ಮರಿಯಮ್ಮನಹಳ್ಳಿ: ನ.1ರಂದು ಕರ್ನಾಟಕ ರಾಜ್ಯೋತ್ಸವದ ಸಿಂಧೂರ ಬಂಡಾರ ಎನ್ನುವ ವಿಶೇಷ ಕಾರ್ಯಕ್ರಮಕ್ಕಾಗಿ ಮರಿಯಮ್ಮನಹಳ್ಳಿಯಲ್ಲಿ ಸಕಲ ಸಿದ್ಧತೆ ನಡೆದಿದೆ. ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪಟ್ಟಣದ ಮುಖ್ಯಬೀದಿಯಲ್ಲಿ ಕನ್ನಡ ಬಾವುಟ, ಬಂಟಿಂಗ್ಸ್ ತೋರಣಗಳಂತೆ ಎಲ್ಲೆಡೆ ರಾರಾಜಿಸುತ್ತಿವೆ. ಇಡೀ ದಿನ ಕನ್ನಡ ಹಾಡುಗಳು ಝೇಂಕರಿಸುತ್ತಿವೆ. ಸಂಜೆಯಾದಂತೆ ವಿದ್ಯುತ್ ದೀಪಗಳಿಂದ ಅಲಂಕಾರ ಎಲ್ಲರ ಗಮನ ಸೆಳೆಯುವ ಮೂಲಕ ಪಟ್ಟಣಕ್ಕೆ ವಿಶೇಷ ಮೆರಗು ತಂದಿದೆ. ಮರಿಯಮ್ಮನಹಳ್ಳಿಯು ಬೆಳಕಿನ ಕೊಳದಲ್ಲಿ ಮಿಂದೆದ್ದಿದೆ.ಈ ಬಾರಿ ರಾಜ್ಯೋತ್ಸವ, ದೀಪಾವಳಿ ಹಬ್ಬವು ಎರಡೂ ಏಕಕಾಲಕ್ಕೆ ಬಂದಿರುವುದರಿಂದ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಶಾಸಕ ಕೆ.ನೇಮರಾಜ್ ನಾಯ್ಕ ಮುತುವರ್ಜಿ ವಹಿಸಿದ್ದಾರೆ.
ಮರಿಯಮ್ಮನಹಳ್ಳಿಯ ಪ್ರೌಢಶಾಲಾ ಆವರಣದಲ್ಲಿ ನ.1ರಂದು ಸಿಂಧೂರ ಬಂಡಾರ ಎನ್ನುವ ವಿಶೇಷ ಕಾರ್ಯಕ್ರಮ ಸಿದ್ಧಗೊಂಡಿದೆ. ಮಧ್ಯಾಹ್ನ 1 ಗಂಟೆಗೆ ಪಪಂನಿಂದ ಶೋಭಾಯಾತ್ರೆ ಆರಂಭಗೊಂಡು ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣೆಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಾನಪದ ಕಲಾತಂಡಗಳೊಂದಿಗೆ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದ ಶೋಭಾಯಾತ್ರೆ ನಡೆಯಲಿದೆ. ಪ್ರೌಢಶಾಲಾ ಆವರಣವರೆಗೆ ಶೋಭಾಯಾತ್ರೆ ನಡೆಯಲಿದೆ. ಸುಮಾರು 20ಕ್ಕೂ ಹೆಚ್ಚು ಕಲಾತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸುವರು.ಸಂಜೆ 5 ಗಂಟೆಗೆ ನಾಡಿನ ಕಲಾವಿದರಿಂದ ಸಂಗೀತ, ನೃತ್ಯ, ಹಾಸ್ಯ ವೈಭವ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಲವ್ಲಿಸ್ಟಾರ್ ಪ್ರೇಮ್, ಚಲನಚಿತ್ರ ಹಿನ್ನೆಲೆ ಗಾಯಕ ಹೇಮಂತ್ ಮತ್ತು ತಂಡದವರು, ಗಾಯಕರಾದ ದಿವ್ಯಾ ರಾಮಚಂದ್ರ, ಶಿವಾನಿ, ಮನೋಜವಂ, ಅಶ್ವಿನ್ ಶರ್ಮ್, ಅಶ್ವಿನಿ, ವಿನೋದ್, ಅಭಿನಂದನ್, ಐಶ್ವರ್ಯ ಸೇರಿದಂತೆ ಇತರೆ ಖ್ಯಾತ ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಟಿವಿ ವಾಹಿನಿಗಳ ಹಾಸ್ಯ ಕಲಾವಿದರಾದ ಗಿಚ್ಚಿ ಗಿಲಿಗಿಲಿ, ಮಜಾಭಾರತ ತಂಡದ ಕಲಾವಿದರಾದ ಕಾರ್ತಿಕ್ ಹುಲಿ, ಜಗ್ಗಪ್ಪ, ಸುಷ್ಮಿತಾ ಸೇರಿದಂತೆ ಇತರೆ ಕಲಾವಿದರು ಭಾಗವಹಿಸುವರು.ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕರಾದ ಕೃಷ್ಣನಾಯ್ಕ, ಡಾ. ಎನ್.ಟಿ. ಶ್ರೀನಿವಾಸ, ಎಂ.ಪಿ. ಲತಾ, ಎಚ್.ಆರ್. ಗವಿಯಪ್ಪ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸುಮಾರು 60 ಅಡಿ ಅಗಲ, 40 ಅಡಿ ಉದ್ದ ಅಳತೆಯುಳ್ಳ ಬೃಹತ್ ವೇದಿಕೆ ನಿರ್ಮಾಣವಾಗಿದೆ. ವೀಕ್ಷಣೆಗೆ ಬಂದವವರಿಗೆ ಸುಮಾರು 8 ಸಾವಿರ ಕುರ್ಚಿಗಳನ್ನು ಹಾಕಲಾಗುತ್ತದೆ. ಶೋಭಾಯಾತ್ರೆಯಲ್ಲಿ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮಾರು 15ಸಾವಿರ ಜನರಿಗೆ 20 ಕೌಂಟರ್‌ಗಳಲ್ಲಿ ಊಟದ ವ್ಯವಸ್ಥೆಗೊಳಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಜನರು ಸೇರುವ ನಿರೀಕ್ಷೆ ಹೊಂದಲಾಗಿದೆ.ಮರಿಯಮ್ಮನಹಳ್ಳಿಯಲ್ಲಿ ದೀಪಾವಳಿ ಹಬ್ಬ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ಎರಡು ಒಂದೇ ದಿನ ಬಂದಿರುವುದರಿಂದ ಬೆಳಕಿನಹಬ್ಬ ದೀಪಾವಳಿಯೊಂದಿಗೆ ನಾಡಹಬ್ಬ ವಿಶೇಷ ಮೆರಗು ತಂದಿರುವುದು ವಿಶೇಷವಾಗಿದೆ.