ಹಂಪಿಯಲ್ಲಿ ಮಳೆ ನೀರು ಸೃಷ್ಟಿಸಿದ ಅವಾಂತರ!

KannadaprabhaNewsNetwork |  
Published : Jun 01, 2025, 03:15 AM IST
30ಎಚ್‌ಪಿಟಿ4- ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ಬಳಿಯ ಸಾಲುಮಂಟಪದ ಬಳಿ ಮಳೆ ನೀರು ನಿಂತಿದೆ. | Kannada Prabha

ಸಾರಾಂಶ

ವಿಶ್ವವಿಖ್ಯಾತ ಹಂಪಿಯಲ್ಲಿ ಮಳೆಯಿಂದ ಸ್ಮಾರಕಗಳ ಬಳಿಯೇ ನೀರು ನಿಂತಿದ್ದು, ದೇಶ, ವಿದೇಶಿ ಪ್ರವಾಸಿಗರು ಹಾಗು ಸ್ಥಳೀಯರು ಭಾರತೀಯ ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಸ್ಮಾರಕಗಳ ಬಳಿಯೇ ನಿಂತ ನೀರು, ಪ್ರವಾಸಿಗರ ಆಕ್ರೋಶ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವವಿಖ್ಯಾತ ಹಂಪಿಯಲ್ಲಿ ಮಳೆಯಿಂದ ಸ್ಮಾರಕಗಳ ಬಳಿಯೇ ನೀರು ನಿಂತಿದ್ದು, ದೇಶ, ವಿದೇಶಿ ಪ್ರವಾಸಿಗರು ಹಾಗು ಸ್ಥಳೀಯರು ಭಾರತೀಯ ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಹಂಪಿ ಸ್ಮಾರಕಗಳು ಯುನೆಸ್ಕೊ ಪಟ್ಟಿಗೆ ಸೇರ್ಪಡೆಗೊಂಡಿವೆ. ಈ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಮಳೆಯಿಂದ ಈಗ ಸ್ಮಾರಕಗಳ ಬಳಿಯೇ ನೀರು ನಿಂತಿದ್ದು, ಸೊಳ್ಳೆಗಳ ಕಾಟವೂ ಶುರುವಾಗಿದೆ. ಹೀಗಿದ್ದರೂ ಸಂಬಂಧಿಸಿದ ಇಲಾಖೆಗಳು ಈ ನೀರನ್ನು ತೆಗೆಯುವ ಕೆಲಸ ಮಾಡುತ್ತಿಲ್ಲ. ಅಲ್ಲದೇ, ಮಳೆ ಬಂದಾಗ ನೀರು ನಿಲ್ಲದಂತೆ ಮಾಡುವ ಯೋಜನೆಯೂ ರೂಪಿಸಿಲ್ಲ. ಹಾಗಾಗಿ ಮಳೆ ನೀರು ಸ್ಮಾರಕಗಳ ಬಳಿಯೇ ನಿಲ್ಲುತ್ತಿರುವುದರಿಂದ ಹಂಪಿಗೆ ಬರುವ ಪ್ರವಾಸಿಗರು ಇಲ್ಲಿ ಅವ್ಯವಸ್ಥೆ ಕಂಡು ಸಂಬಂಧಿಸಿದ ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಂಪಿ ಸ್ಮಾರಕಗಳ ವೀಕ್ಷಣೆಗೆ ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಇಲ್ಲಿ ಸ್ಮಾರಕಗಳ ಬಳಿಯೇ ನೀರು ನಿಲ್ಲುತ್ತಿದೆ. ಅದರಲ್ಲೂ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಸಾಲುಮಂಟಪದ ಬಳಿಯೇ ನೀರು ನಿಂತಿದೆ. ಅಲ್ಲದೇ, ಶ್ರೀ ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಮಳೆ ನೀರು ಹರಿಯುತ್ತದೆ. ಮಳೆ ನೀರನ್ನು ಪಕ್ಕದ ತುಂಗಭದ್ರಾ ನದಿಗೆ ಬಿಡುವ ಯಾವುದೇ ಯೋಜನೆಯನ್ನೂ ಮಾಡಿಲ್ಲ. ವಿಜಯನಗರ ಆಳರಸರ ಕಾಲದಲ್ಲಿ ಈ ನೆಲ ನೀರಾವರಿ ವ್ಯವಸ್ಥೆಗೆ ಹೆಸರುವಾಸಿಯಾಗಿತ್ತು. ಈಗ ಮಳೆ ನೀರು ಪಕ್ಕದಲ್ಲೇ ಇರುವ ತುಂಗಭದ್ರಾ ನದಿಗೆ ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ ಎಂದು ಇತಿಹಾಸಪ್ರಿಯರು ಕೂಡ ಸಂಬಂಧಿಸಿದ ಇಲಾಖೆಗಳ ವಿರುದ್ಧ ಹರಿಹಾಯುತ್ತಿದ್ದಾರೆ.

ಹಂಪಿ ಉತ್ಸವದಲ್ಲಿ ವೇದಿಕೆ ನಿರ್ಮಾಣ ಮಾಡಲಾಗುವ ಗಾಯತ್ರಿಪೀಠದ ಮೈದಾನದಲ್ಲೂ ಮಳೆ ನೀರು ನಿಂತಿದೆ. ಗೆಜ್ಜಲ ಮಂಟಪದಿಂದ ವಿಜಯ ವಿಠಲ ದೇವಾಲಯದ ವರೆಗಿನ ರಸ್ತೆ ಸಂಪೂರ್ಣ ಮಳೆ ನೀರಿನಿಂದ ಹಾಳಾಗಿದೆ. ಹಂಪಿಯ ಪ್ರಮುಖ ಸ್ಮಾರಕಗಳ ಬಳಿಯೇ ನೀರು ನಿಲ್ಲುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಕೈಕಟ್ಟಿಕೊಂಡು ಕುಳಿತುಕೊಂಡಿವೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ