ಕನ್ನಡಪ್ರಭ ವಾರ್ತೆ ಮೇಲುಕೋಟೆ
ಅಷ್ಠತೀರ್ಥೋತ್ಸವ ಬೆಳಗ್ಗೆ ನಡೆದರೆ, ರಾತ್ರಿ ರಾಜಮುಡಿ ಉತ್ಸವ ನಡೆಯಲಿದೆ. ಮಂಡ್ಯ ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ಗುರುವಾರ ಸಂಜೆಯೇ ರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ಮೇಲುಕೋಟೆಗೆ ತರಲಾಯಿತು.
ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ರಾಜಮುಡಿ ತಿರುವಾಭರಣ ಪೆಟ್ಟಿಗೆಗೆ ಪೂಜೆ ಮಾಡಿ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು. ನಂತರ ರಾತ್ರಿ 7ಗಂಟೆ ವೇಳೆಗೆ ಅಪರಜಿಲ್ಲಾಧಿಕಾರಿ ಬಿಸಿ ಶಿವಾನಂದಮೂರ್ತಿ ಸಮಕ್ಷಮ ರಾಜಮುಡಿ ಕಿರೀಟ ಮತ್ತು 16 ಬಗೆಯ ತಿರುವಾಭರಣಗಳನ್ನು ತಂದು ಪರಿಶೀಲಿಸಿ ಸ್ಥಾನೀಕರು ಮತ್ತು ಅರ್ಚಕ ಪರಿಚಾರಕರಿಗೆ ಹಸ್ತಾಂತರ ಮಾಡಲಾಯಿತು.ಈ ವೇಳೆ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಶ್ರೀನಿವಾಸ್, ಪಾಂಡವಪುರ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ದೇವಾಲಯದ ಇಒ ಶೀಲಾ, ಅರ್ಚಕ ವರದರಾಜಭಟ್ಟರ್, ದೇವಾಲಯದ ಪಾರುಪತ್ತೇಗಾರ್ ಮತ್ತು ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ಸ್ಥಾನಾಚಾರ್ಯರಾದ ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್, ಕೊವಿಲ್ ನಂಬಿ ಮುಕುಂದನ್ ಕರಗಂ ರಾಮಪ್ರಿಯ ಶ್ರೀರಾಮನ್ ಪರಿಚಾರಕ ಮತ್ತು ಪಾರುಪತ್ತೇಗಾರ್ ಪಾರ್ಥಸಾರಥಿ ಇದ್ದರು.
ತೊಟ್ಟಿಲಮಡು ಜಾತ್ರೆಯಲ್ಲಿ ವನಬೋಜನದ ವಿಶೇಷ:
ಅಷ್ಠತೀರ್ಥೋತ್ಸವ ಬೆಳಗ್ಗೆ 8 ಗಂಟೆಗೆ ಕಲ್ಯಾಣಿಯಲ್ಲಿ ಮೊದಲ ಅಭಿಷೇಕದೊಂದಿಗೆ ಆರಂಭವಾಗಿ ಸಂಜೆ 4 ಗಂಟೆಗೆ ವೈಕುಂಠಗಂಗೆ ತೊಟ್ಟಿಲಮಡುವಿನಲ್ಲಿ ಕೊನೆ ಅಭಿಷೇಕದೊಂದಿಗೆ ಮುಕ್ತಾಯವಾಗುತ್ತದೆ. ನಂತರ ಯೋಗಾನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆ ನಡೆದು ಮಹೋತ್ಸವ ರಾತ್ರಿ 8 ಗಂಟೆ ವೇಳೆಗೆ ಮುಕ್ತಾಯವಾಗಲಿದೆ.