ಉರ್ದು ಮರೆಸಿ, ಕನ್ನಡ ಮೆರೆಸಿದ ಸಂಘಕ್ಕೆ ರಾಜ್ಯೋತ್ಸವ ಗರಿ

KannadaprabhaNewsNetwork |  
Published : Nov 01, 2023, 01:03 AM IST
ಸುರಪುರದ ರಂಗಂಪೇಟೆ-ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘ. | Kannada Prabha

ಸಾರಾಂಶ

ಸುರಪುರದ ರಂಗಂಪೇಟೆ-ತಿಮ್ಮಾಪುರದ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ1943ರಲ್ಲಿ ಸ್ಥಾಪಿತ, ಕರ್ನಾಟಕದ ಅತ್ಯಂತ ಹಳೆಯ ಎರಡನೇ ಸಂಘಕ್ಕೆ ನಿಜಾಮ್‌ ಕಾಲದಲ್ಲಿ ಉರ್ದು ಪ್ರಾಬಲ್ಯದ ಮಧ್ಯೆಯೂ ಕನ್ನಡದ ಕಹಳೆ ಮೊಳಗಿಸಿದ ಸಂಘಬ್ರಿಟಿಷರ, ನಿಜಾಮರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾದ ಕನ್ನಡ ಸಂಘ

ಕನ್ನಡಪ್ರಭ ವಾರ್ತೆ ಯಾದಗಿರಿ/ಸುರಪುರ

ಬ್ರಿಟಿಷರಿಂದ ಮುಕ್ತಿ ಸಿಕ್ಕರೂ, ವರ್ಷಕಾಲ ಹೈದರಾಬಾದ್ ನಿಜಾಮ್‌ ಆಡಳಿತದ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಹೈದರಾಬಾದ್ ಕರ್ನಾಟಕ ಭಾಗ ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರಿಗೆ ಪ್ರೇರಣೆಯಾದ, ಉರ್ದು ಭಾಷೆಯ ಪ್ರಾಬಲ್ಯದ ನಡುವೆಯೂ ಕನ್ನಡ ಉಳಿವಿಕೆಗಾಗಿ ಅಹರ್ನಿಷಿ ದುಡಿದ ಜಿಲ್ಲೆಯ ಸುರಪುರದ ರಂಗಂಪೇಟೆ-ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘವು 2023ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.

82 ವರ್ಷಗಳಷ್ಟು ಹಿಂದಿನ, ರಾಜ್ಯದ ಎರಡನೇ ಅತ್ಯಂತ ಹಳೆಯ, ಅಂದಿನಿಂದ ಎಂದಿಗೂ ಬತ್ತದ ಕನ್ನಡ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಾಹಿತ್ಯ ಸಂಘಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಪ್ರಶಸ್ತಿಯ ಗೌರವ ಇಮ್ಮಡಿಸಿದಂತಾಗಿದೆ. ಇದು ಯಾದಗಿರಿ ಜಿಲ್ಲೆಯ ಹಿರಿಮೆಯನ್ನೂ ಹೆಚ್ಚಿಸಿದಂತಾಗಿದೆ.

68ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 68 ಗಣ್ಯರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಮಂಗಳವಾರ ಪ್ರಕಟಿಸಲಾಗಿದೆ. ಇನ್ನು, ಇದೇ ನವೆಂಬರ್‌ 1 ಕ್ಕೆ ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಶುಭ ಸಂದರ್ಭದಲ್ಲಿ, ಕರ್ನಾಟಕ ಸಂಭ್ರಮ-50 ರ ಅಂಗವಾಗಿ 10 ಸಂಘ ಸಂಸ್ಥೆಗಳಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದರಿಂದ, ಈ ವಿಭಾಗದಲ್ಲಿ ಸುರಪುರದ ರಂಗಂಪೇಟೆ-ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿದೆ.

ಕನ್ನಡಪರ ಚಿಂತನೆಯುಳ್ಳ ಹಿರೀಕರ, ಬುದ್ಧಿಜೀವಿಗಳ ಹಾಗೂ ನಿಸ್ವಾರ್ಥ ಮನಸುಗಳ ಆಶಯದೊಂದಿಗೆ 5 ಏಪ್ರೀಲ್‌ 1943, ಯುಗಾದಿ ಹಬ್ಬದಂದು ರಂಗಂಪೇಟೆ-ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘ ಸ್ಥಾಪಿತವಾಯಿತು.

ದಿ. ಹೆಬ್ಬಾಳ ಶೇಷಶಾಸ್ತ್ರಿಗಳು, ದಿ. ಅಷ್ಟಾವಧಾನಿ ನರಸಿಂಹ ಶಾಸ್ತ್ರಿಗಳು, ದಿ. ಮಣ್ಣೂರು ಜಯತೀರ್ಥಾಚಾರ್ಯರ ಮಾರ್ಗದರ್ಶನದಲ್ಲಿ, ದಿ. ಸಗರ ಕೃಷ್ಣಾಚಾರ್ಯ ಇನಾಂದಾರರು, ದಿ. ರುದ್ರಸ್ವಾಮಿಗಳು, ದಿ. ಬಂಡಿ ಗುರಾಚಾರ್ಯರು, ದಿ. ಶ್ರೀನಿವಾಸ ಜಹಾಗೀರದಾರರು, ದಿ. ಮಿರಿಯಾಲ ಬುದ್ಧಿವಂತಶೆಟ್ಟರು, ದಿ. ಡಿ. ಗೋವಿಂದಪ್ಪನವರು, ದಿ. ಮುಮ್ಮುಡಿ ಶಿವಣ್ಣನವರು ಸಂಘದ ಸ್ಥಾಪನೆಯ ನಾಂದಿ ಹಾಡಲಾಯಿತು.

ದಿ. ಬೋಡಾ ರಾಮಣ್ಣನವರು ಸ್ಥಾಪನಾ ಅಧ್ಯಕ್ಷರಾಗಿದ್ದರೆ, ದಿ. ಶ್ರೀನಿವಾಸಾಚಾರ್ಯ ಜಹಾಗೀರದಾರ್ ಕೊಳ್ಳೂರು ಉಪಾಧ್ಯಕ್ಷರಾಗಿ, ದಿ. ರುದ್ರಸ್ವಾಮಗಳು ಕಾರ್ಯದರ್ಶಿಗಳಾಗಿ ಸಾಹಿತ್ಯ ಸಂಘಕ್ಕೆ ಬುನಾದಿ. ಸತತ 42 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ದಿ. ಬೋಡಾ ರಾಮಣ್ಣ ಸಂಘದ ಬೆಳವಣಿಗೆಗೆ ಕಾರಣವಾದರೆ, ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದರೂ ಸಾಹಿತ್ಯಾಸಕ್ತರಾಗಿದ್ದ ದಿ. ಮಿರಿಯಾಲ ಬುದ್ಧಿವಂತ ಶೆಟ್ಟರ ಹಗರಲಿರುಳೂ ಸೇವೆ ರಂಗಂಪೇಟೆ-ತಿಮ್ಮಾಪುರ ಸಾಹಿತ್ಯ ಸಂಘದ ಚಟುವಟಿಕೆಗಳಿಗೆ ಹೊಸ ಭಾಷ್ಯವನ್ನೇ ಬರೆಯಿತು. ಸಂಶೋಧಕ ಸೀತಾರಾಮ ಜಹಾಗೀರದಾರರು ಹಗೂ ಸಾಹಸ, ಸಾಹಿತ್ಯ ಮತ್ತು ಸಾಂಸ್ಕೃತಿಕದಲ್ಲಿ ಛಾಪು ಮೂಡಿಸಿರುವ ಸುರಪುರ ಸಂಸ್ಥಾನದರಸರ ನೆರವು ಸಂಘದ ಬಲ ಹೆಚ್ಚಿಸಿತ್ತು. ಮಾಜಿ ಸಚಿವ ದಿ. ರಾಜಾ ಮದನಗೋಪಾಲ ನಾಯಕರ ಕೊಡುಗೆ ಸ್ಮರಣೀಯ.

ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕ ಜೀವಂತವಾಗಿರಿಸಲು ಕಳೆದ 82 ವರ್ಷಗಳಿಂದ ವಿವಿಧ ಉತ್ಸವಗಳ ಮೂಲಕ, ಈ ಭಾಗದಲ್ಲಿ ನಾಡು-ನುಡಿಯ ಬೆಳವಣಿಗೆಗೆ ಕ್ರಿಯಾಶೀಲವಾಗಿರುವ ಸಾಹಿತ್ಯ ಸಂಘ ನಾಡಹಬ್ಬ, ವಾರ್ಷಿಕೋತ್ಸವ, ಉಪನ್ಯಾಸ ಮಾಲಿಕೆಗಳ ಮೂಲಕ ಜನಮನ ಸೆಳೆದಿದೆ.ಕನ್ನಡದ ಆಸ್ತಿ, ಸಾಹಿತ್ಯ ದಿಗ್ಗಜರ ಭೇಟಿ: ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ್‌ ಅಯ್ಯಂಗಾರರು ಸೇರಿದಂತೆ ನಾಡಿನ ದಿಗ್ಗಜ ಸಾಹಿತಿಗಳು, ಕಲಾವಿದರು, ಕವಿಗಳು, ಲೇಖಕರು, ರಾಜಕೀಯ ಮುತ್ಸದ್ದಿಗಳು, ಅನೇಕ ಗಣ್ಯಮಾನ್ಯರು ಭೇಟಿ ನೀಡಿ, ಇಲ್ಲಿನ ಸಾಹಿತ್ಯದ ರಸದೌತಣ ಸವಿದಿದ್ದಾರೆ. ಶ್ರೀಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯಶ್ರೀ ದೊಡ್ಡಪ್ಪ ಅಪ್ಪ, ಕಪಟಾಳ ಕೃಷ್ಣರಾಯರು, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು, ಸಿ. ಕೆ. ವೆಂಕಟರಾಮಯ್ಯ, ಮಾನ್ವಿ ನರಸಿಂಗರಾಯರು, ವಿ. ಎಂ. ಇನಾಮದಾರ, ಹೇಮಂತ ಕುಲಕರ್ಣಿ, ದ. ರಾ. ಬೇಂದ್ರೆ, ತೀ. ನಂ. ಶ್ರೀಕಂಠಯ್ಯ, ವಿ. ಸೀತಾರಾಮಯ್ಯ, ತಿ. ತಾ. ಶರ್ಮ, ಎಸ್. ವಿ. ರಂಗಣ್ಣ, ಕೆ. ವಿ. ರಾಘವಾಚಾರ್ಯರು, ಬೀಚಿ, ಬೆಟಗೇರಿ ಕೃಷ್ಣಶರ್ಮರು, ಬುರ್ಲಿ ಬಿಂದು ಮಾಧವರು, ಪ್ರಹ್ಲಾದ ನರೇಗಲ್, ಸುಮತೀಂದ್ರ ನಾಡಿಗ, ಆರ್. ವಾಯ್. ಧಾರವಾಡಕರ್, ಶಾಂತರಸರು, ಎಂ. ಜಿ. ಬಿರಾದಾರ, ಸಿದ್ದಯ್ಯ ಪುರಾಣಿಕರ, ಜಗದೇವಿತಾಯಿ ಲಿಗಾಡೆ, ಮಂತ್ರಿ ಚೆನ್ನಾರೆಡ್ಡಿ, ಸುಯತೀಂದ್ರ ನಾಡಿಗರು, ಚೆನ್ನವೀರ ಕಣವಿ, ಪಾಟೀಲ ಪುಟ್ಟಪ್ಪನವರು, ವಿ. ಕೃ, ಗೋಕಾಕ್, ಚಂದ್ರಶೇಖರ ಪಾಟೀಲ್ (ಚಂಪಾ), ಚಂದ್ರಶೇಖರ ಕಂಬಾರ, ಚೆನ್ನಣ್ಣ ವಾಲೀಕಾರ ಸೇರಿದಂತೆ ಸಾವಿರಕ್ಕೂ ಹೆಚ್ಚು ನಾಡಿನ ಸುಪ್ರಸಿದ್ಧ ಸಾಹಿತಿಗಳು ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ನಾಡಹಬ್ಬ ಉತ್ಸವಕ್ಕೆ ಆಗಮಿಸಿ, ಕನ್ನಡ ಸೇವ ಶ್ಲಾಘಿಸಿದ್ದಾರೆ.

ಸುರಪುರ ಸಮೀಪದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಪಾತ್ರ ಅಮೋಘವಾಗಿದೆ. ಸಾಹಿತ್ಯ, ಸಂಸ್ಕೃತಿ, ಕಥೆ, ಕವನ, ಉಪನ್ಯಾಸ ಇನ್ನಿತರ ಚಟುವಟಿಕೆಗಳ ಮೂಲಕ ಕನ್ನಡದ ಕಂಪನ್ನು ಬೀರುತ್ತಿರುವ ಸ್ವಾತಂತ್ರ್ಯಪೂರ್ವದ ಈ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಮುಕುಟಮಣಿಯಂತಿದೆ. ಸಾಹಿತ್ಯ ಸಂಘದ ನಡೆ-ನುಡಿ: ರಂಗಂಪೇಟೆ ಕನ್ನಡ ಸಾಹಿತ್ಯ ಸಂಘಕ್ಕೆ ಬೋಡಾ ರಾಮಣ್ಣನವರು ಪ್ರಥಮ ಅಧ್ಯಕ್ಷರಾಗಿದ್ದರೆ, ಅಡಿವೆಪ್ಪ ಗೋಲಗೇರಿ, ಡಿ. ಗೋವಿಂದಪ್ಪ, ಎಂ.ಆರ್. ಬುದ್ಧಿವಂತಶೆಟ್ಟರು, ಡಾ. ಸುರೇಶ್ ಸಜ್ಜನ್ ನಂತರ ಇದೀಗ ಸೂಗೂರೇಶ ವಾರದ ಅಧ್ಯಕ್ಷರಾಗಿದ್ದಾರೆ.

ಸಾಹಿತ್ಯ ಸಂಘದ ಶಕ್ತಿ ಬುದ್ಧಿವಂತ ಶೆಟ್ಟರು

ಉರ್ದು ಭಾಷೆ ಪ್ರಭಾವ ಕಾಲಘಟ್ಟದಲ್ಲಿ ಕನ್ನಡ ಭಾಷೆ, ಸಾಹಿತ್ಯ ಎತ್ತಿಹಿಡಿದ ಕೀರ್ತಿ ದಿ. ಎಂ. ಆರ್.ಬುದ್ದಿವಂತ ಶೆಟ್ಟರಿಗೆ ಸಲ್ಲುತ್ತದೆ. 23ನೇ ವಯಸ್ಸಿನಲ್ಲಿ ಸಂಘಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ಮೂಲತ: ವ್ಯಾಪಾರಿಯಾದರೂ, ಶೆಟ್ಟರು ಸಾಹಿತ್ಯಾಸಕ್ತರು, ಪ್ರಸಾರಕರು, ಓದುಗರು.

ಸಂಘದ ಕ್ರಿಯಾಶಕ್ತಿಯಾಗಿ ನಿರಂತರ ಆರು ದಶಕಗಳ ಕಾಲ ಶೆಟ್ಟರು ಸಂಘದ ಅಧ್ಯಕ್ಷರಾಗಿದ್ದರು. 2004 ರಲ್ಲಿ ಸಂಘವು ಶೆಟ್ಟರ ನೇತೃತ್ವದಲ್ಲಿ ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿ "ವಜ್ರ ದೀಪ್ತಿ " ಎಂಬ ಸ್ಮರಣ ಸಂಚಿಕೆ ಹೊರ ತಂದಿದೆ. ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹೆಚ್ಚು ಸಂತಸ ತಂದಿದೆ, ನಿರಂತರ ಕನ್ನಡದ ಸೇವೆಗೆ ಸಂದ ಗೌರವ ಇದಾಗಿದೆ.

- ಶಾಂತಪ್ಪ ಬೂದಿಹಾಳ, ಗೌರವಾಧ್ಯಕ್ಷರು, ಕನ್ನಡ ಸಾಹಿತ್ಯ ಸಂಘ ರಂಗಂಪೇಟ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ