ನಾದಸ್ವರ ವಿದ್ವಾನ್ ನಾರಾಯಣಸ್ವಾಮಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

KannadaprabhaNewsNetwork |  
Published : Nov 01, 2026, 02:30 AM IST
ಅಂತಾರಾಷ್ಟ್ರೀಯ ನಾದಸ್ವರ ವಿದ್ವಾನ್ ಡಾ. ನಾರಾಯಣಸ್ವಾಮಿ ಅವರಿಗೆ ೨೦೨೬ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಗರಿ | Kannada Prabha

ಸಾರಾಂಶ

೬೭ ವರ್ಷದ ನಾರಾಯಣಸ್ವಾಮಿ ಅವರು ಕಳೆದ ಐದು ದಶಕಗಳಿಂದ ತಮ್ಮ ಪೂರ್ವಿಕರ ಹಾಗೂ ಮನೆತನದ ನಾದಸ್ವರ ಪರಂಪರೆಯನ್ನು ಮುಂದುವರಿಸಿಕೊಂಡು ಬರುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲೂ ನಾದಸ್ವರ ಕಚೇರಿಗಳನ್ನು ನೀಡಿ ಪ್ರಾಚೀನ ಸಂಗೀತ ಕಲೆಯನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಮಹತ್ವದ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸುದೀರ್ಘ ಸಂಗೀತ ಸೇವೆಯನ್ನು ಗುರುತಿಸಿ ಅಮೆರಿಕದ ನ್ಯಾಷನಲ್ ವರ್ಚುವಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಹಿರಿಯ ಅಂತಾರಾಷ್ಟ್ರೀಯ ನಾದಸ್ವರ ವಿದ್ವಾನ್ ಡಾ. ನಾರಾಯಣಸ್ವಾಮಿ ಅವರಿಗೆ ೨೦೨೬ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ. ಈ ಬಾರಿಯಾದರೂ ಇವರಿಗೆ ಪ್ರಶಸ್ತಿ ಸಿಗಲಿದೆಯೇ ಎಂದು ಕಳೆದ ವಾರವಷ್ಟೇ ‘ಕನ್ನಡ ಪ್ರಭ’ ದಿನಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು.

೬೭ ವರ್ಷದ ನಾರಾಯಣಸ್ವಾಮಿ ಅವರು ಕಳೆದ ಐದು ದಶಕಗಳಿಂದ ತಮ್ಮ ಪೂರ್ವಿಕರ ಹಾಗೂ ಮನೆತನದ ನಾದಸ್ವರ ಪರಂಪರೆಯನ್ನು ಮುಂದುವರಿಸಿಕೊಂಡು ಬರುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲೂ ನಾದಸ್ವರ ಕಚೇರಿಗಳನ್ನು ನೀಡಿ ಪ್ರಾಚೀನ ಸಂಗೀತ ಕಲೆಯನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಮಹತ್ವದ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸುದೀರ್ಘ ಸಂಗೀತ ಸೇವೆಯನ್ನು ಗುರುತಿಸಿ ಅಮೆರಿಕದ ನ್ಯಾಷನಲ್ ವರ್ಚುವಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.

ಕಡೆವರೆಗೂ ಕಲಾ ಸೇವೆ ಮುಂದುವರಿಸುವೆ:

ಪ್ರಶಸ್ತಿ ಲಭಿಸಿದ ಕುರಿತು ಸಂತಸ ಹಂಚಿಕೊಂಡ ಅವರು, "ನಾನು ಬಾಲಕನಾಗಿದ್ದಾಗಿನಿಂದಲೂ ನಾದಸ್ವರ ಕಲೆಯನ್ನು ತಪಸ್ಸಿನಂತೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಆರಾಧಿಸಿಕೊಂಡು ಬಂದಿದ್ದೇನೆ. ನನ್ನ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಸರ್ಕಾರ ಈ ಪ್ರಶಸ್ತಿ ನೀಡಿರುವುದು ಅತೀವ ಸಂತೋಷ ತಂದಿದೆ. ಇಂದಿನ ಯುವ ಸಮುದಾಯ ಪಾಶ್ಚಾತ್ಯ ಸಂಗೀತದತ್ತ ಆಕರ್ಷಿತವಾಗುತ್ತಿದ್ದರೂ, ನಮ್ಮ ಪುರಾತನ ಕಲೆ-ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ. ಕೊನೆಯುಸಿರಿರುವವರೆಗೂ ಕಲಾ ಸೇವೆಯನ್ನು ಮುಂದುವರಿಸುವೆ ಹಾಗೂ ಮುಂದಿನ ಪೀಳಿಗೆಗೆ ಈ ಕಲೆಯನ್ನು ಧಾರೆ ಎರೆಯಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಮುಂದುವರಿದು ಮಾತನಾಡಿದ ಅವರು, "ನಮ್ಮ ಮುತ್ತಾತ, ತಾತ, ನಾನು ಹಾಗೂ ಇದೀಗ ನನ್ನ ಪುತ್ರ ಸೇರಿದಂತೆ ನಾಲ್ಕು ತಲೆಮಾರುಗಳಿಂದ ಈ ಕಲಾ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದೇವೆ. ನಾದ ಸರಸ್ವತಿಯ ಕೃಪೆಯಿಂದ ನಮ್ಮ ಕುಟುಂಬ ಬೆಳೆದಿದೆ. ಈ ಪ್ರಶಸ್ತಿ ಬರಲು ತಾಲೂಕಿನ ಸಮಸ್ತ ಜನತೆಯ ಆಶೀರ್ವಾದವೇ ಕಾರಣ. ಇಂತಹ ಸಂದರ್ಭದಲ್ಲಿ ಸಹಕರಿಸಿದ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ. ಶಿವಲಿಂಗೇಗೌಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಹಾಗೂ ರಾಜ್ಯ ಸರ್ಕಾರಕ್ಕೆ ಹೃದಯಪೂರ್ವಕ ಧನ್ಯವಾದ ಅರ್ಪಿಸುವೆ, " ಎಂದು ಕೃತಜ್ಞತೆ ಸಲ್ಲಿಸಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ನಾರಾಯಣಸ್ವಾಮಿ ಅವರ ನಿವಾಸಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ. ಆನಂದ್, ಮಾಜಿ ಅಧ್ಯಕ್ಷ ರಾಮಚಂದ್ರ, ಸೇರಿದಂತೆ ಹಲವು ಗಣ್ಯರು ತೆರಳಿ ಶಾಲು ಹೊದಿಸಿ ಅಭಿನಂದಿಸಿದರು.ಕನ್ನಡ ಪ್ರಭ ವರದಿಗೆ ಸಂದ ಜಯ:

"ಅಂತಾರಾಷ್ಟ್ರೀಯ ಖ್ಯಾತಿಯ ನಾದಸ್ವರ ವಿದ್ವಾನ್ ಡಾ. ನಾರಾಯಣಸ್ವಾಮಿ ಅವರ ಐದು ದಶಕಗಳ ಅವಿರತ ಕಲಾ ಸೇವೆ, ನಾಲ್ಕು ತಲೆಮಾರುಗಳ ಸಂಗೀತ ಪರಂಪರೆ ಹಾಗೂ ಅವರಿಗೆ ಸಂದಿರುವ ಗೌರವ ಡಾಕ್ಟರೇಟ್‌ಗಳ ಕುರಿತು ‘ಕನ್ನಡ ಪ್ರಭ’ ದಿನಪತ್ರಿಕೆಯು ವಾರದ ಹಿಂದಷ್ಟೇ ವಿಶೇಷ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು.

​''''''''ಹಳ್ಳಿ-ಪಟ್ಟಣಗಳಿಂದ ಹಿಡಿದು ವಿದೇಶಗಳವರೆಗೂ ಶಾಸ್ತ್ರೀಯ ನಾದಸ್ವರದ ನಾದವನ್ನು ಪಸರಿಸಿದ ಈ ಹಿರಿಯ ಸಾಧಕನಿಗೆ ಈ ಬಾರಿಯಾದರೂ ಅತ್ಯುನ್ನತ ರಾಜ್ಯ ಪ್ರಶಸ್ತಿ ಒಲಿಯುವುದೇ? ಸರ್ಕಾರ ಈ ಮೇರು ಕಲಾವಿದನನ್ನು ಗುರುತಿಸುವುದೇ?'''''''' ಎಂದು ಪತ್ರಿಕೆಯು ಕಲಾಪ್ರೇಮಿಗಳ ನಿರೀಕ್ಷೆಯನ್ನು ಸರ್ಕಾರದ ಮುಂದಿಟ್ಟಿತ್ತು. ಇದೀಗ ಪ್ರಕಟವಾಗಿರುವ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಡಾ. ನಾರಾಯಣಸ್ವಾಮಿ ಅವರ ಹೆಸರು ಸೇರ್ಪಡೆಗೊಂಡಿರುವುದು ''''''''ಕನ್ನಡ ಪ್ರಭ'''''''' ವರದಿಯ ಬದ್ಧತೆ ಹಾಗೂ ಸಾರ್ಥಕತೆಗೆ ಸಾಕ್ಷಿಯಾಗಿದೆ. "

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ