ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಬೆಳೆಸಿ: ಡಾ.ಮಂಜುನಾಥ್

KannadaprabhaNewsNetwork |  
Published : Jun 24, 2026, 01:45 AM IST
ಪೊಟೋ೨೩ಸಿಪಿಟಿ೨: ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮರೀಗೌಡ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ೧೦ಸಾವಿರ ರೂ. ಚೆಕ್ ನೀಡಿ ಪ್ರೋತ್ಸಾಹಿಸಲಾಯಿತು. | Kannada Prabha

ಸಾರಾಂಶ

ಚನ್ನಪಟ್ಟಣ: ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.೨೫ರಷ್ಟಿದ್ದ ಸಾಕ್ಷರತೆ ಇಂದು ಶೇ.೮೫ ರಿಂದ ೯೦ಕ್ಕೇರಿಕೆಯಾಗಿದೆ. ಅಂದು ಸಾಕ್ಷರತೆ ಕಡಿಮೆಯಿದ್ದರೂ ಸಂಸ್ಕಾರ ಹೆಚ್ಚಿತ್ತು, ಇಂದು ಸಾಕ್ಷರತೆ ಪ್ರಮಾಣ ಹೆಚ್ಚಿದ್ದರೂ ಸಂಸ್ಕಾರ ಕಡಿಮೆಯಾಗಿದೆ. ಸಾಕ್ಷರತೆ ಜತೆಗೆ ಸಂಸ್ಕಾರವನ್ನೂ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು

ಚನ್ನಪಟ್ಟಣ: ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.೨೫ರಷ್ಟಿದ್ದ ಸಾಕ್ಷರತೆ ಇಂದು ಶೇ.೮೫ ರಿಂದ ೯೦ಕ್ಕೇರಿಕೆಯಾಗಿದೆ. ಅಂದು ಸಾಕ್ಷರತೆ ಕಡಿಮೆಯಿದ್ದರೂ ಸಂಸ್ಕಾರ ಹೆಚ್ಚಿತ್ತು, ಇಂದು ಸಾಕ್ಷರತೆ ಪ್ರಮಾಣ ಹೆಚ್ಚಿದ್ದರೂ ಸಂಸ್ಕಾರ ಕಡಿಮೆಯಾಗಿದೆ. ಸಾಕ್ಷರತೆ ಜತೆಗೆ ಸಂಸ್ಕಾರವನ್ನೂ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮರೀಗೌಡ ಚಾರಿಟಬಲ್ ಟ್ರಸ್ಟ್ ಶಿಕ್ಷಣ ಸಂಜೀವಿನಿ ಹೆಸರಿನಲ್ಲಿ ತಾಲೂಕಿನ ಸರ್ಕಾರಿ ಶಾಲೆಯ ೧೮ ಸಾವಿರ ಮಕ್ಕಳಿಗೆ ಶಾಲಾಬ್ಯಾಗ್, ನೋಟ್‌ಬುಕ್ ಹಾಗೂ ಇತರೆ ಶಿಕ್ಷಣ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಹಾಗೂ ಗಣಕೀಕರಣದ ಈ ಯುಗದಲ್ಲಿ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ಬಳಕೆ ಅನಿವಾರ್ಯವಾದರೂ, ಪುಸ್ತಕದಲ್ಲಿ ಬರೆದು ಕಲಿಯುವುದಕ್ಕೆ ತನ್ನದೇ ಆದ ಮಹತ್ವವಿದೆ. ಜಪಾನ್‌ನಲ್ಲಿ ನಡೆದಿರುವ ಸಂಶೋಧನೆಗಳ ಪ್ರಕಾರ, ಕಂಪ್ಯೂಟರ್‌ನಲ್ಲಿ ಕಲಿಯುವುದಕ್ಕಿಂತ ಪುಸ್ತಕದಲ್ಲಿ ಸ್ವತಃ ಕೈಯಾರೆ ಬರೆದು ಕಲಿತಾಗ ಅದು ಮೆದುಳಿನ ''''''''ಹಿಪ್ಪೋಕ್ಯಾಂಪಸ್'''''''' ಭಾಗದಲ್ಲಿ ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುತ್ತದೆ. ಹೀಗಾಗಿ ಮಕ್ಕಳಿಗೆ ನೋಟ್‌ಬುಕ್ ವಿತರಿಸಿರುವುದು ಸಮಂಜಸ ಎಂದು ಅಭಿಪ್ರಾಯಪಟ್ಟರು.

ಮನಸ್ಸಿಟ್ಟು ಕಲಿತ ಅಕ್ಷರ, ಬೆವರು ಸುರಿಸಿ ದುಡಿದ ಅನ್ನ, ಭಕ್ತಿಯಿಂದ ಮಾಡಿದ ಪೂಜೆ ವ್ಯರ್ಥವಾಗುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಓದಿದವರು ಸಾಕಷ್ಟು ಉತ್ತಮ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ಸಾಮಾನ್ಯ ಜ್ಞಾನ ಜಾಸ್ತಿ ಇರುತ್ತದೆ. ಅವರು ಹಾರುವ ಪಕ್ಷಿಗಳಾಗಿರುತ್ತಾರೆ. ಆದರೆ, ಖಾಸಗಿ ಶಾಲೆಯಲ್ಲಿ ಓದಿದ ಮಕ್ಕಳು ಪಂಜರದ ಗಿಳಿಗಳಾಗಿರುತ್ತಾರೆ. ಇಂದು ಸರ್ಕಾರಿ ಶಾಲೆಗಳಲ್ಲೂ ಶೇ.೧೦೦ ಫಲಿತಾಂಶ ಬರುತ್ತಿದೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳಲ್ಲಿ ಪ್ರತಿಭೆ ಇದ್ದರೆ ಸಾಲದು, ಉತ್ತಮ ಸಂಸ್ಕಾರ ಕಲಿಯಬೇಕು. ಪ್ರತಿಭಾವಂತರು ಉತ್ತಮ ಮಾರ್ಗದಲ್ಲಿ ನಡೆಯಬೇಕು. ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಯಬೇಕು. ಮರೀಗೌಡ ಚಾರಿಟಬಲ್ ಅಧ್ಯಕ್ಷ ಎಚ್.ಎಂ.ನಾಗೇಶ್ ಸರ್ಕಾರಿ ಶಾಲೆ ಮಕ್ಕಳಿಗೆ ಅಗತ್ಯ ಪರಿಕರ ವಿತರಿಸುತ್ತಿರುವುದು ಉತ್ತಮ ಕಾರ್ಯ. ಅವರ ಈ ಸೇವಾ ಕಾರ್ಯ ಹೀಗೆ ಮುಂದುವರಿಯಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲ ಮಕ್ಕಳಿಗೆ ಶಾಲಾಬ್ಯಾಗ್, ಪುಸ್ತಕ ಮತ್ತು ಪರಿಕರ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ೧೦ಸಾವಿರ ರು. ಚೆಕ್ ನೀಡಿ ಪ್ರೋತ್ಸಾಹಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯ ಶಿಕ್ಷಕರನ್ನು ಗೌರವಿಸಲಾಯಿತು.

ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಆರ್ಶಿವಚನ ನೀಡಿದರು. ಬಸವನಗುಡಿ ಶಾಸಕ ರವಿಸುಬ್ರಮಣ್ಯ, ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮಿ, ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯ ಕ್ಷೇತ್ರದ ಧರ್ಮಾಧಿಕಾರಿ ಮಲ್ಲೇಶ್ ಗುರೂಜಿ, ಮರೀಗೌಡ ಚಾರಿಟಬಲ್ ಅಧ್ಯಕ್ಷ ಎಚ್.ಎಂ.ನಾಗೇಶ್, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡ, ರೈತ ಮುಖಂಡ ಸಿ.ಪುಟ್ಟಸ್ವಾಮಿ ಇತರರು ಉಪಸ್ಥಿತರಿದ್ದರು.

ಪೊಟೋ೨೩ಸಿಪಿಟಿ೨:

ಚನ್ನಪಟ್ಟಣದಲ್ಲಿ ಮರೀಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ೧೦ ಸಾವಿರ ರು. ಚೆಕ್ ನೀಡಿ ಗೌರವಿಸಿದರು. ಸಂಸದ ಡಾ.ಮಂಜುನಾಥ್, ನಿರ್ಮಲಾನಂದನಾಥ ಸ್ವಾಮಿ, ನಂಜಾವದೂತ ಸ್ವಾಮಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವಕರ್ಮರೇ ಸರ್ಕಾರದ ಸೌಲಭ್ಯ ಕೇಳಿ ಪಡೆಯಬೇಕು: ಎನ್.ಬಸವರಾಜು
ಭಾರತ ಸಂಸ್ಕೃತಿಯ ದಾಂಪತ್ಯ ವಿಶ್ವಕ್ಕೇ ಮಾದರಿ: ವಿನಯ್‌ಕುಮಾರ್