ಬಂದೇನವಾಜ್ ಮ್ಯಾಗೇರಿ
ಹೌದು! ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಬರುವ ತಾಲೂಕಿನ ರಾಜೂರು ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ, ಊರ ಪ್ರೀತಿ, ಒಗ್ಗಟ್ಟಿನ ಶ್ರಮದಾನ, ಸ್ವಚ್ಛತೆಯ ಜಾಗೃತಿಯ ದೊಡ್ಡ ನಿದರ್ಶನವೇ ದಿಗ್ದರ್ಶನವಾಗುತ್ತದೆ. ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದರಿಂದ ಇಡೀ ಊರಿಗೆ ಊರೆ ಕಂಗೊಳಿಸುತ್ತಿದೆ. ಹ್ಯಂಗಿದ್ದ ಊರು ಹ್ಯಂಗಾತು ಎನ್ನುವ ಉದ್ಘಾರ ತನ್ನಿಂದ ತಾನೇ ಹೊರಡುತ್ತದೆ.
ದುರ್ನಾತದ ತವರು: ಗ್ರಾಮದ ನಡುವೆಯೇ ಹೆದ್ದಾರಿ ಹಾದು ಹೋಗಿದೆ. ರಸ್ತೆಯ ಇಕ್ಕೆಲದಲ್ಲಿ ಹಸಿ ಕಸ, ಮುಳ್ಳಿನ ಕಂಠಿ ಬೆಳೆದು ಭೀತಿ ಹುಟ್ಟಿಸುವಂತಿತ್ತು. ಎಲ್ಲೆಡೆಯೂ ತ್ಯಾಜ್ಯದ ರಾಶಿಯೇ ಬಿದ್ದಿತ್ತು. ಇದು ಹುಳು-ಹುಪ್ಪಡಿ, ಹಂದಿ, ಹೆಗ್ಗಣಗಳ ಆವಾಸ ಸ್ಥಾನವಾಗಿತ್ತು. ಜತೆಗೆ ಪ್ಲಾಸ್ಟಿಕ್ ಸೇರಿದಂತೆ ಒಣಗಿದ ತೆಂಗಿನ ಗರಿ, ಕಸ-ಕಡ್ಡಿ ಹರಡಿಕೊಂಡು ಗಬ್ಬೆದ್ದು ನಾರುತ್ತಿತ್ತು. ಗ್ರಾಮಸ್ಥರೆಲ್ಲ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದರೇ ವಿನಃ ಒಂದು ಕಸದ ತುಂಡನ್ನೂ ಪಕ್ಕಕ್ಕೆ ಸರಿಸುತ್ತಿರಲಿಲ್ಲ. ಹಾಗಾಗಿ ರಾಜೂರು ದುರ್ನಾತದ ತವರು ಎನ್ನುವಂತಾಗಿತ್ತು.ಊರ ಹೊಣೆಗಾರಿಕೆ: ನಿತ್ಯವೂ ಇದನ್ನು ನೋಡಿ ನೋಡಿ ಬೇಸತ್ತ ಗ್ರಾಮದ ಸಮಾನ ಮನಸ್ಕ ಗೆಳೆಯರು ಒಂದೆಡೆ ಸೇರಿ ಚರ್ಚಿಸಿದರು. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಗ್ರಾಮದ ಮರ್ಯಾದೆ ಮೂರುಪಾಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಶ್ರಮದಾನವೇ ಇದಕ್ಕೆ ಪರಿಹಾರವೆಂದು ತೀರ್ಮಾನಿಸಿ, ಸ್ವಚ್ಛತಾ ಕಾರ್ಯಕ್ಕೆ ಅಣಿಯಾದರು.
ಈ ಮೊದಲು ಇಲ್ಲಿನ ಸರ್ಕಾರಿ ಶಾಲಾ ಮಕ್ಕಳು ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಸಂಚರಿಸುವ ವಾಹನಗಳ ಮಧ್ಯೆಯೇ ನಡೆದು ಹೋಗುತ್ತಿದ್ದರು. ಹೆದ್ದಾರಿ ಪಕ್ಕ ಗ್ರಾಮಸ್ಥರು ಕಟ್ಟಿಗೆ, ಕುಳ್ಳು, ಕಲ್ಲು, ಮಣ್ಣು ಹಾಕಿದ್ದರು. ಇದನ್ನು ತಪ್ಪಿಸಲೆಂದು ಸಾರ್ವಜನಿಕರ ಸಹಭಾಗಿತ್ವದಲ್ಲಿ ವೇದಿಕೆಯು ಎಲ್ಲವನ್ನೂ ತೆರವುಗೊಳಿಸಿ, ಮಕ್ಕಳಿಗೆ ಪಾದಚಾರಿ ಮಾರ್ಗದಲ್ಲಿ ತೆರಳುವಂತೆ ಸುಗಮಗೊಳಿಸಲಾಯಿತು.
ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ 350 ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ ಈ ಗಿಡಗಳ ಸಂಖ್ಯೆ ಹೆಚ್ಚಲಿದೆ. ಪರಿಸರ ಸ್ವಚ್ಛ, ಸುಂದರರವಾಗಿದ್ದರೆ ನಮ್ಮ ಜೀವನವೂ ನೆಮ್ಮದಿಯಿಂದ ಇರುತ್ತದೆ ಎನ್ನುವುದು ವೇದಿಕೆಯ ನಂಬಿಕೆ.