ಎಚ್.ಎನ್.ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುಹೋಬಳಿ ವ್ಯಾಪ್ತಿಯ ಹಲಗೂರು ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಶನಿವಾರ ರಾತ್ರಿ ಭಾರೀ ಮಳೆ ಸುರಿದು ಬಿಸಿಲಿನ ತಾಪಕ್ಕೆ ತಂಪೆರೆಯಿತು.
ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಕಳೆದ ಹಲವು ದಿನಗಳಿಂದ ಬಿಸಿಲಿನ ತಾಪದಿಂದ ಬಸವಳಿದಿದ್ದ ಜನ ಸಾಮಾನ್ಯರು, ಪ್ರಾಣಿ, ಪಕ್ಷಿಗಳಿಗೆ ಸ್ವಲ್ಪಮಟ್ಟಿಗೆ ತುಂಪು ನೀಡಿತು.ಬಿರುಗಾಳಿ ಸಹಿತ ಮಳೆ ಪ್ರಾರಂಭವಾಗಿ ಸಿಡಿಲಿನೊಂದಿಗೆ ಯಾವುದೇ ಅಡಚಣೆ, ತೊಂದರೆ ಆಗದಂತೆ ಉತ್ತಮವಾಗಿ ಮಳೆ ಸುರಿದು ಭೂಮಿಯ ತಾಪಮಾನವನ್ನು ಸ್ವಲ್ಪ ಕಡಿಮೆ ಮಾಡಿ ರೈತರಲ್ಲಿ ನಗು ತರುವಂತೆ ಮಾಡಿತು.
ಮಾರ್ಚ್ ತಿಂಗಳಲ್ಲೆ ವಾಡಿಕೆಗೂ ಮುಂಚಿತವಾಗಿ ಮುಂಗಾರು ಮಳೆ ಸುರಿದಿರುವುದರಿಂದ ಬಸವನಬೆಟ್ಟ ಹಾಗೂ ಮುತ್ತತ್ತಿ ದಟ್ಟ ಅರಣ್ಯ ಕಾಡಿನಲ್ಲಿರು ಕೆರೆ ಕಟ್ಟೆಗಳು ಸ್ವಲ್ಪ ಮಟ್ಟಿಗೆ ತುಂಬುವುದರಿಂದ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಸಿಕ್ಕಂತಾಗಿದೆ.ಈಗಾಗಲೇ ಬಿಸಿಲಿನ ತಾಪದಲ್ಲಿ ಅರಣ್ಯ ಪ್ರದೇಶದಲ್ಲಿ ಹುಲ್ಲು ಒಣಗಿ ಹೋಗಿದೆ. ಮೇವಿಗೂ ಪ್ರಾಣಿಗಳು ಪರದಾಡುತ್ತಾ ನಾಡಿನತ್ತ ಬರುತ್ತವೆ. ಈಗ ಮಳೆ ಆಗಿರುವುದರಿಂದ ಹೊಸದಾಗಿ ಹುಲ್ಲು ಬೆಳೆದು ಸಸ್ಯಹಾರಿ ಪ್ರಾಣಿಗಳಿಗೆ ಯಥೇಚ್ಛವಾಗಿ ಆಹಾರ ದೊರಕುವಂತಾಗುತ್ತದೆ. ಜೊತೆಗೆ ಕಾಡಿನಲ್ಲಿರುವ ಹಳ್ಳಗಳು ಮತ್ತು ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿ ಕಾಡುಪ್ರಾಣಿಗಳು, ಪಕ್ಷಿಗಳಿಗೆ ನೀರಿನ ದಾಹವನ್ನು ತಣಿಸುವಂತಾಗಿದೆ.
ಈ ವರ್ಷದ ಮೊದಲನೇ ಮಳೆಯಲ್ಲಿಯೆ ಭೂಮಿ ನೀರು ಕುಡಿಯುವುದಕ್ಕೆಎಂಬುದು ರೈತರ ಅನಿಸಿಕೆ. ಅದರಂತೆ ಯುಗಾದಿಯ ಮುಂಚೆ ಯುಗಾದಿ ನಂತರ ಮಳೆಯಾಗುವ ಪದ್ಧತಿ ಇದೆ. ಉತ್ತಮ ಮಳೆಯಿಂದ ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮುಂದಿನ ದಿನಗಳಲ್ಲಿ ಮಳೆಯಾಶ್ರಿತ ಪ್ರದೇಶವಾದ ಈ ಭಾಗದಲ್ಲಿ ಉತ್ತಮ ಮಳೆಯಾಗಿ ಬೆಳೆ ಹಾಕಲು ಅನುಕೂಲವಾಗಲಿದೆ ಎಂದು ರೈತರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.ರಾತ್ರಿ ಸುರಿದ ಮಳೆಯಿಂದ ರಸ್ತೆ ಬದಿಯ ಸಣ್ಣಪುಟ್ಟ ಹೋಟೆಲ್ ವ್ಯಾಪಾರಿಗಳಿಗೆ ತೊಂದರೆಯಾಗಿ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಬೇಕಾಗಿತ್ತು. ವಿವಿಧೆಡೆ ತಮ್ಮ ಕೆಲ ಕಾರ್ಯಗಳಿಗಾಗಿ ತೆರಳಿದ್ದ ಜನತೆ ವಾಪಸ್ ತಮ್ಮೂರಿಗೆ ತೆರಳಲು ತೊಂದರೆಗೊಳಗಾದರು.
ನೆಲಕಚ್ಚಿದ ತೆಂಗಿನ ಮರಗಳು:ಶನಿವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಸಿಲುಕಿ ಹಲವು ತೆಂಗಿನ ಮರಗಳು ನೆಲಕಚ್ಚಿದ ಘಟನೆ ಸಮೀಪದ ಹುಲ್ಲಾಗಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಈರಣ್ಣ, ಬಿನ್ ಜವರಾಯಿಗೌಡರು ತಮ್ಮ ಹಿಪ್ಪು ನೇರಳೆ ತೋಟದ ನಡುವೆ 20ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ಬೆಳೆಸಿದ್ದರು.
ಸಮೃದ್ಧವಾಗಿ ಬೆಳೆದಿದ್ದ ತೆಂಗಿನ ಗಿಡಗಳು ಕೆಲವೇ ದಿನಗಳಲ್ಲಿ ಫಲ ನೀಡುವ ಹಂತದಲ್ಲಿದ್ದವು. ಆದರೆ, ಬಿರುಗಾಳಿಗೆ ಸಿಲುಕಿ ಸುಮಾರು 8 ತೆಂಗಿನ ಮರಗಳು ನೆಲ್ಲಕ್ಕೆ ಉರುಳಿವೆ. ನಾಲ್ಕೈದು ವರ್ಷಗಳಿಂದ ಕಷ್ಟಪಟ್ಟು ಶ್ರಮವಹಿಸಿ ಬೆಳೆಸಿದ್ದ ತೆಂಗಿನ ಗಿಡಗಳು ಬಿರುಗಾಳಿಗೆ ನೆಲಕಚ್ಚಿದ್ದರಿಂದ ರೈತನಿಗೆ ಅಪಾರ ನಷ್ಟ ಉಂಟಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ಈರಣ್ಣ ಒತ್ತಾಯಿಸಿದರು.ರೈತರಿಗೆ ವರ್ಷದ ಮೊದಲ ಮಳೆ ಉತ್ತಮವಾಗಿ ಸುರಿದಿದೆ. ಇದೇ ರೀತಿ 15 ದಿನದಲ್ಲಿ ಮತ್ತೆ ಮಳೆಯಾದರೆ ರೈತರು ಎಳ್ಳು ಬೆಳೆಯುವುದಕ್ಕೆ ಸಹಕಾರಿಯಾಗಲಿದೆ. ಇದು ಕಾಲಾವಧಿಯಾಗಿದೆ. ಹವಾಮಾನ ಸೂಚನೆಯಂತೆ ಮುಂದೆ ಬರುವ ಬಿಸಿಲಿನ ತಾಪವನ್ನು ನೀಗಿಸುವ ನಿಟ್ಟಿನಲ್ಲಿ ಮಳೆ ತಂಪೆರೆಯುವ ಸೂಚನೆ ನೀಡಿದೆ.- ಚಿಕ್ಕಸ್ವಾಮಿ, ರೈತರು ಸಾಗ್ಯ ಗ್ರಾಮ
ವಾಡಿಕೆಗೂ ಮುಂಚಿತವಾಗಿ ಮುಂಗಾರು ಮಳೆ ಸುರಿದಿರುವುದು ರೈತರಿಗೆ ಅನುಕೂಲ. ಮುಂದೆಯು ಸಹ ಉತ್ತಮ ಮಳೆಯಾಗಿ ರೈತರು ತಮ್ಮ ಹೊಲಗಳಲ್ಲಿ ಬೆಳೆದು ಉತ್ತಮ ಜೀವನ ನಡೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಈ ಭಾಗ ಹೆಚ್ಚು ಅರಣ್ಯ ಪ್ರದೇಶ ಹೊಂದಿದೆ. ಮಳೆಯಿಂದ ಕಾಡು ಪ್ರಾಣಿಗಳಿಗೂ ಅನುಕೂಲವಾಗಿದೆ.- ರಮೇಶ್ , ರೈತರು, ಕೆಂಪಯ್ಯನ ದೊಡ್ಡಿ ಗ್ರಾಮ