ಮಡಿಕೇರಿ: ಮಡಿಕೇರಿ ರಾಜಾಸೀಟು ರಸ್ತೆಯ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲು ಆ ರಸ್ತೆಯ ಬದಿಯಲ್ಲಿ ದಶಕಗಳಿಂದ ನಿಂತಿರುವ 12 ಅತ್ತಿ ಮರಗಳನ್ನು ಕಡಿದು ಹರಾಜು ನಡೆಸಲು ನಗರಸಭೆ ವತಿಯಿಂದ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಮಾಡಲಾಗಿದ್ದು, ಸಾರ್ವಜನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮರ ಕಡಿಯಲು ಅನುಮತಿ ನೀಡದಂತೆ ಡಿ.ಸಿ.ಎಫ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.ಮರಗಳು ರಸ್ತೆಯ ಬದಿಯಲ್ಲಿದ್ದು, ನೂತನ ರಸ್ತೆ ಅಭಿವೃದ್ಧಿಗೆ ಯಾವುದೇ ರೀತಿಯ ಅಡಚಣೆಯಾಗದಿದ್ದರೂ ಆ ಮರಗಳಿರುವ ಸ್ಥಳದಲ್ಲಿ ಇಂಟರ್ ಲಾಕ್ ಅಳವಡಿಸಿ ''''ಬ್ಯೂಟಿಫಿಕೇಷನ್'''' ನೆಪದಲ್ಲಿ ಅವುಗಳನ್ನು ಕಡಿದು ಸೌದೆ ಹರಾಜು ಮಾಡಲು ಉದ್ದೇಶಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ಯಾವುದೇ ಆಕ್ಷೇಪವಿಲ್ಲ, ಆದರೆ ರಾಜಾಸೀಟು ಪರಿಸರ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿ ಅನವಶ್ಯಕವಾಗಿ ಮರಗಳ ಹನನ ನಿಲ್ಲಿಸಬೇಕು. ವೈಜ್ಞಾನಿಕವಾಗಿ ಕಾಮಗಾರಿ ನಡೆಸಿದಲ್ಲಿ ಮರಗಳನ್ನು ಕಡಿಯುವ ಅವಶ್ಯಕತೆಯೇ ಇಲ್ಲ. ಸ್ಥಳೀಯ ಪಕ್ಷಿ ಪ್ರಬೇಧಗಳಿಗೂ ಈ ಅತ್ತಿ ಮರಗಳು ಆಶ್ರಯವಾಗಿವೆ ಹಾಗೂ ಆ ವ್ಯಾಪ್ತಿಯಲ್ಲಿ ನೆರಳು ನೀಡುವುದಲ್ಲದೇ ವಾಯು ವಿಹಾರಕ್ಕೂ ಉಪಯೋಗವಾಗುತ್ತವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್ ಅವರು, ಅಗತ್ಯವಿದ್ದಲ್ಲಿ ಮಾತ್ರ ಮರಗಳನ್ನು ಕಡಿಯುವಂತೆ ಸಂಬಂಧಿಸಿದವರಿಗೆ ತಿಳಿಸುವುದಾಗಿ ಹೇಳಿದರು.
ಆಕ್ಷೇಪಣೆ ಸಲ್ಲಿಸಿದ ಪ್ರಜ್ಜಾ ಜಿ.ಆರ್, ಪ್ರಜ್ವಲ್ ಜಿ.ಆರ್, ಶರತ್ ಸರಳಾಯ, ಅನಿಲ್ ಬೆಟ್ಟದಳ್ಳಿ, ಡಾ. ಅನುಶ ಎಸ್, ವಕೀಲ ರಾಷ್ಟ್ರಿತ್ ಚಂಗಪ್ಪ, ಪ್ರಯಾಗ್ ಗೌಡ, ಪ್ರಸನ್ನ ಕೆ.ಟಿ, ಸಂಜಯ್ ಶೆಟ್ಟಿ ಹಾಗೂ ಇತರರು ಇದ್ದರು.