ಕರ್ನಾಟಕದಲ್ಲಿ ಕನ್ನಡ ಅನಾಥ ಮಾಡದೇ ಜಾಗೃತಿ ವಹಿಸಿ

KannadaprabhaNewsNetwork |  
Published : Jun 29, 2024, 12:31 AM ISTUpdated : Jun 29, 2024, 10:28 AM IST
ವೀರಸೌಧಾಮಿನಿ ಚಿತ್ರ ಸಂಪುಟ ಬಿಡುಗಡೆ | Kannada Prabha

ಸಾರಾಂಶ

ಕರ್ನಾಟಕದಲ್ಲಿ ಕನ್ನಡ ಅನಾಥವಾಗಬಾರದು. ಕನ್ನಡಿಗರು ಜಾಗೃತರಾಗಬೇಕು. ಬಸವಾದಿ ಶರಣರು, ದಾಸರು, ದಾರ್ಶನಿಕರು ಕಟ್ಟಿ ಬೆಳೆಸಿದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರದ್ದಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ್ ಬಿಳಿಮಲೆ ತಿಳಿಸಿದರು.

 ತುಮಕೂರು :  ಕರ್ನಾಟಕದಲ್ಲಿ ಕನ್ನಡ ಅನಾಥವಾಗಬಾರದು. ಕನ್ನಡಿಗರು ಜಾಗೃತರಾಗಬೇಕು. ಬಸವಾದಿ ಶರಣರು, ದಾಸರು, ದಾರ್ಶನಿಕರು ಕಟ್ಟಿ ಬೆಳೆಸಿದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರದ್ದಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ್ ಬಿಳಿಮಲೆ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ವೀರ ಸೌಧಾಮಿನಿ ಚಿತ್ರ ಸಂಪುಟ ಬಿಡುಗಡೆಗೊಳಿಸಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.ಸ್ಥಳೀಯ ಮಟ್ಟದಲ್ಲಿ ಕನ್ನಡವನ್ನು ಉಳಿಸುವ ಕೆಲಸವಾಗಬೇಕು. ಕನಿಷ್ಠ ಐದನೆಯ ತರಗತಿವರೆಗಾದರೂ ಕನ್ನಡ ಭಾಷೆ ಮಾಧ್ಯಮದ ಭಾಷೆಯಾಗಬೇಕು. 

ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಕಲಿಸಿ, ಆದರೆ ಮಾಧ್ಯಮ ಕನ್ನಡವೇ ಆಗಿರಲಿ. ಕನ್ನಡ ಭಾಷೆಯ ಕಲಿಕೆಗೆ ಹಾಗೂ ಉಳಿಯುವಿಕೆಗೆ ಪೋಷಕರ ಪಾತ್ರವೇ ಬಹಳ ಮುಖ್ಯವಾಗಿದೆ. ನಮ್ಮ ಸ್ಥಳೀಯ ನೆಲೆಗಳಲ್ಲಿ ಸ್ಥಳನಾಮಗಳನ್ನು ಮೂಲ ರೂಪದಲ್ಲಿಯೇ ಉಳಿಸಿಕೊಳ್ಳಬೇಕು. ಇದನ್ನು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೂ ಆಂದೋಲನದ ರೀತಿಯಲ್ಲಿ ರೂಪಿಸಬೇಕು. ಅದಕ್ಕೆ ಸ್ಥಳೀಯರು ಕೈಜೋಡಿಸಬೇಕು ಎಂದು ತಿಳಿಸಿದರು.

 ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಕಿತ್ತೂರು ಸಂಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ರಾಣಿ ಚನ್ನಮ್ಮ ಕನ್ನಡ ನಾಡಿನ ವೀರಮಹಿಳೆ. ಬ್ರಿಟೀಷರ ವಿರುದ್ಧ ಹೋರಾಡುವುದರ ಮೂಲಕ ಹೆಣ್ಣುಮಕ್ಕಳಿಗೆ ಆದರ್ಶಪ್ರಿಯರಾಗಿದ್ದ ಇಂತಹ ವೀರ ಮಹಿಳೆಯ ಜೀವನ ಸಾಧನೆಗಳನ್ನು ಚಿತ್ರ ಸಂಪುಟದಲ್ಲಿ ಹಿಡಿದಿಟ್ಟಿರುವ ಸಂತೋಷ ಹಾನಗಲ್‌ರವರ ಪ್ರಯತ್ನ ಸಾರ್ಥಕವಾಗಿದೆ. 

ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.ವೀರ ಸೌಧಾಮಿನಿ ಕೃತಿ ಕುರಿತು ಲೇಖಕಿ ಹಾಗೂ ಪತ್ರಕರ್ತೆ ಭಾರತಿ ಹೆಗಡೆ ಮಾತನಾಡಿ, ಚಿತ್ರ ಸಂಪುಟ ಗತಕಾಲದ ಘಟನೆಗಳನ್ನು ನೆನಪಿಗೆ ತರುವುದರ ಜೊತೆಗೆ ಯುದ್ಧದಲ್ಲಿ ಭಾಗಿಯಾಗಿದ್ದ ಚನ್ನಮ್ಮನವರ ಶರ್ಯು-ಸಾಹಸಗಳು ಮಕ್ಕಳಿಗೆ ಆದರ್ಶವಾಗಬೇಕೆಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕಾದರೆ ಕನ್ನಡ ಶಾಲೆಗಳು ಉಳಿದು ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಥಿಗಳು ಕಲಿಯಬೇಕು. ರಾಜ್ಯದಲ್ಲಿರುವ ಕನ್ನಡ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಶಿಷ್ಯವೇತನ ನೀಡಬೇಕೆಂದು ಆಗ್ರಹಿಸಿ.

 ಜಿಲ್ಲೆಯಲ್ಲಿ ಈ ವರ್ಷ 1000 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯಾಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಸನ್ಮಾನಿಸಲಾಗುತ್ತದೆ ಎಂದರು.ಸಮಾರಂಭದಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್, ಅನನ್ಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಉಮೇಶ್‌ ಮಾತನಾಡಿದರು. ಎಸ್.ಎಸ್.ಎಲ್.ಸಿ.ಯಲ್ಲಿ ನೂರು ಫಲಿತಾಂಶ ಬಂದ ಶಾಲೆಗಳಿಗೆ ಹಾಗೂ ಕನ್ನಡ ವಿಷಯದಲ್ಲಿ ಶೇ. 100 ಅಂಕ ಪಡೆದ ಮಕ್ಕಳನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ಸ್ವಾಗತಿಸಿದರು. ತಾಲ್ಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ವಂದಿಸಿದರು. ಸಂಚಾಲಕ ಕೆ.ಎಸ್.ಉಮಾಮಹೇಶ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ