ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ ಎಂ.ವಿ.ಪ್ರತಿಮೆಯಿಂದ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಟ್ರ್ಯಾಕ್ಟರ್‌ನಲ್ಲಿ ನೇಣು ಬಿಗಿದುಕೊಂಡು ಅಣಕು ಪ್ರದರ್ಶನ ಮಾಡುವ ಮೂಲಕ ಬಾಯಿ ಬಡಿದುಕೊಂಡು ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ದುಡಿಯುವ ರೈತರು ಶೋಷಣೆಗೆ ಒಳಗಾಗಿ ಹೆಗಲ ಮೇಲೆ ಸಾಲದ ಗಂಟು ಏರಿಕೆಯಾಗಿದೆ. ಸರ್ಕಾರಗಳು ರೈತರನ್ನು ಸಾಲ ಮುಕ್ತಗೊಳಿಸುವ ಯೋಜನೆ ಅನುಷ್ಠಾನದ ಬಗ್ಗೆ ಯೋಚಿಸದೆ ಕೇವಲ ಭಾಷಣಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಯಾಂತ್ರಿಕತೆ, ಆರ್ಥಿಕತೆ ಸಬಲೀಕರಣದ ಬಗ್ಗೆ ಮಾತನಾಡಿ ರೈತರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡದೆ ವಂಚಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೃಷಿಯಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ, ಬಿತ್ತನೆಗಳ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಮಾಡದೆ ಕೃಷಿ ಕ್ಷೇತ್ರವನ್ನು ಕಡೆಗಣಿಸಿದೆ. ಅವೈಜ್ಞಾನಿಕ ಕೃಷಿ ಕಾಯಿದೆಗಳು ರೈತರಿಗೆ ಶಾಪವಾಗಿ ಪರಿವರ್ತನೆಯಾಗುವ ಮೂಲಕ ರೈತ ತನ್ನ ಕೃಷಿಗಾಗಿ ಮಾಡಿದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಮಗಳನ್ನು ತೊರೆಯುತ್ತಿದ್ದಾರೆ ಎಂದು ಆರೋಪಿಸಿದರು.
ರೈತರು ಬೆಳೆ ಸಾಲ ಪಡೆಯಲು ಎದುರಿಸುತ್ತಿರುವ ಸಿಬಿಲ್ ಎಂಬ ತಾಂತ್ರಿಕ ತೊಡಕು ಮತ್ತು ಒಟಿಎಸ್ ಅಡಿಯಲ್ಲಿ ಸಾಲ ಮರುಪಾವತಿಸಿದವರಿಗೆ ಹೊಸ ಸಾಲ ಪಡೆಯಲು ಅಡ್ಡಿಯಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ರೈತರ ಮತ್ತು ಸಾರ್ವಜನಿಕರ ಅವಶ್ಯಕತೆಗಳಿಗೆ ಸಾಲ ಸೌಲಭ್ಯ ಒದಗಿಸುವ ಮೈಕ್ರೋ ಫೈನಾನ್ಸ್‌ಗಳ ಸಿಬ್ಬಂದಿಯಿಂದ ಸಾಲಗಾರರ ಮೇಲೆ ದೌರ್ಜನ್ಯ, ಅವಾಚ್ಯ ಶಬ್ಧ ಬಳಕೆ, ಸಾರ್ವಜನಿಕವಾಗಿ ನಿಂದಿಸುವುದು, ದುಬಾರಿ ಬಡ್ಡಿ ವಸೂಲಿ,ಇವೆಲ್ಲವೂ ಸಾಲಗಾರರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಿವೆ. ಇಂತಹ ಪೀಡಕ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
----------
ಮಂಡ್ಯ: ಖಾಸಗಿ ಕಂಪನಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಮೃತರಿಗೆ ತಲಾ 50 ಲಕ್ಷ ರು. ನೀಡಬೇಕು. ಇಲ್ಲದಿದ್ದರೆ ಮೈಕ್ರೋ ಫೈನಾನ್ಸ್ ಕಂಪನಿಗಳ ಪೀಠೋಪಕರಣಗಳನ್ನು ಧ್ವಂಸ ಮಾಡುವುದಾಗಿ ರಾಜ್ಯ ರೈತ ಸಂಘದ(ಏಕೀಕರಣ) ವರಿಷ್ಠ ಪಚ್ಚೆ ನಂಜುಂಡಸ್ವಾಮಿ ಎಚ್ಚರಿಸಿದರು.
ಖಾಸಗಿ ಕಂಪನಿಗಳಲ್ಲಿ ಸಾಲ ತೆಗೆದುಕೊಂಡ ರೈತರು, ಮಹಿಳೆಯರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಒರ್ವ ಮಹಿಳೆಯು ತನ್ನ ಮಗನಿಗೆ ಗ್ಯಾಂಗ್ರಿನ್ ಆಗಿರುವುದರಿಂದ ಆಸ್ಪತ್ರೆಗೆ ಚಿಕಿತ್ಸೆಗೆಂದು ಹಣ ಖರ್ಚು ಮಾಡಿದ್ದಾರೆ, ಹಾಗಾಗಿ ಕಂತಿನ ಹಣ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದರು.