ಹಾವು ಕಡಿತದಿಂದಾಗುವ ಜೀವ ಹಾನಿ ತಡೆಗೆ ಜಾಗೃತಿ ಮೂಡಿಸಿ: ಡಾ. ಸುರೇಶ ಇಟ್ನಾಳ

KannadaprabhaNewsNetwork |  
Published : Feb 27, 2026, 02:45 AM IST
ಕೊಪ್ಪಳ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮಾತನಾಡಿದರು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಕುರಿತು ಚರ್ಚಿಸಲು ಇತ್ತೀಚೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ನೇತೃತ್ವದಲ್ಲಿ ಸಭೆ ನಡೆಯಿತು.

ಕೊಪ್ಪಳ: ಹಾವು ಕಡಿತದಿಂದ ಉಂಟಾಗುವ ಜೀವ ಹಾನಿ ತಡೆಗಟ್ಟಲು ಸಾರ್ವಜನಿಕರಿಗೆ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಕುರಿತು ಚರ್ಚಿಸಲು ಇತ್ತೀಚೆಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೈನುಗಾರಿಕೆ, ಕೃಷಿ ಕುಲಕಸುಬುಗಳಲ್ಲಿ ತೊಡಗಿರುವ ರೈತರು ಮತ್ತು ಗ್ರಾಮೀಣ ಭಾಗದ ಜನರಿಗೆ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣಗಳ ಕುರಿತು ಅರಿವು ಮೂಡಸಬೇಕು ಎಂದರು.

ಮನೆಗಳ ಸುತ್ತ ಮುತ್ತಲಿನ ತಾಣಗಳಲ್ಲಿ ಕಸದ ರಾಶಿ ಇದ್ದರೆ ಅದು ಹೆಚ್ಚು ಹಾವುಗಳನ್ನು ಆಕರ್ಷಿಸುತ್ತದೆ. ಗಿಡಗಂಟೆಗಳು ತುಂಬಿದ ದಾರಿ ಹಾವು ಕಡಿತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾರ್ವಜನಿಕರು ತಮ್ಮ ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾವು ಕಡಿತಕ್ಕೆ ಉಚಿತವಾಗಿ ಚಿಕಿತ್ಸೆ ಲಭ್ಯವಿದ್ದು, ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ 24*7 ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನಂದಕುಮಾರ್ ಮಾತನಾಡಿ, ರಾತ್ರಿ ಎತ್ತರ ಸ್ಥಳಗಳಲ್ಲಿ ಮಲಗುವುದು ಸೂಕ್ತ. ಬೆಳಕಿಲ್ಲದೇ ಬರಿಗಾಲಲ್ಲಿ ನಡೆಯಬಾರದು. ಸ್ವಚ್ಛ ವಾಗಿರದ ಹೊಲ-ಗದ್ದೆಗಳಲ್ಲಿ ನಡೆದಾಡುವುದು ಅಪಾಯಕಾರಿ. ಸೌದೆಗಳ ಕಟ್ಟನ್ನು ಪರಿಶೀಲಿಸದೇ ಎತ್ತುವುದು ಅಪಾಯಕಾರಿ. ರಾತ್ರಿ ಸಮಯದಲ್ಲಿ ಓಡಾಡುವಾಗ ಟಾರ್ಚ್‌ ಉಪಯೋಗಿಸಬೇಕು. ಮಲಗುವಾಗ ಸೊಳ್ಳೆ ಪರದೆ ಉಪಯೋಗಿಸುವುದು ಹೆಚ್ಚು ಸುರಕ್ಷಿತ. ರೈತರು ಹಾವಿನ ಕಡಿತದಿಂದ ರಕ್ಷಿಸಿಕೊಳ್ಳಲು ಗಮ್ ಪೂನ್ (ರಬ್ಬರ ಬೂಟ್) ಉಪಯೋಗಿಸಬೇಕು. ಹೊಲ-ಗದ್ದೆಗಳನ್ನು ಕಳೆಗಳಿಂದ ಸ್ವಚ್ಛವಾಗಿರಿಸಬೇಕು. ಜಿಲ್ಲೆಯ ಎಲ್ಲ ಸಾರ್ವಜನಿಕರು ಮತ್ತು ವಿಶೇಷವಾಗಿ ರೈತರು ಈ ಎಲ್ಲ ಸುರಕ್ಷಿತಾ ಕ್ರಮಗಳನ್ನು ಅನುಸರಿಸುವ ಮೂಲಕ ಹಾವು ಕಡಿತ ತಡೆಗಟ್ಟಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು, ಆರ್‌ಸಿಎಚ್‌ ಅಧಿಕಾರಿ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಕಾಶ ವಿ., ಆರೋಗ್ಯ ಇಲಾಖೆಯ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವಿಂದ್ರನಾಥ ಎಂ.ಎಚ್., ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಎಚ್. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಶಿವಾಜಿ ಜಯಂತ್ಯುತ್ಸವ ಪ್ರಯುಕ್ತ ಬೃಹತ್ ಮೆರವಣಿಗೆ
ಫೆ. 28ಕ್ಕೆಶೈಕ್ಷಣಿಕ ಸಮ್ಮೇಳನ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ