ರಾಜೇಂದ್ರ ಶ್ರೀಗಳು ಅಪ್ಪಟ ದೇಶಪ್ರೇಮಿ: ಪ್ರೊ.ದೇವಣ್ಣ

KannadaprabhaNewsNetwork | Published : Sep 22, 2024 1:47 AM

ಸಾರಾಂಶ

ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಭಾರತ, ಚೀನಾ ಯುದ್ಧ ನಡೆದಾಗ ತಮ್ಮ ಮಠ ಸಂಕಷ್ಟದಲ್ಲಿದ್ದರೂ ತಮ್ಮ ಚಿನ್ನದ ಕರಡಿಗೆಯನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದರು ಎಂದು ಜೆಎಸ್‌ಎಸ್ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ದೇವಣ್ಣ ಹೊಸಕೋಟೆ ತಿಳಿಸಿದರು. ಯಳಂದೂರಿನಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ೧೦೯ನೇ ಜಯಂತಿಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಅಪ್ಪಟ ದೇಶಪ್ರೇಮಿಯಾಗಿದ್ದರು. ಅವರ ಕಾಲದಲ್ಲಿ ಭಾರತ, ಚೀನಾ ಯುದ್ಧ ನಡೆದಾಗ ತಮ್ಮ ಮಠ ಸಂಕಷ್ಟದಲ್ಲಿದ್ದರೂ ತಮ್ಮ ಚಿನ್ನದ ಕರಡಿಗೆಯನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದು ಅವರ ದೇಶಭಕ್ತಿಗೆ ಸಾಕ್ಷಿಯಾಗಿದೆ ಎಂದು ಜೆಎಸ್‌ಎಸ್ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ದೇವಣ್ಣ ಹೊಸಕೋಟೆ ಅಭಿಪ್ರಾಯಪಟ್ಟರು.ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಹಾಗೂ ಅಕ್ಷರ ದಾಸೋಹ ಕೇಂದ್ರದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ೧೦೯ನೇ ಜಯಂತಿಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು. ರಾಜೇಂದ್ರ ಶ್ರೀಗಳು ತ್ಯಾಗ, ದಾನದಲ್ಲಿ ಅಂದೇ ಎಲ್ಲರನ್ನೂ ಮೀರಿಸಿದವರಾಗಿದ್ದರು. ಅಪ್ಪಟ ದೈವ ಭಕ್ತರಾಗಿದ್ದ ಇವರು ದೇವರಲ್ಲಿ ಭಯ ಮಿಶ್ರಿತ ಭಕ್ತಿಯಿಂದ ದೇಶ ವಿದೇಶದಲ್ಲೇ ಉನ್ನತ ಸಾಧನೆಯನ್ನು ಮಾಡಲು, ಸಂಸ್ಥೆಯನ್ನು ಕಟ್ಟಲು ಪಣತೊಟ್ಟು ಅದನ್ನು ಸಾಧಿಸಿ ತೋರಿಸಿದ ಮಹಾನ್ ಸಾಧಕರಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅವರಲ್ಲಿದ್ದ ಶ್ರದ್ಧೆ, ಬಡವರ ಪರವಾದ ಮಾತೃಹೃದಯವೇ ಕಾರಣವಾಗಿದೆ.

ಸುತ್ತೂರು ಗುರುಪರಂಪರೆಗೆ ೧೦ನೇ ಶತಮಾನದ ನಂಟಿದೆ. ಮಹದೇಶ್ವರರಿಗೂ ಕಾಯಕವನ್ನು ನೀಡಿದ ಮಠ ಇದಾಗಿದೆ. ಅಂದಿನಿಂದ ಇಂದಿನವರೆಗೂ ಇಲ್ಲಿ ಆಗಿಹೋಗಿರುವ ಸ್ವಾಮಿಜಿಗಳು ಈ ಪರಂಪರೆಯನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮಠದ ಪರಂಪರೆಗೆ ತನ್ನದೇ ಭವ್ಯ ಐತಿಹ್ಯವಿದೆ. ಇವರಿಂದ ಇಂದಿನ ಪೀಳಿಗೆ ಮಾನವೀಯ ಸಂಸ್ಕಾರ, ವಿನಯವನ್ನು ಕಲಿಯಬೇಕಿದೆ. ಈಗಿರುವ ಜಗದ್ಗುರುಗಳು ಈ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕಾಯಕವನ್ನು ಮಾಡುತ್ತಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಮಾಡಬೇಕು. ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಚೆನ್ನಾಗಿ ಕಲಿತು ನೌಕರಿ ಗಳಿಸಿ ಇತರರಿಗೆ ಮಾದರಿಯಾಗುವ ಕೆಲಸವನ್ನು ಮಾಡಬೇಕು ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ಮಂಜುನಾಥ ಪ್ರಸನ್ನ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಇಂದು ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ನೀಡುತ್ತಿದೆ. ಆರೋಗ್ಯ ಕ್ಷೇತ್ರದಲ್ಲೂ ಗುಣಮಟ್ಟದ ಚಿಕಿತ್ಸೆಯನ್ನು ಕಡಿಮೆ ಬೆಲೆಯಲ್ಲಿ ನೀಡುತ್ತಿದೆ. ಅಲ್ಲದೆ ಇಲ್ಲಿ ಕಲಿತ ಲಕ್ಷಾಂತರ ಮಂದಿ ದೇಶ ವಿದೇಶಗಳಲ್ಲಿ ದುಡಿಯುತ್ತಿದ್ದು ಮಠದ ಜೊತೆ ಇಂದಿಗೂ ಕೂಡ ನಿಖಟ ಸಂಪರ್ಕವನ್ನು ಹೊಂದಿರುವುದು ಇಲ್ಲಿರುವ ಗುರುಪರಂಪರೆಗೆ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ವ್ಯಾಸಂಗ ನೀಡುವ ಕೆಲಸವನ್ನು ಮಾಡುತ್ತಿರುವ ಸಂಸ್ಥೆಯ ಸೇವೆ ಪೂಜ್ಯನೀಯವಾಗಿದೆ ಎಂದರು.ಇದಾದ ಬಳಿಕ ಶಾಲಾ, ಕಾಲೇಜು ಮಕ್ಕಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಗೌಡಹಳ್ಳಿ ವಿರಕ್ತ ಮಠದ ಶ್ರೀ ಮರಿತೋಂಟದಾರ್ಯ ಸ್ವಾಮೀಜಿ ಮಾತನಾಡಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಜಂಟಿ ನಿದೇಶಕ ಶಿವಮಾದಪ್ಪ, ಸಮಾಜ ಸೇವಕ ದುಗ್ಗಹಟ್ಟಿ ಪಿ. ವೀರಭದ್ರಪ್ಪ, ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ಚಂದ್ರಶೇಖರ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿ. ಚಂದ್ರಕಲಾ, ಉಪನ್ಯಾಸಕರಾದ ಅಕ್ಕಮಹಾದೇವಮ್ಮ, ಆರ್. ಉಮೇಶ್, ಬಿಂದು, ನಾಗಮಂಜುಳಾ, ಮಾಲತಿ ಶಶಿಧರ್ ಸೇರಿದಂತೆ ಇತರರು ಹಾಜರಿದ್ದರು.

Share this article