ಕೊಪ್ಪಳ: ಸಮುದಾಯಗಳಲ್ಲಿ ಮಕ್ಕಳ ಹಕ್ಕು ಮತ್ತು ವಿವಿಧ ಕಾನೂನುಗಳ ಕುರಿತು ಜಾಗೃತಿ ಮೂಡಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ.ರಾಮತ್ನಾಳ ಹೇಳಿದರು.
ಭಾರತವು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಡಿ.11ರ 1992 ರಂದು ಅನುಮೋದಿಸಿದ್ದು, ಈ ಒಡಂಬಡಿಕೆಯ ಪರಿಚ್ಛೇದ 23 ರನ್ವಯ ಯಾವುದೇ ರೀತಿಯ ವಿಶೇಷ ಪೋಷಣೆ ಅವಶ್ಯವಿರುವ ಮಕ್ಕಳು, ತಮ್ಮ ಜೀವನ ಸಂಪೂರ್ಣವಾಗಿ ಮತ್ತು ಸ್ವತಂತ್ರವಾಗಿ ನಡೆಸಲು ಹಾಗೂ ಅನುಭವಿಸುವಂತಹ ವಾತಾವರಣ ಕಲ್ಪಿಸಲು ಅವರಿಗೆ ವಿಶೇಷ ಪೋಷಣೆ ಮತ್ತು ಬೆಂಬಲ ಒದಗಿಸಬೇಕೆಂದು ತಿಳಿಸುತ್ತದೆ. ನಮ್ಮ ಸಂವಿಧಾನ ಮತ್ತು ವಿವಿಧ ಕಾನೂನುಗಳಲ್ಲಿಯೂ ಇಂತಹ ಮಕ್ಕಳಿಗೆ ವಿಶೇಷ ಅವಕಾಶ ಮತ್ತು ರಕ್ಷಣೆ ಒದಗಿಸಿದೆ. ಭಾರತ ಸಂವಿಧಾನದ ಪರಿಚ್ಛೇದ 21(ಎ) ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ರನ್ವಯ ವಿಶೇಷ ಪೋಷಣೆ ಅವಶ್ಯವಿರುವ ಮಕ್ಕಳಿಗೂ ಸಹ ಶಿಕ್ಷಣದ ಹಕ್ಕನ್ನು ಖಾತ್ರಿ ಪಡಿಸಲು ಸಮಗ್ರ ಶಿಕ್ಷಾ ಅಭಿಯಾನದನ್ವಯ ವಿಶೇಷ ಶಿಕ್ಷಣ, ವಿಶೇಷ ಸಾಧನ ಮತ್ತು ವಿದ್ಯಾ ಸಲಕರಣೆ, ಮನೆ ಪಾಠದ ಮೂಲಕ ಶಿಕ್ಷಣ ಹಕ್ಕನ್ನು ಖಾತ್ರಿಪಡಿಸಿದೆ ಎಂದರು.
ಕೊಪ್ಪಳ ಪೊಲೀಸ್ ಉಪಾಧೀಕ್ಷಕರು ಹಾಗೂ ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮುತ್ತಣ್ಣ ಸರವಗೋಳ ಮಾತನಾಡಿದರು.ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರಕಾಶ ಕಡಗದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಅಧ್ಯಕ್ಷತೆವಹಿಸಿದ್ದರು.
ಕೊಪ್ಪಳ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ.ರಾಘವೇಂದ್ರ ಭಟ್ ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ವ್ಯವಸ್ಥಾಪಕ ಹರೀಶ ಜೋಗಿ ಅವರು ಮಕ್ಕಳ ಸಂಬಂಧಿತ ವಿವಿಧ ಕಾನೂನುಗಳ ಕುರಿತು ತರಬೇತಿ ನೀಡಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಪ್ರಸ್ತಾವಿಕವಾಗಿ ಮಾತನಾಡಿದರು, ಪ್ರತಿಭಾ ನಿರೂಪಿಸಿದರು, ಜಿಲ್ಲಾ ರವಿ ಬಡಿಗೇರ ಸ್ವಾಗತಿಸಿದರು. ದೇವರಾಜ ತಿಲಗರ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ವಿಕಲಚೇತನರ ವಿವಿದೊದ್ಧೇಶ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಭಾಗವಹಿಸಿದ್ದರು.