ಹುಬ್ಬಳ್ಳಿ: ವಿವಿಧ ಕನ್ನಡಪರ ಸಂಘಟನೆ ಹಾಗೂ ಡಾ.ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ವರನಟ ಡಾ.ರಾಜಕುಮಾರ ಅವರ ಜನ್ಮ ದಿನದ ಅಂಗವಾಗಿ ಕನ್ನಡಿಗರ ಹಬ್ಬ ಮತ್ತು ಡಾ. ರಾಜಕುಮಾರ ಕನ್ನಡ ಜ್ಯೋತಿ ಯಾತ್ರೆಯ ಅದ್ಧೂರಿ ಮೆರವಣಿಗೆ ಗುರುವಾರ ನಡೆಯಿತು.
ಇದಕ್ಕೂ ಪೂರ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮತ್ತು ಮೇಯರ್‌ಗೆ ಗಬ್ಬೂರ ಕ್ರಾಸ್‌ನಲ್ಲಿ ಡಾ. ರಾಜಕುಮಾರ ಅವರ 25 ಅಡಿ ಕಂಚಿನ ಪುತ್ಥಳಿ ಸ್ಥಾಪನೆ ಹಾಗೂ ವಿ.ಕೃ. ಗೋಕಾಕರ ಚಳವಳಿ ಸ್ಮಾರಕ ಉಳವಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಡಾ. ರಾಜಕುಮಾರ ಪುತ್ಥಳಿ ಸ್ಥಾಪನೆ ಮತ್ತು ವಿ.ಕೃ. ಗೋಕಾಕರ ಸ್ಮಾರಕ ರಕ್ಷಣೆಗೆ 2014ರಲ್ಲಿ ಠರಾವು ಪಾಸ್ ಆಗಿದೆ. ಇದಕ್ಕಾಗಿ 2016ರಲ್ಲಿ ಸಮಿತಿ ಕೂಡ ರಚಿಸಲಾಗಿದೆ. ಅಲ್ಲದೇ, ಹು-ಧಾ ಮಧ್ಯದ ಅಷ್ಟಪಥಕ್ಕೆ ಡಾ. ರಾಜಕುಮಾರ ಮಾರ್ಗ ಎಂದು ನಾಮಕರಣ ಮಾಡುವಂತೆ 2000ನೇ ಸಾಲಿನಲ್ಲಿ ಠರಾವು ಮಂಡನೆಯಾಗಿದೆ. 25 ವರ್ಷ ಕಳೆದರೂ, ಯಾವ ಬೇಡಿಕೆಯೂ ಈಡೇರಿಲ್ಲ. ತಕ್ಷಣವೇ ಕ್ರಮಕೈಗೊಂಡು ಪಾಲಿಕೆ ಕನ್ನಡಾಭಿಮಾನ ಮೆರೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ವಿಜಯಕುಮಾರ ಅಪ್ಪಾಜಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ನಾಗರಾಜ ಗೌರಿ, ಪಾಲಿಕೆ ಸದಸ್ಯ ಚೇತನ ಹಿರೇಕೆರೂರು, ಗುರುನಾಥ ಉಳ್ಳಿಕಾಶಿ, ಫಕ್ಕೀರಪ್ಪ ಮದ್ರಾಸಿ, ಪುಂಡಲೀಕ ಬಡಿಗೇರ ಸೇರಿದಂತೆ ಇತರರು ಇದ್ದರು.