ಬಾಲರಾಮನ ಶಿಲೆ ದೊರೆತ ಸ್ಥಳದಲ್ಲೀಗ ರಾಮಮಂದಿರ!

KannadaprabhaNewsNetwork |  
Published : Jan 21, 2024, 01:30 AM ISTUpdated : Jan 21, 2024, 09:06 AM IST
3 | Kannada Prabha

ಸಾರಾಂಶ

ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಬಾಲರಾಮ ವಿಗ್ರಹದ ಕೃಷ್ಣಶಿಲೆ ಸಿಕ್ಕ ಮೈಸೂರಿನ ಹಾರೋಹಳ್ಳಿ ಜಮೀನಿನಲ್ಲಿ ಇದೀಗ ರಾಮಮಂದಿರ ನಿರ್ಮಾಣವಾಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಬಾಲರಾಮ ವಿಗ್ರಹದ ಕೃಷ್ಣಶಿಲೆ ಸಿಕ್ಕ ಮೈಸೂರಿನ ಹಾರೋಹಳ್ಳಿ ಜಮೀನಿನಲ್ಲಿ ಇದೀಗ ರಾಮಮಂದಿರ ನಿರ್ಮಾಣವಾಗಲಿದೆ. ಜ.22ರಂದು ಅಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಯೋಧ್ಯೆ ರಾಮಮಂದಿರ ಮಾದರಿಯಲ್ಲೇ ಇಲ್ಲಿ ವಿಗ್ರಹ ಕೆತ್ತನೆಗೆ ನಿರ್ಧರಿಸಲಾಗಿದೆ. ಶಿಲ್ಪಿ ಅರುಣ್ ಯೋಗಿರಾಜ್‌ರಿಂದಲೇ ವಿಗ್ರಹ ಕೆತ್ತನೆಗೆ ಮನವಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕು ಗುಜ್ಜೇಗೌಡನಪುರ ಸಮೀಪದ ಹಾರೋಹಳ್ಳಿ ಸರ್ವೆ ನಂ. 196 ಮತ್ತು 197ರಲ್ಲಿರುವ 2.16 ಎಕರೆ ಜಮೀನಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಾಮದಾಸ್ ಅವರ ಜಮೀನಿನಲ್ಲಿ ಕೃಷ್ಣಶಿಲೆ ದೊರೆತಿದೆ. 

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲಾ ವಿಗ್ರಹ ಈ ಜಮೀನಿನಲ್ಲಿ ಸಿಕ್ಕಿರುವುದು ದೇಶದ ಗಮನ ಸೆಳೆದಿದೆ ಎಂದು ಹೇಳಿದರು.

ಜ.22 ರ ಬೆಳಗ್ಗೆ 6 ರಿಂದ 8 ರವರೆಗೆ ಭೂಮಿ ಪೂಜೆ ನೆರವೇರಿಸುವ ಜೊತೆಗೆ ಧ್ಯಾನ, ಭಜನೆ ಕಾರ್ಯಕ್ರಮಗಳು ನಡೆಯಲಿವೆ. ಇಲ್ಲಿ ನಿರ್ಮಿಸುವ ರಾಮಮಂದಿರದಲ್ಲಿ ಅರುಣ್‌ ಯೋಗಿರಾಜ್‌ ಅವರಿಂದಲೇ ಮೂರ್ತಿ ಕೆತ್ತಿಸಲಾಗುವುದು ಎಂದು ತಿಳಿಸಿದರು.

ಊರಿನಲ್ಲಿ ದೇಣಿಗೆ ಸಂಗ್ರಹಿಸಿ ನಾವು ರಾಮಮಂದಿರ ನಿರ್ಮಿಸುತ್ತೇವೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸುತ್ತಿರುವ ಮೂರ್ತಿಯ ಶಿಲೆಯು ಈ ನೆಲದಲ್ಲಿ ದೊರೆತಿರುವುದರಿಂದ ಎಲ್ಲರ ಸೌಭಾಗ್ಯ ಎಂದರು.

ಶಿಲ್ಪಿ ಅರುಣ್ ಯೋಗಿರಾಜ್ ಅವರು ಮೈಸೂರಿಗೆ ವಾಪಸ್ ಬಂದ ಮೇಲೆ ಅವರ ಸಮ್ಮುಖದಲ್ಲೇ ಭೂ ಮಾಲೀಕರು, ಕಲ್ಲು ತೆಗೆದವರಿಗೂ ಸನ್ಮಾನ ಮಾಡಲಾಗುವುದು. ಅವರೊಂದಿಗೆ ಉತ್ತರಪ್ರದೇಶದ ಅಯೋಧ್ಯೆ ವೀಕ್ಷಣೆಗೂ ಕಳುಹಿಸಿಕೊಡಲಾಗುವುದು. ವಿಗ್ರಹ ಕೆತ್ತನೆಗೂ ಅವರಲ್ಲಿ ಕೋರಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ನಮ್ಮ ಜಮೀನಿನಲ್ಲಿ ಕಲ್ಲು ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ: ರಾಮದಾಸ್
ನಮ್ಮದು ಸಣ್ಣ ರೈತ ಕುಟುಂಬ. ನಮ್ಮ ತಾತನ ಕಾಲದಿಂದಲೂ ಉಳುಮೆ ಮಾಡಿಕೊಂಡು ಬಂದಿದ್ದೆವು. ಜಮೀನಿನಲ್ಲಿ ಸ್ವಲ್ಪಮಟ್ಟಿಗೆ ಬಂಡೆಯಂತೆ ಕಲ್ಲಿದ್ದದ್ದರಿಂದ ಕಲ್ಲು ತೆಗೆದು ಸಮತಟ್ಟು ಮಾಡಲು ಮುಂದಾಗಿದ್ದೆವು. 

ಆದರೆ ಇಲ್ಲಿ ಮೂರ್ತಿಯ ಕಲ್ಲು ದೊರೆತಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಭೂ ಮಾಲೀಕ ರಾಮದಾಸ್ ತಿಳಿಸಿದರು.ನಮ್ಮ ಜಮೀನಿನಲ್ಲಿ ಈ ಮಟ್ಟದ ಶಿಲೆ ದೊರೆಯುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. 

ಮೇಲ್ನೋಟಕ್ಕೆ ನೋಡಿದಾಗ ಬಂಡೆ ಕಲ್ಲು ಇತ್ತು. ಆದರೆ, ಒಳಗೆ ನೋಡಿದರೆ ಇಡೀ ಜಮೀನು ಕಲ್ಲುಮಯ ಆಗಿತ್ತು ಎಂದು ಹೇಳಿದರು.ದೇವಸ್ಥಾನ ನಿರ್ಮಾಣಕ್ಕೆ ಎಷ್ಟು ಜಮೀನು ಬೇಕು ಅಷ್ಟನ್ನು ಬಳಸಿಕೊಳ್ಳಬಹುದು. ನಮ್ಮದೇನೂ ಅಭ್ಯಂತರವಿಲ್ಲ. ನಮ್ಮ ಜಮೀನಿನ ಕಲ್ಲು ಮೂರ್ತಿಯಾಗುತ್ತಿರುವುದೇ ದೊಡ್ಡ ಹೆಮ್ಮೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ