ವಿಶೇಷ ತರಗತಿ ನಡೆಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

KannadaprabhaNewsNetwork | Published : Sep 19, 2024 1:49 AM

ಸಾರಾಂಶ

ಕಷ್ಟಕರವಾದ ವಿಷಯಗಳಿಗೆ ವಿಶೇಷ ತರಗತಿ ನಡೆಸುವ ಮೂಲಕ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಅವರಿಗೆ ಡಿಸಿ ಲಕ್ಷ್ಮೀಪ್ರಿಯಾ ಸೂಚಿಸಿದರು.

ಮುಂಡಗೋಡ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಬುಧವಾರ ಪ್ರಥಮ ಬಾರಿಗೆ ಪಟ್ಟಣಕ್ಕೆ ಭೇಟಿ ನೀಡಿ ಪಟ್ಟಣದ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ವಿವಿಧ ಶಾಲೆಗಳ ಸ್ಥಿತಿಗತಿ ಪರಿಶೀಲಿಸಿದರು.

ಮೊದಲಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಿಕ್ಷಣ ಗುಣಮಟ್ಟದ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಯಾವ ವಿಷಯದಲ್ಲಿ ಮಕ್ಕಳು ದುರ್ಬಲವಾಗಿದ್ದಾರೆಂಬ ಮಾಹಿತಿ ಪಡೆದರು.

ಕಷ್ಟಕರವಾದ ವಿಷಯಗಳಿಗೆ ವಿಶೇಷ ತರಗತಿ ನಡೆಸುವ ಮೂಲಕ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಅವರಿಗೆ ಸೂಚಿಸಿದರು.

ಬಳಿಕ ೧೦ನೇ ತರಗತಿ ಕೊಠಡಿಗೆ ತೆರಳಿ ಮಕ್ಕಳ ಶಿಕ್ಷಣ ಗುಣಮಟ್ಟ ಪರೀಕ್ಷಿಸಿದರಲ್ಲದೇ ಮಕ್ಕಳಿಂದ ಪದ್ಯವನ್ನು ಹೇಳಿಸಿದರು. ಕೇವಲ ಉತ್ತೀರ್ಣರಾಗುವ ಉದ್ದೇಶ ಹೊಂದಿದರೆ ಸಾಲದು. ಬದಲಾಗಿ ಉತ್ತಮವಾಗಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಸಲಹೆ ನೀಡಿದರು.

ಬಳಿಕ ಅಕ್ಷರ ದಾಸೋಹ ಕೊಠಡಿಗೆ ತೆರಳಿ ಆಹಾರ ಧಾನ್ಯ ಮತ್ತು ಹಾಲಿನ ಪುಡಿ ಗುಣಮಟ್ಟವನ್ನು ಪರಿಶೀಲಿಸಿದರಲ್ಲದೇ ಶಾಲಾ ಮಕ್ಕಳಿಗಾಗಿ ತಯಾರಿಸಲಾದ ಬಿಸಿಯೂಟ ಪರಿಶೀಲಿಸಿ ನಿತ್ಯ ಮಕ್ಕಳಿಗೆ ಏನೇನು ಊಟ ನೀಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.

ಸರ್ಕಾರಿ ಆಸ್ಪತ್ರೆಗೆ ಭೇಟಿ: ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಸ್ಥಿತಿಯ ಬಗ್ಗೆ ಪರಿಶೀಲಿಸಿ ಅಲ್ಲಿಯ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಬಡರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಪೌರ ಕಾರ್ಮಿಕರನ್ನು ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿ ಕುಂದುಕೊರತೆ ಆಲಿಸಿದರು.

ಈ ಸಂದರ್ಭದಲ್ಲಿ ಶಿರಸಿ ಸಹಾಯಕ ಆಯುಕ್ತರಾದ ಕಾವ್ಯಾ ರಾಣಿ, ಮುಂಡಗೋಡ ತಹಸೀಲ್ದಾರ್‌ ಶಂಕರ ಗೌಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಮುಂತಾದವರು ಉಪಸ್ಥಿತರಿದ್ದರು.

ಫೋಷಣ ಅಭಿಯಾನಕ್ಕೆ ಚಾಲನೆ

ಮುಂಡಗೋಡ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಫೋಷಣ ಅಭಿಯಾನ ಯೋಜನೆ ಅಡಿಯಲ್ಲಿ ಫೋಷಣ ಮಾಸಾಚರಣೆ, ಅಂಗನವಾಡಿ ಕಾರ್ಯಕರ್ತಯರಿಗೆ ಅಡುಗೆ ಮಾಡುವ ಸ್ಪರ್ಧೆ, ೬ ತಿಂಗಳ ಮಕ್ಕಳಿಗೆ ಅನ್ನಪ್ರಾಶನ ಹಾಗೂ ಮಿಷನ್ ಶಕ್ತಿ ಯೋಜನೆಯಡಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಬುಧವಾರ ಪಟ್ಟಣದ ಹಳೂರ ಬಡಾವಣೆಯ ನಂ೨ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿರಸಿ ಸಹಾಯಕ ಆಯುಕ್ತರಾದ ಕಾವ್ಯಾ ರಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಮು ಬಯಲುಸೀಮೆ, ಮುಂಡಗೋಡ ತಹಸೀಲ್ದಾರ್ ಶಂಕರ ಗೌಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಮುಂತಾದವರು ಉಪಸ್ಥಿತರಿದ್ದರು.

Share this article