ಕೋರ್ಟ್‌ ತೀರ್ಪಿನಂತೆ ಆಲಮಟ್ಟಿ ಡ್ಯಾಂ ಗೇಟ್‌ ಎತ್ತರಿಸಿ : ರಾಜ್ಯ ರೈತ ಸಂಘ

KannadaprabhaNewsNetwork |  
Published : May 30, 2025, 12:45 AM ISTUpdated : May 30, 2025, 12:40 PM IST
ವಿಜಯಪುರದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ಕರ್ನಾಟಕ ಸರ್ಕಾರವು ಮಹಾರಾಷ್ಟ್ರದ ಒತ್ತಡಕ್ಕೆ ಮಣಿಯದೆ ಉತ್ತರ ಕರ್ನಾಟಕದ ರೈತರ ಹಿತ ಕಾಪಾಡಲು ತೀರ್ಪಿನಂತೆ ಕ್ರಮ ಕೈಗೊಳ್ಳಬೇಕು.

 ವಿಜಯಪುರ : ಲಾಲ್‌ ಬಹದ್ದೂರ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ ಮೀ. ಎತ್ತರಿಸಲು ಗೇಟ್ ಅಳುವಡಿಸುವುದು ಹಾಗೂ ಮಹಾರಾಷ್ಟ್ರ ಸರ್ಕಾರದ ಹೋರಾಟಕ್ಕೆ ಸೊಪ್ಪು ಹಾಕದೆ ನ್ಯಾಯಾಲಯದ ತೀರ್ಪಿನಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನಾ ರ್‍ಯಾಲಿ ನಡೆಸಿದರು.

ನೂರಾರು ರೈತರು ಡಾ.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಅಲ್ಲಿಂದ ಬೃಹತ್ ಮೆರವಣಿಗೆ ಹೊರಟು ಮಹಾರಾಷ್ಟ್ರ ಸರ್ಕಾರದ ವಿರುದ್ಧ ದಾರಿಯುದ್ದಕ್ಕೂ ಘೋಷಣೆ ಕೂಗುತ್ತ ಆಕ್ರೋಶ ಹೊರಹಾಕಿದರು. ನಂತರ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನೀರು ನಿಲ್ಲಿಸದಂತೆ ಮಹಾರಾಷ್ಟ್ರ ಸರ್ಕಾರ ಅಲ್ಲಿಯ ರೈತರನ್ನು ಎತ್ತಿಕಟ್ಟಿ, ಅಲ್ಲಿಯ ಶಾಸಕರು, ಸಚಿವರು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದನ್ನು ವಿಜಯಪುರ- ಬಾಗಲಕೋಟ ಅವಳಿ ಜಿಲ್ಲೆ ರೈತರು ಬಲವಾಗಿ ಖಂಡಿಸುತ್ತೇವೆ ಎಂದರು.

ಮಹಾರಾಷ್ಟ್ರ ಸರ್ಕಾರ ದುರುದ್ದೇಶದಿಂದ ಉತ್ತರ ಕರ್ನಾಟಕ ರೈತರನ್ನು ಬಲಿ ತೆಗೆದುಕೊಳ್ಳಲು ಹೊರಟಿದೆ. ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನಿಲ್ಲಿಸಿದರೆ ಮಹಾರಾಷ್ಟ್ರ ವ್ಯಾಪ್ತಿಯ ಸಾಂಗ್ಲಿ, ಸಾತಾರ, ಮಿರಜ ಕೊಲ್ಹಾಪೂರ ಸೇರಿದಂತೆ ಕೆಲವು ಜಿಲ್ಲೆಗಳು ಆಲಮಟ್ಟಿಯ ಹಿನ್ನೀರಿನಿಂದ ಪ್ರವಾಹಕ್ಕೆ ತುತ್ತಾಗುತ್ತವೆ ಎಂದು ತಪ್ಪು ತಿಳುವಳಿಕೆ ಇಂದಲೋ ಅಥವಾ ಉದ್ದೇಶ ಪೂರ್ವಕವಾಗಿಯೋ ಹೋರಾಟಕ್ಕಿಳಿದು ಉತ್ತರ ಕರ್ನಾಟಕದ ರೈತರ ವಿರೋಧಿ ಎಂಬುವುದನ್ನು ಸಾಬೀತು ಪಡಿಸಿದ್ದಾರೆ ಎಂದು ದೂರಿದರು.

ಈ ಹಿಂದೆ ೨೦೧೯ನೇ ಸಾಲಿನಲ್ಲಿ ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಪ್ರವಾಹ ಬಂದಾಗ ಆಲಮಟ್ಟಿ ಜಲಾಶಯದ ನೀರನ್ನು ೫೧೯.೬೦ಕ್ಕೆ ನೀರು ನಿಲ್ಲಿಸಿದಾಗ ಇದರಿಂದ್ದಲೇ ಪ್ರವಾಹ ಉಂಟಾಗಿದೆ ಎಂದು ಆರೋಪಿಸಿದ್ದರು. ಆಗ ಮಹಾರಾಷ್ಟ್ರ ಸರ್ಕಾರವೇ ಆಲಮಟ್ಟಿಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ತಂಡವನ್ನು ಕಳುಹಿಸಿತ್ತು. ಇಲ್ಲಿನ ಪರಿಸ್ಥಿತಿ ಅಧ್ಯಯನ ನಡೆಸಿದ ತಂಡವು ಮಹಾರಾಷ್ಟ್ರದಲ್ಲಿ ಪ್ರವಾಹ ಬಂದಿರುವುದು ಆಲಮಟ್ಟಿ ಡ್ಯಾಮ್‌ನಿಂದ ಅಲ್ಲ ಎಂಬುವುದನ್ನು ತಿಳಿಸಿದೆ ಎ₹ದು ಮಹಾರಾಷ್ಟ್ರ ಸರ್ಕಾರಕ್ಕೆ ಸ್ಪಷ್ಟ ವರದಿ ಕಳುಹಿಸಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಉದ್ದೇಶ ಪೂರ್ವಕವಾಗಿ ಅಲ್ಲಿಯ ರೈತರನ್ನು ಎತ್ತಿಕಟ್ಟಿ ಬೀದಿಗಿಳಿದು ಹೋರಾಟ ಮಾಡಿ ತಮ್ಮ ಬಂಡತನ ಪ್ರದರ್ಶಿಸುತ್ತಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಿಜಯ ಪೂಜಾರಿ ಮಾತನಾಡಿ, ಕರ್ನಾಟಕ ಸರ್ಕಾರವು ಮಹಾರಾಷ್ಟ್ರದ ಒತ್ತಡಕ್ಕೆ ಮಣಿಯದೆ ಉತ್ತರ ಕರ್ನಾಟಕದ ರೈತರ ಹಿತ ಕಾಪಾಡಲು ತೀರ್ಪಿನಂತೆ ಕ್ರಮ ಕೈಗೊಳ್ಳಬೇಕು. ೨೦೧೦ನೇ ಸಾಲಿನಲ್ಲಿ ನ್ಯಾ.ಬ್ರೀಜೇಶಕುಮಾರ ನೇತೃತ್ವದ ೨ನೇ ನ್ಯಾಯಾಧೀಕರಣವು ತೀರ್ಪು ನೀಡಿತು. ಮತ್ತೇ ೨೦೧೩ರಲ್ಲಿ ಅಂತಿಮ ತೀರ್ಪು ನೀಡಿ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನಿಲ್ಲಿಸಲು ಗೇಟ್ ಅಳವಡಿಸಲು ಸ್ಪಷ್ಟವಾದ ತೀರ್ಪು ನೀಡಿದೆ. ಆ ತೀರ್ಪಿನನ್ವಯ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಮಹಾರಾಷ್ಟ್ರ ಸರ್ಕಾರ ತೆಗೆದಿರುವ ಕ್ಯಾತೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಮಹಿಳಾ ಘಟಕದ ಸುಜಾತಾ ಬಂಡಿವಡ್ಡರ ಮಾತನಾಡಿ, ಮಹಾರಾಷ್ಟ್ರ ಸರ್ಕಾರ ಇಷ್ಟಕ್ಕೆ ಸುಮ್ಮನಿದ್ದರೆ ಸರಿ ಅಲ್ಲಿಯ ರೈತರನ್ನು ಎತ್ತಿಕಟ್ಟಿ, ಅಲ್ಲಿಯ ಸಚಿವರು, ಶಾಸಕರು ಹೋರಾಟ ಮುಂದುವರೆಸಿದರೆ ಉಗ್ರವಾದ ಹೋರಾಟಕ್ಕೆ ರೈತ ಮಹಿಳೆಯರು ಕೂಡಾ ಸನ್ನದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ವಿಠ್ಠಲ ಬಿರಾದಾರ, ಚಂದ್ರಾಮ ಹಿಪ್ಪಲಿ, ರಾಜೇಂದ್ರ ದೇಸಾಯಿ, ಹೊನಕೇರೆಪ್ಪ ತೆಲಗಿ, ಲಾಲಸಾಬ ಹಳ್ಳೂರ, ಶೆಟ್ಟೆಪ್ಪ ಲಮಾಣಿ, ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ನಾಗೇಶ ಪೂಜಾರಿ, ಅನೀತಾ ರಾಠೋಡ, ಸವಿತಾ ರಾಠೋಡ, ಸಾವಿತ್ರಿ ವಾಲಿಕಾರ, ಸಾಹಿನಾ ಇಂಡಿ, ಸುಶೀಲಾ ರಾಠೋಡ, ಬಸವರಾಜ ಜಂಗಮಶೆಟ್ಟಿ, ಗುರು ಕೋಟ್ಯಾಳ, ರಮೇಶ ಮುಂಡೆವಾಡಿ, ಮಲಿಗೆಪ್ಪಾ ಸಾಸನೂರ, ಗುರಲಿಂಗಪ್ಪ ಪಡಸಲಗಿ, ದಾವಲಸಾ ನಧಾಪ, ಶಶಿಕಲಾ ಬಡಿಗೇರ, ಸುಶೀಲಾ ಮಿಣಜಗಿ, ನೀಲಾಂಬಿಕಾ ಬಿರಾದಾರ, ಭಾಗಿರಥಿ ಗುಡದಿನ್ನಿ, ಜ್ಯೋತಿ ಕುಮಠಗಿ, ಬಸವರಾಜ ಬಾಗೇವಾಡಿ ಮುಂತಾದವರು ಇದ್ದರು.

PREV
Read more Articles on

Recommended Stories

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ
ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ