ಕನ್ನಡಿಗರನ್ನು ಒಂದಾಗಿ ಕಟ್ಟುವ ಬಂಧ ರಾಜ್ಯೋತ್ಸವ: ಸಚಿವ ಎಚ್.ಕೆ. ಪಾಟೀಲ್

KannadaprabhaNewsNetwork |  
Published : Nov 02, 2025, 03:15 AM IST
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಗದಗ ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದಿಂದ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಚಿವ ಡಾ. ಎಚ್.ಕೆ. ಪಾಟೀಲ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು.

ಗದಗ: ನಮ್ಮ ನಾಡಿನ ಹೆಮ್ಮೆಯ ಕನ್ನಡ ರಾಜ್ಯೋತ್ಸವ ಕನ್ನಡದ ಇತಿಹಾಸ, ಸಂಸ್ಕೃತಿ ಮತ್ತು ಅಸ್ಮಿತೆಯ ಸಂಕೇತದ ಜತೆಗೆ ಕನ್ನಡಿಗರ ಏಕತೆಯ ಶಕ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದಿಂದ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಗದುಗಿನ ಹುಯಿಲಗೋಳ ನಾರಾಯಣರಾಯರು, ಆಲೂರು ವೆಂಕಟರಾಯರು, ಶಾಂತವೇರಿ ಗೋಪಾಲಗೌಡ, ಅಂದಾನಪ್ಪ ದೊಡ್ಡಮೇಟಿ, ದಿವಾಕರ ರಂಗನಾಥ್, ಕೆಂಗಲ್ ಹನುಮಂತಯ್ಯ, ಕೆ.ಎಚ್. ಪಾಟೀಲ ಅವರಂಥ ಹಲವಾರು ಕನ್ನಡಾಭಿಮಾನ ಹೊಂದಿದ ಮಹನೀಯರ ಪರಿಶ್ರಮದ ಫಲವಾಗಿ ಇಂದಿನ ಕರ್ನಾಟಕ ಉಚ್ಛ್ರಾಯ ಸ್ಥಿತಿ ತಲುಪಿದೆ ಎಂದು ಹೇಳಿದರು.

ಸ್ವಾತಂತ್ರ‍್ಯಾನಂತರ ಮೈಸೂರು ರಾಜ್ಯವು ಏಕೀಕರಣವಾದರೂ ಕರ್ನಾಟಕ ಎಂಬ ಹೆಸರು ನಾಮಕರಣವಾಗಲಿ ಎನ್ನುವ ಕೂಗು ಗದಗ ಸೇರಿದಂತೆ ಹಲವೆಡೆ ಪಸರಿಸಿತು. ಕರ್ನಾಟಕ ನಾಮಕರಣವಾಗಲು ಹಲವಾರು ಘಟನಾವಳಿಗಳು ಜರುಗಿದವು. ಇದಕ್ಕೆ ಪೂರಕವಾಗಿ ಗದುಗಿನ ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ 1961 ಡಿ. 27, 28 ಮತ್ತು 29ರಂದು ಜರುಗಿದ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಜಿ. ಕುಂದಣಗಾರ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎಚ್. ಪಾಟೀಲ ಅವರ ಆಶಯದಂತೆ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣವಾಗಲಿ ಎಂದು ನಿರ್ಣಯ ಕೈಗೊಳ್ಳಲಾಯಿತು. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು, ವಿಧಾನ ಪರಿಷತ್ತಿನಲ್ಲಿ ಕೃಷಿ ಸಚಿವ ಕೆ.ಎಚ್. ಪಾಟೀಲ ರಾಜ್ಯಕ್ಕೆ ಕರ್ನಾಟಕ ನಾಮಕರಣ ಠರಾವು ಮಂಡಿಸಿದರು. ಸರ್ವಾನುಮತದಿಂದ ಠರಾವು ಪಾಸಾಗಿ 1973 ನ. 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಯಿತು ಎಂದು ತಿಳಿಸಿದರು.

ಕರ್ನಾಟಕ ನಾಮಕರಣ ಸಂಭ್ರಮಾಚರಣೆಯನ್ನು ಗದುಗಿನಲ್ಲಿ 1973ರ ನ. 2ರಂದು ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರಜ್ವಲಿಸಿದ ಕನ್ನಡ ಜ್ಯೋತಿಯನ್ನು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಸ್ವೀಕರಿಸಿದ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಸಚಿವರು, ಅಭಿಮಾನಿಗಳು ವೀರನಾರಾಯಣ ದೇವಸ್ಥಾನದಿಂದ ಕಾಟನ್ ಸೇಲ್ ಸೊಸೈಟಿ ವರೆಗೆ ಮೆರವಣಿಗೆ ಮೂಲಕ ಬಂದು ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಐತಿಹಾಸಿಕ ಸಭೆ ನಡೆಸಿ, ಕರ್ನಾಟಕ ನಾಮಕರಣ ಮಹೋತ್ಸವವನ್ನು ಸಂಭ್ರಮಿಸಿದ್ದು ಕರ್ನಾಟಕ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣವಾಗಿದೆ. ಅಂದು ಜರುಗಿದ ಕರ್ನಾಟಕ ನಾಮಕರಣ ಮಹೋತ್ಸವದ ಘಟನೆಗಳನ್ನು ಮರುಸೃಷ್ಟಿಸಿ, ಕರ್ನಾಟಕ ಸಂಭ್ರಮ-50ರ ಆಚರಣೆಯನ್ನು 2023ರ ನ. 1, 2 ಮತ್ತು 3ರಂದು ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಮಾಡಲಾಯಿತು ಎಂದರು.

ಗದುಗಿನ ವೀರನಾರಾಯಣ-ತ್ರಿಕೂಟೇಶ್ವರ ದೇವಾಲಯಗಳು, ಲಕ್ಕುಂಡಿ ಜಿನಾಲಯಗಳು, ಡಂಬಳದ ದೊಡ್ಡ ಬಸವೇಶ್ವರ ದೇವಾಲಯ ಸೂಡಿಯ ಜೋಡು ಕಳಸದ ದೇವಾಲಯ, ದಾನ ಚಿಂತಾಮಣಿ ಅತ್ತಿಮಬ್ಬೆ ಸ್ಮಾರಕಗಳ ಶಿಲ್ಪಕಲೆ ಮೈ-ಮನಗಳನ್ನು ಮುದಗೊಳಿಸುತ್ತದೆ ಮತ್ತು ಭಾರತ ರತ್ನ, ಸಂಗೀತ ಸಾಮ್ರಾಟ ಪಂಡಿತ ಭೀಮಸೇನ ಜೋಶಿ, ಪಂಡಿತ್ ಪುಟ್ಟರಾಜ ಗವಾಯಿಗಳವರ ಆಶ್ರಮದ ಸಂಗೀತ ನಿನಾದ ನಮ್ಮಲ್ಲಿ ಧನ್ಯತಾ ಭಾವವನ್ನು ಜಾಗೃತಗೊಳಿಸುತ್ತದೆ.ಗದಗಿನ ಕೀರ್ತಿಯನ್ನು ರಾಷ್ಟ್ರ ಮಟ್ಟಕ್ಕೇರಿಸಿದ, ಶ್ರೀಮಂತಗೊಳಿಸಿದ 1ನೇ ನಾಗವರ್ಮ, ಶಾಸನ ಕವಿ ಮಲ್ಲ, ದುರ್ಗಸಿಂಹ, ನಯಸೇನ, ಚಾಮರಸ, ಕುಮಾರವ್ಯಾಸ, ಶ್ರೀಧರಾಚಾರ್ಯ, ಆದಯ್ಯ, ಬಾಲಲೀಲಾ ಮಹಾಂತ ಶಿವಯೋಗಿಗಳು, ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಹಿಂದುಸ್ತಾನಿ ಗಾಯಕ ಭಾರತರತ್ನ ಪುರಸ್ಕೃತ ಪಂ. ಭೀಮಸೇನ ಜೋಶಿ ಅವರು, ಸಂಗೀತ ದಿಗ್ಗಜರಾದ ಪಂಚಾಕ್ಷರಿ ಗವಾಯಿಗಳು ಮತ್ತು ವಿಶೇಷಚೇತನರಾಗಿ ಬಾಳಿನ ಬೆಳಕಾದ ಡಾ. ಪುಟ್ಟರಾಜ ಗವಾಯಿಗಳು ಸೇರಿದಂತೆ ಅನೇಕರನ್ನು ಸ್ಮರಿಸೋಣ ಎಂದು ಹೇಳಿದರು.

ವಿಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಕರ ಬಸ್‌ ಬೆಂಕಿಗೆ ಐವರು ಸಜೀವ ದಹನ
ಜಗಳದಲ್ಲಿ ಗಂಡನ ಕೊಲೆ ಮಾಡಿಅನಾರೋಗ್ಯದ ಕಥೆ ಕಟ್ಟಿದ ಪತ್ನಿ