ಕವಿ ಸತೀಶ ಕುಲಕರ್ಣಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

KannadaprabhaNewsNetwork | Published : Nov 1, 2023 1:00 AM

ಸಾರಾಂಶ

ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆ ಸದಾ ಜೀವಂತಿಕೆ ಇರುವಂತೆ ಕಾಪಿಟ್ಟುಕೊಂಡು ಬಂದಿರುವ ದಲಿತ, ಬಂಡಾಯ ಸಾಹಿತ್ಯ ಚಳವಳಿಯ ಹಿನ್ನೆಲೆ ಬಂದಿರುವ ಕವಿ, ಹಾವೇರಿಯ ಸತೀಶ ಕುಲಕರ್ಣಿ ಅವರನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಗರಿಮೆ ಹೆಚ್ಚಿಸಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆ ಸದಾ ಜೀವಂತಿಕೆ ಇರುವಂತೆ ಕಾಪಿಟ್ಟುಕೊಂಡು ಬಂದಿರುವ ದಲಿತ, ಬಂಡಾಯ ಸಾಹಿತ್ಯ ಚಳವಳಿಯ ಹಿನ್ನೆಲೆ ಬಂದಿರುವ ಕವಿ, ಹಾವೇರಿಯ ಸತೀಶ ಕುಲಕರ್ಣಿ ಅವರನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಗರಿಮೆ ಹೆಚ್ಚಿಸಿದೆ.

ಜುಲೈ ೧೩, ೧೯೫೧ರಂದು ಧಾರವಾಡ ಜಿಲ್ಲೆಯ ಗುಡಗೇರಿಯಲ್ಲಿ ಜನಿಸಿದ ಅವರು, ಸದ್ಯ ಹಾವೇರಿಯ ಬಸವೇಶ್ವರ ನಗರದ ನಿವಾಸಿಯಾಗಿದ್ದಾರೆ. ಬಿಎಸ್‌ಸಿ, ಎಂಎ ಪದವೀಧರರಾಗಿರುವ ಅವರು, ಹೆಸ್ಕಾಂನಲ್ಲಿ ಉದ್ಯೋಗಿಯಾಗಿದ್ದರು. ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಣನೀಯ. ಬೆಂಕಿ ಬೇರು, ನೆಲದ ನೆರಳು, ವಿಕ್ಷಿಪ್ತ, ಒಡಲಾಳ, ಕಿಚ್ಚು, ವಿಷಾದಯೋಗ, ಗಾಂಧಿ ಗಿಡ, ಕಂಪನಿ ಸವಾಲ್- ಕವನ ಸಂಕಲನಗಳು ಪ್ರಕಟಗೊಂಡಿವೆ. ಲೋಹಿಯಾ ಪ್ರಕಾಶನ ಪ್ರಕಟಿಸಿದ ಸತೀಶ ಸಮಗ್ರ ಕವಿತೆಗಳು, ಮೊಗಸಾಲೆ ಪ್ರಕಾಶನ ಪ್ರಕಟಿಸಿದ ಸಮಯಾಂತರ ಅತ್ಯುತ್ತಮ ಅರವತ್ತು ಕವಿತೆಗಳು ಓದುಗರ ಮೆಚ್ಚುಗೆ ಪಡೆದಿವೆ.

ಮರಾಠಿಯಿಂದ ಅನುವಾದಿತ ನಾಟಕ ಛಿನ್ನ, ಸತೀಶರ ಹತ್ತು ನಾಟಕಗಳು ರಂಗಾಸಕ್ತರ ಗಮನ ಸೆಳೆದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಕವಿತೆ ೯೩ ಮತ್ತು ಬಂಡಾಯದ ಗಟ್ಟಿದನಿ ಬರಗೂರು ರಾಮಚಂದ್ರಪ್ಪ ಸಂಪಾದಿಸಿರುವರು. ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮರಾರಕ ಟ್ರಸ್ಟ್‌ನಿಂದ ಸಮುದ್ರ ಸೂರ್ಯ, ಗುರುವರ್ಯ ಗೋಕಾಕರು ಸಂಪಾದಿತ ಕೃತಿಗಳು. ಓದೊಳಗಿನ ಓದು ವಿಮರ್ಶಾ ಕೃತಿಯನ್ನು ಸಿವಿಜಿ ಪ್ರಕಾಶನ ಪ್ರಕಟಿಸಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು (೨೦೦೦-೨೦೦೪). ಕರ್ನಾಟಕ ನಾಟಕ ಅಕಾಡೆಮಿ ಸಂಚಾಲಕರು (೨೦೦೭-೨೦೧೦), ಸದ್ಯ ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹುತಾತ್ಮ ಮೈಲಾರ ಮಹಾದೇವ ಟ್ರಸ್ಟ್ ಹಾಗೂ ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲೈನ್ ಮ್ಯಾನ್ ಮಡಿವಾಳರ ಭೀಮಪ್ಪ, ಪಂಜಾಬನ ಆ ಪುಟ್ಟ ಹುಡುಗಿಯ ಪತ್ರ, ಕಟ್ಟತ್ತೇವ ನಾವು ಕಟ್ಟತ್ತೇವ, ಚಪ್ಪಲಿಗಳು, ವಿಷಾದಯೋಗ ಮುಂತಾದ ಕವಿತೆಗಳು ತುಂಬಾ ಚರ್ಚಿತ ಕವಿತೆಗಳಾಗಿವೆ.

ಇಂಗಳೆ ಮಾರ್ಗ, ೨೨ ಜುಲೈ ೧೯೪೭, ಸಾವಿತ್ರಿಬಾಯಿ ಫುಲೆ ಚಲನಚಿತ್ರಗಳಿಗೆ ಗೀತ ರಚಿಸಿದ್ದಾರೆ.

ಇರಬೇಕು ಇರುವಂತೆ ಮರೆತು ಸಾವಿರ ಚಿಂತೆ ಬೀದಿ ನಾಟಕವನ್ನು ಕಳೆದ ವಾರವಷ್ಟೇ ರಚಿಸಿ ಪ್ರದರ್ಶಿಸಿದ್ದಾರೆ. ಆ ಮೂಲಕ ಹಾವೇರಿ ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಸದಾ ಜೀವಂತಿಕೆ ಇರುವಂತೆ ಕಾಪಿಟ್ಟುಕೊಂಡು ಬಂದಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಸಹಜವಾಗಿಯೇ ಖುಷಿಯಾಗಿದೆ. ಯೋಗ್ಯ ಸಂದರ್ಭದಲ್ಲಿ ಪ್ರಶಸ್ತಿ ಸಿಗುವುದು ಮುಖ್ಯವಾಗಿರುತ್ತದೆ. ಬೇರೆ ಏನೂ ಮಾಡದೇ ಅನೇಕ ವರ್ಷಗಳಿಂದ ಸಾಹಿತ್ಯವನ್ನೇ ಧ್ಯಾನವಾಗಿಸಿಕೊಂಡಿದ್ದನ್ನು ಗುರುತಿಸಿರುವುದಕ್ಕೆ ಸಮಾಧಾನ ತಂದಿದೆ ಎನ್ನುತ್ತಾರೆ ಕವಿ, ಲೇಖಕ ಸತೀಶ ಕುಲಕರ್ಣಿ

ಪ್ರಮುಖ ಕೃತಿಗಳು:

ಬೆಂಕಿ ಬೇರು (ಕವನ ಸಂಕಲನ), ವಿಕ್ಷಿಪ್ತ (ಸಂಪಾದಿತ ಕವನ ಸಂಕಲನ), ನೆಲದ ನೆರಳು: (ಸಂಯುಕ್ತ ಕವನ ಸಂಕಲನ), ಒಡಲಾಳ ಕಿಚ್ಚು: (ಕವನ ಸಂಕಲನ), ವಿಷಾದ ಯೋಗ: (ಕವನ ಸಂಕಲನ), ಹಾವೇರಿ ತಾಲೂಕಾ ದರ್ಶನ, ಕವಿತೆ ೯೩, ಗಾಂಧೀ ಗಿಡ, ಬಂಡಾಯದ ಗಟ್ಟಿ ದನಿ: ಬರಗೂರು ರಾಮಚಂದ್ರಪ್ಪ(ಲೇಖನಗಳು), ಕಂಪನಿ ಸವಾಲ್: (ಕವನ ಸಂಕಲನ), ಛಿನ್ನ: (ಮರಾಠಿ ಅನುವಾದಿತ ನಾಟಕ, ಡಾ. ಸರ್ಜೂ ಕಾಟ್ಕರ್‌ರೊಂದಿಗೆ), ಸತೀಶ ಸಮಗ್ರ: (ಕವಿತೆಗಳು), ಓದೊಳಗಿನ ಓದು: (ಲೇಖನಗಳು), ಸತೀಶ ಕುಲಕರ್ಣಿ ಅವರ ಹತ್ತು ನಾಟಕಗಳು, ಸಮಯಾಂತರ: (ಆಯ್ದ ಕವಿತೆಗಳು), ಸಮುದ್ರ ಸೂರ್ಯ: (ಸಂಪಾದಿತ), ಗುರುವರ್ಯ ಗೋಕಾಕರು, ಕನ್ನಡ ಕಾವ್ಯ ಕುಸುಮಗಳು, ಕರ್ನಾಟಕ ಸಮಗ್ರ ತತ್ವ ಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಹಾವೇರಿ ಜಿಲ್ಲಾ ರಂಗ ಮಾಹಿತಿ, ಪ್ರೊ. ಮಾಲತಿ ಪಟ್ಟಣಶೆಟ್ಟಿ: (ಜೀವನ ಚರಿತ್ರೆ) .

ಮುಖ್ಯ ಪ್ರಶಸ್ತಿಗಳು:

ಕರ್ನಾಟಕ ನಾಟಕ ಅಕಾಡೆಮಿ ಸುವರ್ಣರಂಗ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ ಪ್ರಶಸ್ತಿ

ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಶಸ್ತಿ

ಸಿಜಿಕೆ ಬೀದಿ ನಾಟಕ ಪ್ರಶಸ್ತಿ

ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ

Share this article