ಕರ್ನಾಟಕ ಸಂಘಕ್ಕೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork | Published : Nov 1, 2023 1:00 AM

ಸಾರಾಂಶ

ನೂರಾರು ಜನರಿಗೆ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ನೀಡಿದ, ಸಾವಿರಾರು ಸಾಹಿತಿಗಳನ್ನು ಮುನ್ನೆಲೆಗೆ ತಂದಿರುವ ಹೆಗ್ಗಳಿಕೆ
ಕನ್ನಡಪ್ರಭವಾರ್ತೆ ಶಿವಮೊಗ್ಗ 93 ವರ್ಷಗಳಷ್ಟು ದೀರ್ಘ ಇತಿಹಾಸವುಳ್ಳ, ಕನ್ನಡದ ಸಾಹಿತ್ಯ ಶ್ರೇಷ್ಠ ಪರಂಪರೆಯ ದಿಗ್ಗಜರಿಂದ ಪ್ರೇರೇಪಿಸಲ್ಪಟ್ಟು ಸ್ಥಾಪಿಸಲ್ಪಟ್ಟ, ಕನ್ನಡದ ಮೇರುಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕುವೆಂಪು ಅವರಿಂದ ಉದ್ಘಾಟಿಸಲ್ಪಟ್ಟ ಕರ್ನಾಟಕ ಸಂಘಕ್ಕೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ನೂರಾರು ಜನರಿಗೆ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ನೀಡಿದ, ಸಾವಿರಾರು ಸಾಹಿತಿಗಳನ್ನು ಮುನ್ನೆಲೆಗೆ ತಂದ, ಅಸಂಖ್ಯಾತ ಸಾಹಿತ್ಯಾಸಕ್ತರಿಗೆ ಸಾಹಿತ್ಯ ಪ್ರೇರೇಪಣೆ ನೀಡಿದ ಕರ್ನಾಟಕ ಸಂಘ ಕೊನೆಗೂ ರಾಜ್ಯ ಸರ್ಕಾರದಿಂದ ಪುರಸ್ಕಾರಗೊಂಡಿದೆ. ಈ ಮೊದಲು ಕನ್ನಡದ ಕಾರ್ಯ ಮತ್ತು ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳನ್ನು ಗುರುತಿಸಿ ಧಾರವಾಡದ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ ಪ್ರಶಸ್ತಿ, ಕರ್ನಾಟಕ ಸರ್ಕಾರವು ಕೊಡಮಾಡುವ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ, ಕಂಪ್ಲಿ ಕರ್ನಾಟಕ ಸಂಘ ಪ್ರಶಸ್ತಿ, ಮಂಡ್ಯ ಕರ್ನಾಟಕ ಸಂಘ ಪ್ರಶಸ್ತಿ, ಕಾರ್ಕಳದ ಪ್ರೊ. ಎಂ.ರಾಮಚಂದ್ರ ಅಭಿನಂದನಾ ಸಮಿತಿ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಡಾ. ನಾ.ಮೊಗಸಾಲೆ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಶಂಸನಾ ಪತ್ರ, ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರಿನಲ್ಲಿ ನಡೆದ ಪ್ರಕಾಶಕರ ದ್ವಿತೀಯ ಸಮ್ಮೇಳನದಲ್ಲಿ ಗೌರವ ಸನ್ಮಾನ ಸೇರಿದಂತೆ ಹಲವಾರು ಪ್ರಶಸ್ತಿಗಳು ಈಗಾಗಲೇ ಕರ್ನಾಟಕದ ಸಂಘದ ಮಡಿಲು ಸೇರಿವೆ. ಮಲೆನಾಡಿನ ಕೇಂದ್ರ ಸ್ಥಾನದಲ್ಲಿ ಮೈದಳೆದು, ಕನ್ನಡ ನಾಡು-ನುಡಿ ಕಟ್ಟುವ ನಿಟ್ಟಿನಲ್ಲಿ ರಚನಾತ್ಮಕ, ಕ್ರಿಯಾತ್ಮಕ ಚಟುವಟಿಕೆಗಳನ್ನು ಅನೂಚಾನವಾಗಿ ನಡೆಸಿಕೊಂಡ ಬಂದ ಕರ್ನಾಟಕ ಸಂಘ ಮಲೆನಾಡಿನ ಸಾಹಿತ್ಯದ ಅಸ್ಮಿತೆಯಾಗಿ ರೂಪುಗೊಂಡಿದೆ. ಕರ್ನಾಟಕ ಸಂಘಕ್ಕೆ ತನ್ನದೇ ಆದ ಇತಿಹಾಸ, ಗೌರವ, ಪರಂಪರೆ ಇದೆ. ಸ್ವಾತಂತ್ರ್ಯ ಹೋರಾಟದ ಕೊನೆಯ ಹಂತದಲ್ಲಿ ಜನ್ಮತಳೆದು ಸ್ವಾತಂತ್ರ್ಯದ ಹೋರಾಟದಲ್ಲಿ ಪರೋಕ್ಷವಾಗಿ ತೊಡಗಿಸಿಕೊಳ್ಳುತ್ತಲೇ ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ನೇರವಾಗಿ ಹೋರಾಟದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಈ ಸಂಘದ್ದು. ಮುಂದಿನ ಪೀಳಿಗೆಗೆ ಸಾಹಿತ್ಯ, ಸಂಸ್ಕೃತಿಯನ್ನು ದಾಟಿಸುವ, ಸಮಾಜದಲ್ಲಿ ಸಾಹಿತ್ಯ, ಕಲೆಯ ಅಭಿರುಚಿಯನ್ನು ಬೆಳೆಸುವ, ಸಾಹಿತ್ಯ ಪೂರಕ ಚಟುವಟಿಕೆಯನು ನಿರಂತರವಾಗಿ ನಡೆಸುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ ಕರ್ನಾಟಕ ಸಂಘ. 1930ರ ನವಂಬರ್‌ 8ರಂದು ಡಾ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಮತ್ತು ಡಾ. ದ.ರಾ. ಬೇಂದ್ರೆ ಅವರ ಪ್ರೇರಣೆಯಿಂದ ಈ ಸಂಘವನ್ನು ರಾಷ್ಟ್ರಕವಿ ಕುವೆಂಪು ಉದ್ಘಾಟಿಸಿದರು. ಆಗಿನ ನಗರಸಭೆ ನೀಡಿದ ಜಾಗದಲ್ಲಿ ಉದ್ಯಮಿ ಮತ್ತು ಸಾಹಿತ್ಯಾಸಕ್ತರಾದ ಹಸೂಡಿ ವೆಂಕಟಶಾಸ್ತ್ರಿಗಳು ನೀಡಿದ ಆರ್ಥಿಕ ನೆರವಿನಿಂದ ಕಟ್ಟಡ ಕಟ್ಟಿದ್ದರಿಂದ ಇದಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಈ ಕಟ್ಟಡಕ್ಕೆ 1942ರಲ್ಲಿ ಬಿ.ಎಂ.ಶ್ರೀ ಅವರು ಶಂಕುಸ್ಥಾಪನೆ ಮಾಡಿದರೆ, 1943ರಲ್ಲಿ ಮೈಸೂರಿನ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದ್ದರು. ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿ ನಿರ್ಮಾಣವಾದ ಈ ಕಟ್ಟಡ ಕಾರ್ಯಕ್ರಮದ ಸಭಾಂಗಣ, ಕಚೇರಿ, ವಾಹನ ನಿಲ್ದಾಣ ಎಲ್ಲವನ್ನೂ ಹೊಂದಿದೆ. ಪ್ರತಿವರ್ಷ ಶ್ರೇಷ್ಠ ಸಾಹಿತಿಗಳ ಹೆಸರಿನಲ್ಲಿ ಪುಸ್ತಕ ಬಹುಮಾನ ನೀಡಲಾಗುತ್ತಿದೆ. ಜಿಲ್ಲೆಯ ಶ್ರೇಷ್ಠ ಸಾಹಿತಿಗಳಿಗೆ, ವಿವಿಧ ವಿವಿಗಳ ಗೌರವ ಡಾಕ್ಟರೇಟ್ ಪುರಸ್ಕೃತರಿಗೆ ಸಂಘವು ಗೌರವ ಸದಸ್ಯತ್ವ ನೀಡುತ್ತಲಿದೆ. ಕನ್ನಡ ನಾಡು- ನುಡಿಗಾಗಿ ಶ್ರಮಿಸಿದವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಕೂಡ ನೀಡಿ ಗೌರವಿಸುತ್ತಿದೆ. ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಹಿರಿಮೆ ಕೂಡ ಈ ಕರ್ನಾಟಕ ಸಂಘಕ್ಕೆ ಇದೆ. - - - -31ಕೆಪಿಎಸ್ ಎಂಜಿ16: ಕರ್ನಾಟಕ ಸಂಘ ಭವನ - - - ಕೋಟ್ ಶಿವಮೊಗ್ಗ: ನಮ್ಮ ಹೆಮ್ಮೆಯ ಕರ್ನಾಟಕ ಸಂಘವನ್ನು ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ತುಂಬ ಸಂತಸದ ವಿಷಯ ಎಂದು ಕರ್ನಾಟಕ ಸಂಘ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಹೇಳಿದ್ದಾರೆ. ಕಳೆದ ಒಂಬತ್ತು ದಶಕಗಳಿಗಿಂತಲೂ ಅಧಿಕ ಕಾಲದಿಂದ ಕನ್ನಡಪರ ಕೆಲಸ ಮಾಡಿಕೊಂಡು ಕರ್ನಾಟಕ ಸಂಘ ಪ್ರತಿ ವರ್ಷವೂ ವೈವಿಧ್ಯಮಯ ಕಾರ್ಯಕ್ರಮಗಳಿಂದ ಜನಪ್ರಿಯತೆ ಗಳಿಸಿದೆ. ಇದೀಗ ರಾಜ್ಯ ಸರ್ಕಾರ ನೀಡಿದ ಈ ಪ್ರಶಸ್ತಿ ಕೇವಲ ಸಂಘಕ್ಕಲ್ಲ, ಇದರ ಸ್ಥಾಪನೆ, ಬೆಳವಣಿಗೆಗೆ ಶ್ರಮಿಸಿದ ಹಿರಿಯರು, ಸದಸ್ಯರು ಮತ್ತು ಶಿವಮೊಗ್ಗದ ಜನತೆಗೆ ಸೇರಿದ್ದು ಎಂದಿದ್ದಾರೆ. ಸ್ವಾಭಿಮಾನಕ್ಕೆ ಹೆಸರಾದ ನಮ್ಮ ಸಂಘ ಇದುವರೆಗೂ ಸರ್ಕಾರದ ಅನುದಾನ ಪಡೆಯದೇ, ಯಾರಿಂದಲೂ ದೇಣಿಗೆ ಬಯಸದೇ ಸಾಹಿತ್ಯ ಸೇವೆ ಮಾಡುತ್ತಿದೆ. 1943ರಲ್ಲಿ ಬೇಂದ್ರೆ ಅವರ ಅಧ್ಯಕ್ಷತೆಯಲ್ಲಿ ನಮ್ಮ ಸಂಘದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಡೀ ಕರ್ನಾಟಕದಲ್ಲಿ ಮೊದಲ ಬಾರಿಗೆ ಕರ್ನಾಟಕ ಏಕೀಕರಣದ ಕಹಳೆ ಊದಲಾಯಿತು. ಇಂದಿಗೂ ಕನ್ನಡದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಕರ್ನಾಟಕ ಸಂಘಕ್ಕೆ ಪ್ರಶಸ್ತಿಯ ಗರಿ ನೂರ್ಮಡಿ ಉತ್ಸಾಹ ತುಂಬಿಸಿದೆ ಎಂದು ಎಂ.ಎನ್.ಸುಂದರ ರಾಜ್ ಸ್ಮರಿಸಿದ್ದಾರೆ. - - - -31ಕೆಪಿಎಸ್ ಎಂಜಿ13: ಎಂ.ಎನ್.ಸುಂದರ ರಾಜ್

Share this article