ಸಂತ್ರಸ್ತ ಮಹಿಳೆಯರ ಪರ ಧ್ವನಿ ಎತ್ತಿ

KannadaprabhaNewsNetwork |  
Published : Apr 30, 2024, 02:18 AM IST
ಅಅಅ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ: ಹಾಸನದ ಸಂಸದ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕರ್ಮಕಾಂಡಕ್ಕೆ ನೂರಾರು ಅಮಾಯಕ ಮಹಿಳೆಯರು ಬಲಿಯಾಗಿದ್ದರೂ ಯಾವೊಬ್ಬ ಬಿಜೆಪಿಯವರು ಖಂಡಿಸುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಹಾಸನದ ಸಂಸದ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕರ್ಮಕಾಂಡಕ್ಕೆ ನೂರಾರು ಅಮಾಯಕ ಮಹಿಳೆಯರು ಬಲಿಯಾಗಿದ್ದರೂ ಯಾವೊಬ್ಬ ಬಿಜೆಪಿಯವರು ಖಂಡಿಸುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶವೇ ತಲೆ ತಗ್ಗಿಸುವಂಥ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ನಾಯಕರು ಮೌನ ವಹಿಸಿರುವುದು ಏಕೆ? ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಭಾರೀ ಆಸಕ್ತಿ ತೋರಿಸಿದ್ದ ಮಾಜಿ ಸಿಎಂ, ಬಿಜೆಪಿ ಬೆಳಗಾವಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರೇ ಈಗಲೂ ಸಂತ್ರಸ್ತ ಮಹಿಳೆಯರ ಪರ ಧ್ವನಿ ಎತ್ತಿ ಎಂದು ಕುಟುಕಿದರು.

ಮಹಿಳೆಯರಿಗೆ ಎಲ್ಲೇ ಅನ್ಯಾಯವಾದರೂ ನಾವು ಖಂಡಿಸುತ್ತೇವೆ. ಅವರ ಪರವಾಗಿ ನಿಲ್ಲುತ್ತೇವೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅದರಲ್ಲಿ ರಾಜಕೀಯ ಬೆರೆಸಲು ನಾವು ಹೋಗುವುದಿಲ್ಲ. ಆದರೆ, ಹುಬ್ಬಳ್ಳಿ ಪ್ರಕರಣದಲ್ಲಿ ಅತೀವ ಆಸಕ್ತಿ ತೋರಿಸಿದ್ದ ಬಿಜೆಪಿ ನಾಯಕರು ಈಗೇಕೆ ಮೌನವಾಗಿದ್ದಾರೆ. ಇಲ್ಲೂ ನೂರಾರು ಮಹಿಳೆಯರಿಗೆ ಅನ್ಯಾಯವಾಗಿದೆಯಲ್ಲವೇ? ಈಗಲೂ ಸಂಸದೆ ಮಂಗಲ ಅಂಗಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಿ. ಜಗದೀಶ ಶೆಟ್ಟರ್ ಅಷ್ಟೇ ಆಸಕ್ತಿಯಿಂದ ಹೇಳಿಕೆಗಳನ್ನು ನೀಡಲಿ ಎಂದು ಆಗ್ರಹಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಏನು‌ ಹೇಳ್ತೀರಾ ನಾರಿ ಶಕ್ತಿ, ನಾರಿ‌ ಸಮ್ಮಾನ್, ಬೇಟಿ ಬಚ್ಚಾವ್, ಬೇಟಿ ಪಡಾವ್ ಅಂತ ಹೇಳುವ ಬಿಜೆಪಿಗರು, ಈಗ ಏಕೆ ಮೌನವಾಗಿದ್ದಾರೆ. ಮಾತು ಆಡಿದರೇ ಕರ್ನಾಟಕ ಸರ್ಕಾರವನ್ನು ಟೀಕಿಸುವ ಮೋದಿ ಅವರ ಈಗಿನ ನಿಲುವೇನು? ಇಲ್ಲಿನ ಸಂತ್ರಸ್ತ ಮಹಿಳೆಯರ ಮಾಂಗಲ್ಯದ ಕತೆಯೇನು? ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿ ಪ್ರಶ್ನೆ ಕೇಳ್ತಾ ಇದ್ದೀನಿ ಎಂದರು.ವಿದೇಶದಿಂದ, ಹೊರ ರಾಜ್ಯಗಳಿಂದ ಫೋನ್‌ಕಾಲ್‌ಗಳು ಬರುತ್ತಿವೆ. ಇಂತಹ ಪ್ರಕರಣ ನಡೆದಿದ್ದು ನಿಜವೇ ಎಂದು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ಏನು ಕ್ರಮಕೈಗೊಳ್ಳಲಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಈಗಾಲೇ ಎಸ್‌ಐಟಿ ತನಿಖೆಗೆ ವಹಿಸಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಬಿಜೆಪಿಯ ಮಹಿಳಾ ಮಣಿಗಳು ಎಲ್ಲಿದ್ದಾರೆ?. ಸಂಸದೆ ಮಂಗಲ ಅಂಗಡಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಆಗಬೇಕು, ನೇಹಾ ಹಿರೇಮಠ ವಿಷಯದಲ್ಲಿ ಮಾತಾಡಿದಂತೆ ಜಗದೀಶ್ ಶೆಟ್ಟರ್ ಅವರು ಮಾತಾಡಬೇಕು. 16 ವರ್ಷದಿಂದ 50, 60 ವರ್ಷದ ಮಹಿಳೆಯರು ಪ್ರಜ್ವಲ್ ರೇವಣ್ಣ ಅವರಿಂದ ನೊಂದಿದ್ದಾರೆ‌. ಮಹಿಳೆಯರ ಪರ ಮೈತ್ರಿ ನಾಯಕರು ನಿಲ್ಲಲಿ ಎಂದರು.ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ, ಹಿರಿಯ ಮುಖಂಡ ಎ.ಟಿ.ರಾಮಸ್ವಾಮಿ, ದೇವರಾಜಗೌಡ ಎಂಬುವರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮೈಸೂರು ಪ್ರವಾಸದಲ್ಲಿದ್ದ ಅಮಿತ್ ಷಾ ಅವರ ಗಮನಕ್ಕೆ ಆಗಲೇ ತಂದಿದ್ದರು. ಇಂಥ ವಿಷಯ ಗೊತ್ತಿದ್ದರೂ ಮೈತ್ರಿ ನಾಯಕರು ಪ್ರಜ್ವಲ್ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದು ಏಷ್ಟು ಸರಿ?. ಇದಕ್ಕೆ ಬಿಜೆಪಿ ನಾಯಕರು ಉತ್ತರಿಸುವರೇ ಎಂದು ಪ್ರಶ್ನಿಸಿದರು.ಹಾಸನದ ಬಿಜೆಪಿಯ ನಾಯಕ ದೇವರಾಜಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಡಿಸೆಂಬರ್‌ನಲ್ಲಿ ಗಮನಕ್ಕೆ ತಂದಿದ್ದರು. ಆದರೂ ಸಹ ತಮ್ಮ ರಾಜಕೀಯ ಲಾಭಕ್ಕಾಗಿ ಬಿಜೆಪಿ ಅವರು ಮೈತ್ರಿ ಮಾಡಿಕೊಂಡರು. ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ಬಿಜೆಪಿ ನಾಯಕರಿಗೆ ಮೊದಲೇ ಅರಿವಿತ್ತು ಎಂದು ದೂರಿದರು.ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ನಾಯಕರು, ಈಗ ಏಕೆ ಜಾಣ ಮೌನವಾಗಿದ್ದಾರೆ?. ಮೊನ್ನೆ ಮಾಜಿ ಶಾಸಕರೊಬ್ಬರೂ ನನ್ನ ಬಗ್ಗೆ ತುಚ್ಛವಾಗಿ ಮಾತಾಡುವಾಗ ವೇದಿಕೆಯಲ್ಲಿದ್ದ ಸಂಸದೆ ಮಂಗಲ ಅಂಗಡಿ, ಜಗದೀಶ್ ಶೆಟ್ಟರ್ ನಕ್ಕರು ಹೊರತು ಏನು ಮಾತಾಡ್ಲಿಲ್ಲ. ಸಂಜಯ ಪಾಟೀಲ್‌ಗೆ ಕನಿಷ್ಠ ಬುದ್ಧಿವಾದ ಹೇಳಲಿಲ್ಲ ಎಂದು ಕಿಡಿಕಾರಿದರು.ಉಡುಪಿ ಹಾಸ್ಟೆಲ್‌ನಲ್ಲಿ ಕ್ಯಾಮೆರಾವಿಟ್ಟು ವಿಷಯವನ್ನು ಬಿಜೆಪಿಯವರು ರಾಜಕರಣ‌ಗೊಳಿಸಿದರು. ರಾಷ್ಟ್ರೀಯ ಮಹಿಳಾ ಆಯೋಗದವರು ಓಡೋಡಿ ಬಂದರು. ಈಗ ಸಾವಿರಾರು ಮಹಿಳೆಯರ ಮಾನ ಹರಾಜಾದರೂ ಯಾರು ಏನೂ ಮಾತಾಡುತ್ತಿಲ್ಲ. ಅಶೋಕ್, ವಿಜಯೇಂದ್ರ ಅವರೇ ಈಗ ಏನು ಹೇಳುತ್ತಿರಾ?, ಶೋಭಾ ಕರಂದ್ಲಾಜೆ, ಸ್ಮತಿ ಇರಾನಿ ಏಕೆ ಏನು ಹೇಳ್ತಿಲ್ಲ?. ಮಂಡ್ಯ ಸೊಸೆ ಸುಮಲತಾ ಏನ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಸರ್ಕಾರ ನೊಂದ ಮಹಿಳೆಯರ ಪರವಾಗಿ ನಿಲ್ಲಲಿದೇ ಅವರ ರಕ್ಷಣೆ ಮಾಡಲಿದೆ. ಪ್ರಕರಣದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಜ್ವಲ್ ಪ್ರಕರಣದ ವಿಡೀಯೋಗಳನ್ನು ಯಾರೂ ಫಾರವರ್ಡ್‌ ಮಾಡಬಾರದು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನಯ್ ನಾವಲಗಟ್ಟಿ ಉಪಸ್ಥಿತರಿದ್ದರು.ಕೋಟ್......ಪ್ರಧಾನಿ ನರೇಂದ್ರ ಮೋದಿ ಬೆಳಗಾವಿ ಬಿಜೆಪಿ ಸಮಾವೇಶದಲ್ಲಿ ಬೆಳಗಾವಿ ವಂಟಮೂರಿ ಮಹಿಳೆ ಹಲ್ಲೆ ಹಾಗೂ ನೇಹಾ ಪ್ರಕರಣ ಪ್ರಸ್ತಾಪಿಸಿದರು. ಹಾಸನದಲ್ಲಿ ನೂರಾರು‌ ಮಹಿಳೆಯರು ಮೇಲೆ ತಮ್ಮ ಮಿತ್ರ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ ಮಾಡಿದ ಅನ್ಯಾಯದ ಕುರಿತು ಪ್ರಸ್ತಾಪಿಸಲಿಲ್ಲ ಏಕೆ?.-ಲಕ್ಷ್ಮೀ ಹೆಬ್ಬಾಳಕರ, ಸಚಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ