ಉಮೇಶ ಕತ್ತಿ ಹೆಸರಿನಲ್ಲಿ ರೈತ ಭವನ: ರಮೇಶ ಕತ್ತಿ

KannadaprabhaNewsNetwork | Published : Jul 21, 2024 1:18 AM

ಸಾರಾಂಶ

ಸಂಕೇಶ್ವರ ಪಟ್ಟಣದಲ್ಲಿ ಪ್ರತಿ ವರ್ಷ ಆಯೋಜಿಸುವ ಬೃಹತ್ ಕಾರ ಹುಣ್ಣಿಮೆಯಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದ ನಾಗರಿಕರ ಮನವಿ ಮೇರೆಗೆ ಸುಮಾರು ₹20 ಲಕ್ಷ ವೆಚ್ಚದಲ್ಲಿ ಬರುವ ಕಾರಹುಣ್ಣಿಮೆ ಒಳಗಾಗಿ ದಿ.ಉಮೇಶ ಕತ್ತಿ ಹೆಸರಿನಲ್ಲಿ ರೈತ ಭವನ ಲೋಕಲಾರ್ಪಣೆಗೊಳಿಸಲಾಗುವುದು ಎಂದು ಮಾಜಿ ಸಂಸದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಪಟ್ಟಣದಲ್ಲಿ ಪ್ರತಿ ವರ್ಷ ಆಯೋಜಿಸುವ ಬೃಹತ್ ಕಾರ ಹುಣ್ಣಿಮೆಯಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದ ನಾಗರಿಕರ ಮನವಿ ಮೇರೆಗೆ ಸುಮಾರು ₹20 ಲಕ್ಷ ವೆಚ್ಚದಲ್ಲಿ ಬರುವ ಕಾರಹುಣ್ಣಿಮೆ ಒಳಗಾಗಿ ದಿ.ಉಮೇಶ ಕತ್ತಿ ಹೆಸರಿನಲ್ಲಿ ರೈತ ಭವನ ಲೋಕಲಾರ್ಪಣೆಗೊಳಿಸಲಾಗುವುದು ಎಂದು ಮಾಜಿ ಸಂಸದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಭರವಸೆ ನೀಡಿದ್ದಾರೆ.

ಪಟ್ಟಣದದಲ್ಲಿ ಕಾರಹುಣ್ಣಿಮೆ ಸಮಿತಿ ಆಯೋಜಿಸಿದ್ದ ತಾಲೂಕು ಮಟ್ಟದ ಎತ್ತು-ಹೋರಿಗಳ ಸ್ಪರ್ಧೆಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ಮಾತನಾಡಿ ಅವರು, ಕಾರಹುಣ್ಣಿಮೆ ರೈತರ ಹಬ್ಬವಾಗಿದ್ದು ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸುವ ಮೂಲಕ ವರ್ಷವಿಡೀ ನಮಗಾಗಿ ದುಡಿಯುವ ಎತ್ತುಗಳನ್ನು ಪೂಜಿಸುವ ಪವಿತ್ರ ಹಬ್ಬವಾಗಿದ್ದು, ಇದಕ್ಕೆ ಸರಕಾರ ಮಾನ್ಯತೆ ನೀಡಬೇಕು ಹಾಗೂ ಎತ್ತುಗಳ ವಿನೂತನ ತಳಿಗಳನ್ನು ಸಂಶೋಧಿಸಲು ಸರಕಾರ ಸಂಶೋಧನಾ ಕೇಂದ್ರ ಉತ್ತರ ಕರ್ನಾಟಕದಲ್ಲಿ ಎತ್ತುಗಳ ಪಾರ್ಕ್ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹಲ್ಲು ಹಚ್ಚದ ಕರುಗಳು, ಹಲ್ಲು ಹಚ್ಚಿದ ಕರುಗಳು, 4 ಮತ್ತು 6 ಹಲ್ಲು ಹಚ್ಚಿದ ಹೊರಿಗಳು ಹಾಗೂ ಎತ್ತುಗಳ ಸ್ಪರ್ಧಾ ವಿಜೇತರಿಗೆ ನಗದು ಹಾಗೂ ಢಾಲ್‌ಗಳನ್ನು ಬಹುಮಾನವಾಗಿ ನೀಡಲಾಯಿತು.

ಕಾರಹುಣ್ಣಿಮೆ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ, ಅಪ್ಪಾಸಾಹೇಬ ಕರದನ್ನವರ, ಚಂದ್ರಶೇಖರ ಕಿಲ್ಲೆದಾರ, ಮಲಗೌಡ ಪಾಟೀಲ,ಬಸವರಾಜ ಬಸ್ತವಾಡಿ, ಪುರಸಭೆ ಸದಸ್ಯರಾದ ಸುನೀಲ ಪರ್ವತರಾವ, ಶಿವಾನಂದ ಮುಡಶಿ ಮುಖಂಡರಾದ ಶ್ರೀಕಾಂತ ಹತನೂರಿ, ರೋಹಣ ನೇಸರಿ, ಆನಂದ ಸಂಸುದ್ದಿ, ಕುಮಾರ ಬಸ್ತವಾಡಿ, ಶಂಕರ ಪಟ್ಟೆದ, ಜಿತೇಂದ್ರ ಮರಡಿ, ಸುರೇಶ ಶೆಟ್ಟಿಮನಿ, ಸಚಿನ್ ಪಚಂಡಿ, ಸಿಪಿಐ ಶಿವಶರಣ ಅವಜಿ, ರಮೇಶ ಛಾಯಾಗೋಳ ಸೇರಿದಂತೆ ಇತರರು ಇದ್ದರು. ಅಧಿಕಾರ ಇರಲಿ, ಇಲ್ಲದೇ ಇರಲಿ; ಮನೆಯಲ್ಲಿ ಕೂರುವ ಜಾಯಮಾನ ನಮ್ಮದಲ್ಲ. ಇರುವವರೆಗೂ ಜನರೊಂದಿಗೆ ಇರುತ್ತೇವೆ ಎಂದು ಮಾಜಿ ಸಂಸದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು. ಕಾರಹುಣ್ಣಿಮೆಯಲ್ಲಿ ಭಾಗವಹಿಸಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಾನು ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡು ಹತ್ತು ವರ್ಷವಾಯ್ತು. ಎರಡು ಬಾರಿ ಟಿಕೆಟ್ ವಂಚಿತನಾಗಿದ್ದೇನೆ. ಆದರೂ ಸಹ ನನ್ನ ಜನಸಂಪರ್ಕ, ಜನಸೇವೆ ಯಾವತ್ತೂ ಕಡಿಮೆ ಆಗಿಲ್ಲ. ಅಧಿಕಾರಗಳು ಈಗಿರುವ ಜನಸೇವೆಯನ್ನು ವೃದ್ಧಿ ಮಾಡಬಲ್ಲವೇ ಹೊರತು ಅಧಿಕಾರ ಹೋದರೂ ಜನರ ಸಂಪರ್ಕ ಕಡಿತ ಮಾಡಿಲ್ಲ, ಮಾಡುವುದು ಇಲ್ಲ. ಓರ್ವ ರೈತನ ಎತ್ತು ಮಳೆ ಇರಲಿ, ಬೀಸಿಲಿರಲಿ. ಯಾವತ್ತೂ ರೈತನೊಂದಿಗೆ ಹೇಗೆ ಬದುಕುತ್ತಾ ಬಂದಿವೆಯೋ ಅದೇ ರೀತಿ ನಾನು ಸಹ ಅಧಿಕಾರ ಇರಲಿ ಅಥವಾ ಇಲ್ಲದೇ ಇರಲಿ. ನನ್ನ ಜನಸೇವೆ ಯಾವತ್ತೂ ನಿಲ್ಲುವುದಿಲ್ಲ ಎಂದು ರಮೇಶ ಕತ್ತಿ ತಿಳಿಸಿದರು.

Share this article