ಕನ್ನಡಪ್ರಭ ವಾರ್ತೆ ಸುರಪುರ
ಡೆಂಘೀ ಜ್ವರ ಹರಡದಂತೆ ತಡೆಯಲು ಪ್ರತಿಯೊಂದು ಇಲಾಖೆಯೂ ಮುಂಜಾಗೃತೆ ಕ್ರಮ ವಹಿಸಿ, ಜನರ ಆರೋಗ್ಯ ಕಾಪಾಡಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.ನಗರದ ಕನ್ಯಾ ದರಬಾರಿ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ, ತಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡೆಂಘೀ ವಿರೋಧಿ ಮಾಸಾಚರಣೆ ಮತ್ತು ಪ್ರತಿ ಶುಕ್ರವಾರ ಲಾರ್ವ ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ತಮ್ಮ ಮನೆಯಂತೆ ಹೊರಗಡೆಯೂ ಸ್ವಚ್ಛತೆ ಇಟ್ಟು ಕೊಳ್ಳಬೇಕು ಎಂದರು.
ಒಣ ಮತ್ತು ಹಸಿ ಕಸವನ್ನು ರಸ್ತೆ, ಚರಂಡಿಗಳಿಗೆ ಬಿಸಾಡದೆ ಒಂದೆಡೆ ಹಾಕಿದರೆ ಸ್ಥಳೀಯ ಸಂಸ್ಥೆಗಳು ಕೊಂಡೊಯ್ಯುತ್ತವೆ. ಕಸಮುಕ್ತ ತಾಲೂಕಾಗಿಸಿ ರೋಗಗಳಿಂದ ಸಂರಕ್ಷಿಸಬಹುದು. ಸ್ವಚ್ಛತೆಯ ಕಾನೂನುಗಳನ್ನು ತಪ್ಪದೇ ಪಾಲಿಸಿದಾಗ ಸ್ವಚ್ಛಂದವಾಗಿರಲು ಸಾಧ್ಯ. ಜನರಿಗೆ ಜ್ವರ ಬಂದಾಗ ಕೇವಲ ಮಾತ್ರೆಗೆ ಮೊರೆ ಹೋಗದೆ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ಕಾಯಿಲೆಗಳನ್ನು ಮರೆ ಮಾಚದೆ ಕೆಲಸ ಮಾಡದೆ ವೈದ್ಯರಿಗೆ ಹೇಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.ಒಂದು ಮತಕ್ಷೇತ್ರದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಎಂಬ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾನೆ. ಆದ್ದರಿಂದ ಅವಳಿ ತಾಲೂಕಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದಾಗ ಸರಕಾರ ಮತ್ತು ಖಾಸಗಿ ಉದ್ಯೋಗ ಮಾಡಿದರೆ ತನ್ನಿಂದ ತಾನೇ ಅಭಿವೃದ್ಧಿ ಹೊಂದುತ್ತದೆ. ನಮ್ಮ ತಂದೆಯ ಕನಸಿನಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿ, ಡೆಂಘೀ ಜ್ವರ ಬಂದಾಗ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಈ ರೋಗದ ಚಿಕಿತ್ಸೆಗೆ ನಿರ್ದಿಷ್ಟವಾದ ಔಷಧವಿಲ್ಲ. ಆದ್ದರಿಂದ ಈ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ತಾಲೂಕು ಪಂಚಾಯತ್ ಅಧಿಕಾರಿ ಬಸವರಾಜ ಸಜ್ಜನ್ ಮಾತನಾಡಿ, ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಯಾವುದೇ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅಲ್ಲದೆ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಹಿರಿಯ ಮುಖಂಡ ತಹಸೀಲ್ದಾರ್ ಕೆ. ವಿಜಯಕುಮಾರ, ಬಿಇಒ ಯಲ್ಲಪ್ಪ ಕಾಡ್ಲೂರ, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಾ, ನಲ್ಮದ ಅಧಿಕಾರಿ ದುರ್ಗಪ್ಪ ನಾಯಕ, ಸೋಮರೆಡ್ಡಿ ಮಂಗಿಹಾಳ, ಶ್ರೀಶೈಲ ಯಂಕಂಚಿ ಸೇರಿದಂತೆ ಇತರರಿದ್ದರು.