ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹೆಚ್ಚುವರಿ ಅಪರ ನ್ಯಾಯಧೀಶೆ ಸುಕನ್ಯಾ ಅವರು ಈ ವೇಳೆ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋರಿಗೆ ಜಾಮೀನು ನೀಡಿ, ರಾಜೀವ್‌ಗೌಡಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿ ಚಿಂತಾಮಣಿಯ ಉಪ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಸೋಮವಾರ ಸಂಜೆ ಸೋಮವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಕೇರಳದ ಮಲ್ಲಪುರಂನ ವಾಜಿಕಡೈ ಬಳಿ ರಾಜೀವ್ ಗೌಡ ಮತ್ತು ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋರನ್ನು ಬಂಧಿಸಿ ಕರೆತಂದು ಚಿಕ್ಕಬಳ್ಳಾಪುರ ಪೋಲಿಸ್ ಅತಿಥಿಗೃಹದಲ್ಲಿ ಮಂಗಳವಾರ ಮದ್ಯಾಹ್ನದವರೆಗೂ ವಿಚಾರಣೆ ನಡೆಸಿ, ನಂತರ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ಪೋಲಿಸರು ಮಧ್ಯಾಹ್ನ ನಾಲ್ಕರ ಸುಮಾರಿಗೆ ಶಿಡ್ಲಘಟ್ಟ ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.ಈ ವೇಳೆ ಆರೋಪಿಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಆಗಮಿಸಿ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿ, ವಾದ ಮಂಡಿಸಿ, ಆರೋಪಿ ಈಗಾಗಲೇ ಕ್ಷಮೆ ಕೂಡ ಕೇಳಿದ್ದಾರೆ. ಘಟನೆ ಆಗಿರೋದು ಜ. 12ಕ್ಕೆ, ಆದರೆ ದೂರು ದಾಖಲಾಗಿರೋದು 14ಕ್ಕೆ. ಈ ಎರಡು ದಿನದಲ್ಲಿ ದೂರುದಾರೆ ಅಮೃತಾ ಗೌಡ ಹಾಗೂ ಆರೋಪಿ ರಾಜೀವ್ ಗೌಡರ ನಡುವೆ ಸಂಧಾನ ಕೂಡ ನಡೆದಿದೆ. ಆದರೂ ದೂರುದಾರರು ಉದ್ದೇಶ ಪೂರ್ವಕವಾಗಿ ದೂರು ನೀಡಿದ್ದಾರೆ. ಇಲ್ಲಿ ರಾಜಕೀಯ ಶಕ್ತಿಗಳ ಕೈವಾಡ ಕೂಡ ಇದೆ. ರಾಜಕೀಯ ಒತ್ತಡದಿಂದ ತಡವಾಗಿ ದೂರು ನೀಡಿದ್ದಾರೆ.
ಅಂದರೆ ಇವರ ಉದ್ದೇಶವೇ ನನ್ನ ಕಕ್ಷೀದಾರ ರಾಜೀವ್ ಗೌಡರನ್ನು ಜೈಲಿಗೆ ಹಾಕಬೇಕು. ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ. ಹೀಗಾಗಿಯೇ ಬಿಎನ್ಎಸ್ 13ಸ್ಸೆಕ್ಷನ್ ಸೇರಿದ್ದಾರೆ. ಹೀಗಾಗಿ ಮಧ್ಯಂತರ ಜಾಮೀನು ಕೊಡಿ. ಯಾವುದೇ ಕಂಡೀಷನ್ ಹಾಕಿದರೂ ಸರಿ. ಅದಕ್ಕೆ ಸಿದ್ದರಾಗಿದ್ದಾರೆ. ನನ್ನ ಕಕ್ಷಿದಾರರು ಸಮಾಜ ಸೇವೆ ಮಾಡಿಕೊಂಡು ರಾಜಕೀಯದಲ್ಲಿದ್ದಾರೆ . ದಯವಿಟ್ಟು ಅವರ ಸಾರ್ವಜನಿಕ ಜೀವನ, ಸಾಮಾಜಿಕ ಸ್ಥಿತಿ, ಇದೆಲ್ಲ ನೋಡಿ ಜಾಮೀನು ಕೊಡಿ ಎಂದು ಮನವಿ ಮಾಡಿದರು.ಸಹಾಯಕ ಸರ್ಕಾರಿ ಅಭಿಯೋಜಕ ಮಹಮ್ಮದ್ ಖಾಜಾ ಅವರು ಇದಕ್ಕೆಲ್ಲಾ ವಿರೋಧಿಸಿ ಆರೋಪಿ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಾಕ್ಷ್ಯ ನಾಶಪಡಿಸೊ ಸಂಭವವಿರುವುದರಿಂದ ಜಾಮೀನು ನೀಡಬಾರದೆಂದು ಮನವಿ ಮಾಡಿದರು.
ಮತ್ತೊಬ್ಬ ಆರೋಪಿ ರಾಜೀವ್ ಗೌಡಗೆ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋ ಪರ ವಕೀಲರು ವಾದ ಮಂಡಿಸಿ, ಆರೋಪಿಗೂ ರಾಜೀವ್ ಗೌಡ ಗೂ ಯಾವುದೇ ಫೋನ್ ಸಂಪರ್ಕ ಇಲ್ಲ. ಪೋನ್‌ನಲ್ಲಿ ಯಾವುದೇ ಸಂಭಾಷಣೆ ನಡೆಸಿಲ್ಲ. ಬರೀ ಜೊತೆಯಲ್ಲಿ ಇಂದು ಕಪ್ ಟೀ ಕುಡಿದಿದ್ದಾರೆ ಅಷ್ಟೇ. ರಾಜೀವ್ ಗೌಡ ಅಪರಾಧ ಪ್ರಕರಣದ ವಿಚಾರಗಳು ಯಾವುದೂ ಆರೋಪಿಗೆ ಗೊತ್ತಿಲ್ಲ. ಜೊತೆಯಲ್ಲಿ ಇದ್ದ ಕಾರಣಕ್ಕೆ ಪೋಲಿಸರು ಬಂಧನ ಮಾಡಿ ಕರೆದುಕೊಂಡು ಬಂದಿದ್ದಾರೆ.ಅಕ್ರಮವಾಗಿ ಆರೋಪಿಗೆ ಆಶ್ರಯ ನೀಡಿದ್ದಾರೆ ಎಂದು ಕೇಸ್ ಹಾಕಿದ್ದಾರೆ. ಈ ಸೆಕ್ಷನ್ ಶಿಕ್ಷೆ ಪ್ರಮಾಣ ಕೂಡ 3 ವರ್ಷಗಳದ್ದಾಗಿದ್ದು, ಇದು ಕೂಡ ಜಾಮೀನು ನೀಡಬಹುದಾದ ಸೆಕ್ಷನ್ ಆಗಿದೆ. ಹೀಗಾಗಿ ಮೈಕಲ್ ಜಾಮೀನು ಕೊಡಿ ಅಂತ ಮನವಿ ಮಾಡಿದರು. ವಾದ ವಿವಾದ ಆಲಿಸಿದ ಹೆಚ್ಚುವರಿ ಅಪರ ನ್ಯಾಯಧೀಶೆ ಸುಕನ್ಯಾ ಅವರು ಎರಡನೇ ಆರೋಪಿ ಮೈಕಲ್ ಜೋಸೆಫ್ ರೇಗೋರಿಗೆ ಶರತ್ತು ಬದ್ಧ ಜಾಮೀನು ನೀಡಿ, ಒಂದನೇ ಆರೋಪಿ ರಾಜೀವ್ ಗೌಡರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನನಕ್ಕೆ ಆದೇಶ ನೀಡಿದರು.
ಪೋಲಿಸರು ಬಾರಿ ಬಿಗಿ ಭದ್ರತೆಯೊಂದಿಗೆ ರಾಜೀವ್ ಗೌಡರನ್ನು ಶಿಡ್ಲ ಘಟ್ಟದಿಂದ ಚಿಂತಾಮಣಿಯ ಉಪ ಕಾರಾಗೃಹಕ್ಕೆ ಕರೆದೊಯ್ದರು.ಜಾಮೀನು ಸಿಗೋ ನಿರೀಕ್ಷೆಯಲ್ಲಿದ್ದ ಆರೋಪಿ ರಾಜೀವ್ ಗೌಡ ಜೈಲುಪಾಲಾದರು. ರಾಜೀವ್ ಗೌಡಗೆ ಜಾಮೀನು ಕೊಡಲು ಇಬ್ಬರು ವ್ಯಕ್ತಿಗಳು, ಆಸ್ತಿ ಪತ್ರಗಳ ಜೊತೆಗೆ ಆಗಮಿಸಿದ್ದರು. ಜಾಮೀನು ಸಿಕ್ಕರೇ ಕೋರ್ಟ್ ನಲ್ಲೇ ಶೂರಿಟಿ ನೀಡಲು ಸಿದ್ದರಿದ್ದರು. ಕೋರ್ಟ್ ಬಳಿ ರಾಜೀವ್ ಗೌಡನ ನೂರಾರು ಬೆಂಬಲಿಗರು ಆಗಮಿಸಿ, ರಾಜೀವ್ ಗೌಡ ಜಾಮೀನಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯಗಳು ಸಹಜವಾಗಿದ್ದವು. ಕೋರ್ಟ್ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿಯಾಗಿ ಪೋಲಿಸರನ್ನು ನಿಯೋಜಿಸಲಾಗಿತ್ತು.
ಸಿಕೆಬಿ-2 ಆರೋಪಿ ರಾಜೀವ್ ಗೌಡನನ್ನು ಕೋರ್ಟಿಗೆ ಕರೆ ತರುತ್ತಿರುವ ಪೋಲಿಸರು