ಮಕ್ಕಳ ಕಾನೂನು ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ

KannadaprabhaNewsNetwork |  
Published : Mar 23, 2026, 03:00 AM IST
18ಕೆಪಿಎಲ್24 ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾಣೆಯಾದ ಮಕ್ಕಳ ಪತ್ತೆಗಾಗಿ ರಚನೆಯಾದ ವಿಶೇಷ ಕಾರ್ಯಪಡೆಯ ಸಭೆ | Kannada Prabha

ಸಾರಾಂಶ

ಸರ್ವೋಚ್ಚ ನ್ಯಾಯಾಲಯವು ರಿಟ್ ಪಿಟಿಷನ್ 75/2012ರ ತೀರ್ಪಿನಲ್ಲಿ ಮಕ್ಕಳ ಕಾಣೆ ಪ್ರಕರಣ ಗಂಭೀರವಾಗಿ ಪರಿಗಣಿಸಿ

ಕೊಪ್ಪಳ: ಅಪಹರಣಕ್ಕೊಳಗಾದ ಹಾಗೂ ಕಾಣೆಯಾದ ಮಕ್ಕಳ ಪ್ರಕರಣಗಳ ವಿಶ್ಲೇಷಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣುಮಕ್ಕಳೇ ಬಾಧಿತರಾಗಿರುವುದು ಕಂಡು ಬಂದಿದ್ದು, ಮಕ್ಕಳಿಗೆ ಸೂಕ್ತ ತಿಳಿವಳಿಕೆ ಹಾಗೂ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಹಕ್ಕು ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾನೂನು ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಪಹರಣಕ್ಕೊಳಗಾದ ಮತ್ತು ಕಾಣೆಯಾದ ಮಕ್ಕಳ ಪತ್ತೆಗಾಗಿ ರಚನೆಯಾದ ವಿಶೇಷ ಕಾರ್ಯಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ವೋಚ್ಚ ನ್ಯಾಯಾಲಯವು ರಿಟ್ ಪಿಟಿಷನ್ 75/2012ರ ತೀರ್ಪಿನಲ್ಲಿ ಮಕ್ಕಳ ಕಾಣೆ ಪ್ರಕರಣ ಗಂಭೀರವಾಗಿ ಪರಿಗಣಿಸಿ,ಅಪಹರಣ ಪ್ರಕರಣ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶಿಸಿದೆ. ಜಿಲ್ಲೆಯಲ್ಲಿ ದಾಖಲಾದ ಆಪಹರಣ ಪ್ರಕರಣ ವಿಶ್ಲೇಷಿಸಲಾಗಿ ಬಹುತೇಕ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳೇ ಭಾದಿತರಾಗಿದ್ದಾರೆ. ದಾಖಲಾಗಿರುವ ಬಹುತೇಕ ಪ್ರಕರಣಗಳಲ್ಲಿ ಅಪಹರಣಕ್ಕೊಳಗಾದವರು 16-18 ವರ್ಷದೊಳಗಿನ ಹೆಣ್ಣು ಮಕ್ಕಳಾಗಿರುವುದರಿಂದ ಈ ಪ್ರಕರಣ ಅಧ್ಯಯನದಲ್ಲಿ ಪ್ರೀತಿ-ಪ್ರೇಮದ ಹೆಸರಿನಲ್ಲಿ ಪಾಲಕರನ್ನು, ಮನೆ ತೊರೆದು ಹೋದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರಡಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳೊಂದಿಗಿನ ಸಮ್ಮತ ಲೈಂಗಿಕ ಚಟುವಟಿಕೆಗಳು ಸಹ ಅಪರಾಧಗಳೆಂದು ಪರಿಗಣಿಸಲಾಗುತ್ತದೆ ಹಾಗೂ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ. ಇದರಿಂದ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಬಹುದಾದ ಸಾಧ್ಯತೆ ಅಧಿಕವಾಗಿವೆ. ಮಕ್ಕಳು ತಿಳಿದೋ-ತಿಳಿಯದೆಯೋ ಈ ಕಾಯ್ದೆಯಡಿಯಲ್ಲಿ ಭಾದಿತರಾಗುತ್ತಿದ್ದಾರೆ. ಸರ್ಕಾರವು ಶಾಲೆ, ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ಹಾಗೂ ಸಮುದಾಯಗಳಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನು ಕುರಿತು ಮತ್ತಷ್ಟು ಜಾಗೃತಿ ಮೂಡಿಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಸೂಚಿಸಿದೆ. ಆದ್ದರಿಂದ ನಿಮ್ಮ ವ್ಯಾಪ್ತಿಯ ಸಂಸ್ಥೆಗಳಲ್ಲಿ ಮತ್ತು ಸಮುದಾಯಗಳಲ್ಲಿ ಈ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಭಾಗೀದಾರರ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ, ಜಿಲ್ಲಾ ಪೊಲೀಸ್ ಅಧೀಕ್ಷಕ ಹೇಮಂತಕುಮಾರ, ಪೊಲೀಸ್ ಉಪಾಧೀಕ್ಷಕ ಮುತ್ತಣ್ಣ ಸವರಗೋಳ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರಕಾಶ ಕಡಗದ, ಬಾಲ ನ್ಯಾಯ ಮಂಡಳಿಯ ಸದಸ್ಯರಾದ ನೇತ್ರಾ ಪಾಟೀಲ್, ಪ್ರತಿಭಾ ಕಾಶೀಮಠ ಹಾಗೂ ವಿಸ್ತಾರ ಮತ್ತು ಕಲ್ವಾರಿ ಚಾಪೆಲ್ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಪೊಲೀಸ್ ಠಾಣೆಗಳ ಆರಕ್ಷಕ ಉಪ-ನಿರೀಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಕಾಣೆಯಾದ ಮಕ್ಕಳ ಪಾಲಕರು, ಸಂಬಂಧಿಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೂಡಿಕೆ ನೆಪದಲ್ಲಿ ಮಹಿಳೆಗೆ 11.75 ಲಕ್ಷ ರು. ವಂಚನೆ
110 ಐನ್ ಮನೆಗಳ ಅಭಿವೃದ್ಧಿಗೆ 4.50 ಕೋಟಿ ರು. ಮೀಸಲು: ಶಾಸಕ ಪೊನ್ನಣ್ಣ