ಬೆಂಗಳೂರು : ರಾಜಸ್ಥಾನದ ಜೈಪುರದಲ್ಲಿ ಮೇ 23 ರಿಂದ 25ರವರೆಗೆ ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ (ಗ್ರಾಮ್ -2026) ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಹೂಡಿಕೆದಾರರಿಗೆ ಸರ್ಕಾರ ಸಕಲ ಸಹಕಾರ ನೀಡಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ತಿಳಿಸಿದರು.
ಭಾನುವಾರ ನಗರದಲ್ಲಿ ‘ಗ್ರಾಮ್-2026’ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಅಲ್ಲಿ ಬಂಡವಾಳ ಹೂಡಿಕೆ ಮಾಡುವ ಉದ್ಯಮಿಗಳಿಗೆ ಮೂಲಸೌಕರ್ಯ ಸೇರಿ ಎಲ್ಲಾ ರೀತಿಯ ಸಹಕಾರವನ್ನೂ ನಮ್ಮ ಸರ್ಕಾರ ನೀಡಲಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ್ ಭಾರತ್-2047ಗೆ ಪೂರಕವಾಗಿ ವಿಕಸಿತ್ ರಾಜಸ್ಥಾನ-2047 ಗುರಿ ಹೊಂದಿದ್ದೇವೆ. ರಾಜಸ್ಥಾನವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಪರಿವರ್ತಿಸುವ ದೂರದೃಷ್ಟಿಯ ಯೋಜನೆ ಇದಾಗಿದೆ. ಬೆಂಗಳೂರಿನಲ್ಲಿರುವ ರಾಜಸ್ಥಾನಿಗಳು ತವರುನೆಲದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಬೇಕೆಂದು ಕರೆ ನೀಡಿದರು.
ರಾಜಸ್ಥಾನ ಇದೀಗ ಭಾರಿ ಬದಲಾವಣೆ ಕಂಡಿದ್ದು, ಕೇಂದ್ರ ಸರ್ಕಾರದ ನೆರವಿನಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಬಹುತೇಕ ನೀಗಿಸಲಾಗಿದೆ. 24 ಗಂಟೆಗಳ ವಿದ್ಯುತ್ ಪೂರೈಕೆ ಶಕ್ತಿಯನ್ನು ಪಡೆದುಕೊಂಡಿದ್ದೇವೆ. ಆಹಾರ ಉತ್ಪಾದನೆ, ಸಂಸ್ಕರಣೆಯಲ್ಲೂ ಮುಂಚೂಣಿಯಲ್ಲಿದ್ದೇವೆ. ಅರಣ್ಯ ಭೂಮಿ, ನೀರಾವರಿ ಪ್ರದೇಶವನ್ನೂ ನಾವು ಹೊಂದಿದ್ದೇವೆ. ಹೀಗಾಗಿ ಕರ್ನಾಟಕದಲ್ಲಿ ಉದ್ಯಮಗಳನ್ನು ನಡೆಸುತ್ತಿರುವ ರಾಜಸ್ಥಾನಿಗಳು ತವರು ನೆಲದಲ್ಲಿ ಕೃಷಿ ಆಧಾರಿತ ಕೈಗಾರಿಕೆ ಸ್ಥಾಪಿಸಬಹುದು, ಹೂಡಿಕೆ ಮಾಡಬಹುದು. ಇದಕ್ಕೆ ಅಗತ್ಯವಿರುವ ಎಲ್ಲ ಸಹಾಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಅಭಯ ಅವರು ನೀಡಿದರು.
2024ರ ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆಯ ಸಂದರ್ಭದಲ್ಲಿ ಸಹಿ ಹಾಕಲಾದ 35 ಲಕ್ಷ ಕೋಟಿ ರು. ಒಪ್ಪಂದಗಳಲ್ಲಿ ಈಗಾಗಲೇ 9 ಲಕ್ಷ ಕೋಟಿ ರು. ಹೂಡಿಕೆ ಪ್ರಸ್ತಾವನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲೂ ಇದೇ ರೀತಿಯ ಹೂಡಿಕೆಗೆ ವಿಪುಲ ಅವಕಾಶವಿದ್ದು, ಕಾರ್ಯಕ್ರಮಕ್ಕೆ ಎಲ್ಲಾ ಹೂಡಿಕೆದಾರರನ್ನು ನಾವು ಸ್ವಾಗತಿಸುತ್ತೇವೆ ಎಂದು ಭಜನ್ ಲಾಲ್ ಶರ್ಮಾ ತಿಳಿಸಿದರು. ರಾಜಸ್ಥಾನ ಕೃಷಿ ಸಚಿವ ಕಿರೋಡಿಲಾಲ್ ಮೀನಾ, ರಾಜಸ್ಥಾನ ಸರ್ಕಾರದ ಅಧಿಕಾರಿಗಳು ಹಾಗೂ ಉದ್ಯಮಿಗಳು ಹಾಜರಿದ್ದರು.