ಅಕ್ಕನ ಮಗನ ಮದುವೆಗೆ ಅಮೆರಿಕದಿಂದ ಬಂದಿದ್ದ ವೈದ್ಯೆಯೊಬ್ಬರ 1 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಅವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ಕನ ಮಗನ ಮದುವೆಗೆ ಅಮೇರಿಕದಿಂದ ಬಂದಿದ್ದ ವೈದ್ಯೆಯೊಬ್ಬರ 1 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಅವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅನಿವಾಸಿ ಭಾರತೀಯ ವೈದ್ಯೆಯಾದ ಸಿರುವೆಲ್ಲಾ ಶ್ರೀದೇವಿ ಎಂಬುವರು ನೀಡಿದ ದೂರಿನನ್ವಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವಿವರ:

ನಾನು ಅಮೆರಿಕದಲ್ಲಿ ವೈದ್ಯೆಯಾಗಿದ್ದು, ಅಕ್ಕನ ಮಗನ ಮದುವೆಗಾಗಿ ಏ.18ರಂದು ಭಾರತಕ್ಕೆ ಬಂದಿದ್ದೆ. ಏ.22ರಂದು ಹೊಸಕೋಟೆ ಸಮೀಪದ ಕಾಟಂನಲ್ಲೂರು ಕ್ರಾಸ್ ಬಳಿ ಇರುವ ಎಸ್‌ಡಿಪಿ ಪ್ಯಾಲೇಸ್‌ಗೆ (ಚೌಟ್ರಿ) ಬಂದಿದೆ. ನಂತರ ಸಂಜೆ 6.30 ರ ಸುಮಾರಿಗೆ ನನ್ನ ಅಣ್ಣ ಶ್ರೀನಿವಾಸಮೂರ್ತಿ ಅವರು ಅಮೆರಿಕದಿಂದ ತಂದಿದ್ದ ಒಡವೆಗಳ ಬಾಕ್ಸ್ ಅನ್ನು ತಂದು ನೀಡಿ ಹೋಗಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಒಡವೆಗಳನ್ನು ಧರಿಸಿ, ಉಳಿದವುಗಳನ್ನು ಬಾಕ್ಸ್‌ನಲ್ಲಿಟ್ಟು, ರೂಮಿಗೆ ಬೀಗ ಹಾಕಿಕೊಂಡು ರಿಸೆಪ್ಷನ್ ಕಾರ್ಯಕ್ರಮಕ್ಕೆ ತೆರಳಿದೆ. ಆದರೆ ರಾತ್ರಿ 11:30ಕ್ಕೆ ಕಾರ್ಯಕ್ರಮ ಮುಗಿಸಿ ವಾಪಸ್ ಬಂದು ನೋಡಿದಾಗ ರೂಮಿನ ಬೀಗ ತೆರೆದು ಒಳಗೆ ಹೋಗಿ ನೋಡಿದ್ದಾಗ ಒಡವೆಗಳಿದ್ದ ಬಾಕ್ಸ್ ಮತ್ತು ಬ್ಯಾಗ್ ಕಳುವಾಗಿತ್ತು.

ಸುಮಾರು 300 ಗ್ರಾಂ ತೂಕದ ಎರಡು ಜುಮುಕಿಗಳು, 200 ಗ್ರಾಂನ ಒಂದು ಕಾಯಿನ್‌ ನೆಕ್ಲೇಸ್‌, 200 ಗ್ರಾಂನ ಡಾಬು, 25 ಗ್ರಾಂನ ತಲೆಗೆ ಹಾಕಿಕೊಳ್ಳುವ ಒಡವೆಗಳು ಸೇರಿ ಒಟ್ಟು 725 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿವೆ. ನಾನು ಆಭರಣ ಬದಲಾಯಿಸುವಾಗ ಒಬ್ಬಳು ಕೆಲಸದ ಮಹಿಳೆ ಬಂದು ಹೋಗಿದ್ದಳು ನನಗೆ ಅವಳ ಮೇಲೆ ಸಂಶಯವಿದೆ. ಆ ಮಹಿಳೆ ಮತ್ತು ನನ್ನ ಅಣ್ಣ ಒಡವೆಗಳನ್ನು ನೀಡುವಾಗ ಸ್ಥಳದಲ್ಲಿದ್ದವರನ್ನು ವಿಚಾರಣೆ ಮಾಡಿ ಚಿನ್ನಾಭರಣ ಪತ್ತೆ ಮಾಡಿ ನೀಡಿ ಎಂದು ಸಿರುವೆಲ್ಲಾ ಶ್ರೀದೇವಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂಬಂಧಿಕರ ಕೃತ್ಯ?:

ಶ್ರೀದೇವಿ ಅವರು ಇದ್ದ ಕೊಠಡಿಗೆ ಒಟ್ಟು 3 ಕೀಗಳು ಇದ್ದು, ಉಳಿದ ಎರಡು ಕೀ ಸಂಬಂಧಿಕರ ಬಳಿ ಇತ್ತು. ಅವರೇ ಬೀಗ ತೆಗೆದು ಕಳ್ಳತನ ಮಾಡಿಕೊಂಡು ಹೋಗಿರುವ ಶಂಕೆಯಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.