ಹಾವೇರಿ ಜಿಲ್ಲಾದ್ಯಂತ ಸಂಭ್ರಮದ ರಕ್ಷಾಬಂಧನ

KannadaprabhaNewsNetwork |  
Published : Aug 10, 2025, 01:32 AM IST
ಫೋಟೊ ಶೀರ್ಷಿಕೆ: 9ಹೆಚ್‌ವಿಆರ್6ಹಾವೇರಿ: ನಗರದಲ್ಲಿ ರಕ್ಷಾ ಬಂಧನ ನಿಮಿತ್ತ ಸಹೋದರಿಯರು ಅಣ್ಣಂದಿರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು.  | Kannada Prabha

ಸಾರಾಂಶ

ಶ್ರಾವಣ ಮಾಸದ ನೂಲಹುಣ್ಣಿಮೆ ಅಂಗವಾಗಿ ಸಹೋದರ ಸಹೋದರಿಯರ ಭ್ರಾತೃತ್ವದ ಸಂಕೇತ ಸಾರುವ ರಕ್ಷಾಬಂಧನ ಹಬ್ಬವನ್ನು ಶನಿವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುವ ಮೂಲಕ ಯುವತಿಯರು, ಮಹಿಳೆಯರು ಮತ್ತು ಮಕ್ಕಳು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.

ಹಾವೇರಿ: ಶ್ರಾವಣ ಮಾಸದ ನೂಲಹುಣ್ಣಿಮೆ ಅಂಗವಾಗಿ ಸಹೋದರ ಸಹೋದರಿಯರ ಭ್ರಾತೃತ್ವದ ಸಂಕೇತ ಸಾರುವ ರಕ್ಷಾಬಂಧನ ಹಬ್ಬವನ್ನು ಶನಿವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುವ ಮೂಲಕ ಯುವತಿಯರು, ಮಹಿಳೆಯರು ಮತ್ತು ಮಕ್ಕಳು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.

ನಗರ ಸೇರಿದಂತೆ ಗ್ರಾಮೀಣ ಭಾಗದಾದ್ಯಂತ ರಕ್ಷಾ ಬಂಧನದ ಹಬ್ಬದ ಸಂಭ್ರಮ ಮನೆಮಾಡಿತ್ತು. ಬೆಳಗ್ಗೆಯಿಂದ ಮಹಿಳೆಯರು ಮತ್ತು ಮಕ್ಕಳು ದೇವಸ್ಥಾನಗಳಿಗೆ ತೆರಳಿ ಅಣ್ಣ ತಮ್ಮಂದಿರಿಗೆ ಒಳಿತಾಗಲಿ, ಸಹೋದರರು ಕೈಗೊಂಡ ಕಾರ್ಯಗಳು ಯಶಸ್ವಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಿದರು. ಮನೆಯಲ್ಲಿಯೂ ದೇವರ ಪೂಜೆ ನೆರವೇರಿಸಿ ತಮ್ಮಗಳ ಕಷ್ಟ-ಸುಖ, ನೋವು-ನಲಿವುನೊಂದಿಗೆ ಜತೆಯಾಗಿ ಇಬ್ಬರ ನಡುವಿನ ಬಂಧನವನ್ನು ಮತ್ತಷ್ಟು ಗಟ್ಟಿಗೊಳಿಸಲಿ. ದುಷ್ಟಶಕ್ತಿಗಳಿಂದ ಅಕ್ಕ-ತಂಗಿಯರನ್ನು ರಕ್ಷಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಮಾರುಕಟ್ಟೆಯ ಅಂಗಡಿಗಳಲ್ಲಿ ಕಸೂತಿ ರಾಖಿ, ಮಣಿ ರಾಖಿ, ನೂಲಿನಿಂದ ತಯಾರಿಸಿದ ರಾಖಿ, ಬೆಳ್ಳಿ ರಾಖಿ ಸೇರಿದಂತೆ ವಿವಿಧ ಬಗೆಯ ಬಣ್ಣಬಣ್ಣದ ರಾಖಿಗಳನ್ನು ಹಬ್ಬದ ಮುನ್ನಾ ದಿನವೇ ಖರೀದಿಸಿ ಇಟ್ಟುಕೊಂಡಿದ್ದರು. ಹಬ್ಬದ ದಿನದಂದು ಸಹೋದರಿಯರು ಮನೆಯಲ್ಲಿ ಇರುವ ತಮ್ಮ ಸಹೋದರರನ್ನು ಮಣೆಯ ಮೇಲೆ ಕೂರಿಸಿ ಕಂಕಣ ಕಟ್ಟಿದರು. ಹಣೆಯ ಮೇಲೆ ವಿಭೂತಿ ಹಚ್ಚಿ, ತಿಲಕವನ್ನಿಟ್ಟು ರಾಖಿ ಕಟ್ಟಿದರು. ಆನಂತರ ಆರತಿ ಬೆಳಗಿ ಸಿಹಿ ತಿನ್ನಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನೆರೆ ಹೊರೆಯ ಹೆಣ್ಣು ಮಕ್ಕಳನ್ನು ಕರೆದು ಆರತಿ ಬೆಳಗಿಸಿ ಖುಷಿಪಟ್ಟರು. ರಾಖಿ ಕಟ್ಟಿಸಿಕೊಂಡ ಸಹೋದರರು ಕೂಡ ಸೀರೆ, ಹಣ, ಬೆಳ್ಳಿ ಕಾಲ್ಗೆಜ್ಜೆ, ಉಂಗುರ ಸೇರಿದಂತೆ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು.

ತವರಿಗೆ ಬಂದ ಮಹಿಳೆಯರು: ಇತ್ತೀಚೆಗೆ ಮದುವೆಯಾಗಿ ಗಂಡನ ಮನೆಗೆ ತೆರಳಿದ್ದ ಯುವತಿಯರು ರಕ್ಷಾ ಬಂಧನ ಆಚರಿಸಲು ತವರೂರಿಗೆ ಬಂದಿದ್ದರು. ತವರು ಮನೆಯಲ್ಲಿ ಕಳೆದ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಮನೆಯಲ್ಲಿರುವ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು. ಸಹೋದರರ ಶುಭ ಹಾರೈಕೆ ಸದಾ ತಮ್ಮ ಮೇಲಿರಲಿ, ಅಣ್ಣಂದಿರ ಶ್ರೇಯಸ್ಸಿನಲ್ಲಿ ತಮ್ಮ ಜೀವನವಿದೆ ಎಂದು ಭಾವಿಸಿ ಹಬ್ಬ ಆಚರಿಸಿಕೊಂಡರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ