ಬ್ಯಾಡಗಿ: ಆಣೂರು ಮತ್ತು ಬುಡುಪನಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ತುಂಬಿಸುವುದು ರೈತ ಸಂಘದ ವಿಷಯಾಧಾರಿತ ಹೋರಾಟಗಳಲ್ಲಿ ಒಂದಾಗಿದ್ದು, ಇದರಲ್ಲಿ ಯಶಸ್ಸು ಗಳಿಸಿದ ಬಳಿಕ ರೈತ ಸಂಘಟನೆ ಇನ್ನಷ್ಟು ಗಟ್ಟಿಗೊಂಡಿದೆ. ಸದರಿ ಹೋರಾಟಕ್ಕೆ ಹಿನ್ನೆಲೆಯಾಗಿ ಪ್ರೇರಣೆ ನೀಡಿದ ಸಿರಿಗೆರೆ ತರಳಬಾಳುಶ್ರೀಗಳು ಸೇರಿದಂತೆ ರೈತ ಮುಖಂಡ ಹಾಗೂ ಪಾಂಡವಪುರ ಶಾಸಕ ದರ್ಶನ ಪುಟ್ಟಣ್ಣಯ್ಯ ಅವರೊಂದಿಗೆ ಬಾಗಿನ ಅರ್ಪಿಸುವ ಕಾರ್ಯಕ್ಕೆ ನ.16ರಂದು ಚಾಲನೆ ನೀಡುವುದಾಗಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.
ನ.16 ರಂದು ಬಾಗಿನ ಅರ್ಪಣೆ: ಮಳೆ ನೀರು ಸೇರಿದಂತೆ ತುಂಗಭದ್ರಾ ನದಿಯಿಂದ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಉಕ್ಕಿ ಹರಿದಿವೆ. ಈ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಸದರಿ ಕಾರ್ಯಕ್ರಮ ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ನಡೆಯಲಿದ್ದು ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಸೇರಿದಂತೆ ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ನಡೆಸಲು ಉದ್ದೇಶಿಸಿದ್ದು ಜಿಲ್ಲೆಯ ರೈತರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಂಗಣ್ಣ ಎಲಿ, ಕಿರಣಕುಮಾರ ಗಡಿಗೋಳ, ಮಹದೇವಪ್ಪ ಶಿಡೇನೂರ, ಸಣ್ಣಫಕ್ಕೀರಪ್ಪ ಬಟ್ಟಲಕಟ್ಟಿ, ವಿರೂಪಾಕ್ಷಪ್ಪ ಗುಡಗೂರ, ಕೆ.ವಿ. ದೊಡ್ಡಗೌಡ್ರ, ನಾಗಪ್ಪ ಸಪ್ಪಣ್ಣನವರ, ರಾಜಣ್ಣ ಕೋಡಿಹಳ್ಳಿ, ಪ್ರಕಾಶ ಸಿದ್ಧಪ್ಪನವರ, ಚನ್ನಪ್ಪ ಹಂಚಿನಮನಿ ಸೇರಿದಂತೆ ಇನ್ನಿತರರಿದ್ದರು.