಶಿಸಲಿದೆ ಎಂದು ಹೇಳಲಾಗಿದೆ. ಇದರಿಂದ ಇನ್ನು ಮುಂದೆ ಹೆಚ್ಚುಕಡಿಮೆ ನಿರಂತರವಾಗಿ ಮಳೆಯಾಗುವ ಸಾಧ್ಯತೆ ಇರುವುದನ್ನು ತಿಳಿದು ರೈತ ವಲಯದಲ್ಲಿ ಸಂಚಲನವನ್ನು ಸೃಷ್ಟಿಸಿದೆ.

ರೈತ ಈಗ ಭೂಮಿಯನ್ನು ಹದ ಮಾಡುವ ಸಿದ್ಧತೆಯಲ್ಲಿದ್ದಾರೆ. ಕೃಷಿ ಚಟುವಟಿಕೆಗಳನ್ನು ಭರದಿಂದ ಹಮ್ಮಿಕೊಳ್ಳಲು ಮುಂದಾಗಿದ್ದಾರೆ. ಹಿಂದಿನ ಹಂಗಾಮಿನ ಕಹಿ ಅನುಭವವನ್ನು ಮರೆತು ಈ ಬಾರಿಯಾದರೂ ಬಂಪರ್ ಬೆಳೆ ತೆಗೆಯುವ ನಿರೀಕ್ಷೆಯಲ್ಲಿದ್ದಾರೆ. ಹೊನ್ನಾವರ, ಭಟ್ಕಳದಲ್ಲಿ ಉತ್ತಮ ಮಳೆ

ಭಾನುವಾರ ಬೆಳಗ್ಗೆ ಹೊನ್ನಾವರದಲ್ಲಿ ಭಾರಿ ಮಳೆಯಾಗಿದೆ. ಭಟ್ಕಳದಲ್ಲಿ ಬೆಳಗ್ಗೆ ಸುಮಾರು ಎರಡು ಗಂಟೆಗಳ ಕಾಲ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಮಂದುವರಿದಿದೆ.

ನಾಲ್ಕೈದು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಕೆಲವೆಡೆ ಬಿರುಗಾಳಿ, ಗುಡುಗು, ಮಿಂಚಿನೊಂದಿಗೆ ಭಾರಿ ಮಳೆಯಾದರೆ, ಕೆಲವೆಡೆ ಸಾಧಾರಣ ಮಳೆಯಾಗಿದೆ. ಶನಿವಾರ ಎರಗಿದ ಸಿಡಿಲಿಗೆ ಬನವಾಸಿಯಲ್ಲಿ ಒಬ್ಬ ಯುವಕ ಬಲಿಯಾದರೆ, ಸಿದ್ಧಾಪುರದಲ್ಲಿ ನಾಲ್ಕು ಜಾನುವಾರುಗಳು ಅಸುನೀಗಿದ್ದವು. ಎಲ್ಲೆಡೆ ಮಳೆಯ ವಾತಾವರಣ ಉಂಟಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ