ಮಂಗಳೂರಿನ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ ಮಸಾಜ್‌ ಸೆಂಟರ್‌ ಮೇಲೆ ರಾಮಸೇನೆ ದಾಳಿ, 14 ಮಂದಿ ಸೆರೆ

KannadaprabhaNewsNetwork | Updated : Jan 24 2025, 08:09 AM IST

ಸಾರಾಂಶ

ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ ಕಲರ್ಸ್‌ ಯುನಿಸೆಕ್ಸ್‌ ಸೆಲೂನ್‌ ಇದ್ದು, ಮಧ್ಯಾಹ್ನ 11.51ರ ಸಮಯ 9-10 ಮಂದಿ ಅಪರಿಚಿತರು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಡಿಸಿಪಿ ಸಿದ್ಧಾರ್ಥ ಗೋಯಲ್‌ ಮತ್ತು ತಂಡ ನೀಡಿ ಪರಿಶೀಲನೆ ನಡೆಸಿದೆ. 

 ಮಂಗಳೂರು : ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮಸೇನೆ ಸಂಘಟನೆ ಗುರುವಾರ ದಾಳಿ ನಡೆಸಿದೆ. ಈ ದಾಳಿಗೆ ಸಂಬಂಧಿಸಿ ರಾಮಸೇನೆ ಸ್ಥಾಪಕ ಪ್ರಸಾದ್ ಅತ್ತಾವರನನ್ನು ಪೊಲೀಸರು ಕ್ಷಿಪ್ರಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಲ್ಲದೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಉಳಿದ 13 ಮಂದಿ ಸಹಚರನನ್ನೂ ಬಂಧಿಸಲಾಗಿದೆ. ಮಂಗಳೂರಿನ ಬಿಜೈ ಕೆಎಸ್ಆರ್‌ಟಿಸಿ ಬಳಿಯ ಮಸಾಜ್ ಸೆಂಟರ್‌ಗೆ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ರಾಮ ಸೇನಾ ಸಂಘಟನೆ ಕಾರ್ಯಕರ್ತರು ಮಧ್ಯಾಹ್ನ ದಾಳಿ ನಡೆಸಿದ್ದರು. 

ಮಸಾಜ್ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ದಾಳಿ ನಡೆಸಿದ ಕಾರ್ಯಕರ್ತರು ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಮಸಾಜ್ ಸೆಂಟರ್‌ನ ಗಾಜುಗಳನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಲ್ಲಿರುವ ಯುವತಿಯರಿಗೆ ಬೆದರಿಕೆ ಹಾಕಿದ್ದಾರೆ. ಮಂಗಳೂರು ನಗರದಾದ್ಯಂತ ಇರುವ ಮಸಾಜ್‌ ಸೆಂಟರ್‌ಗಳನ್ನು ಮುಚ್ಚುವಂತೆ ರಾಮಸೇನಾ ಕಾರ್ಯಕರ್ತರು ಆಗ್ರಹಿಸಿದ್ದಾರೆ. ದಾಳಿ ನಡೆಸಿ ಸೊತ್ತು ಹಾನಿ ಎಸಗಿದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಸೆಲೂನ್‌ ಮಾಲೀಕ ಸುಧೀರ್‌ ಶೆಟ್ಟಿ ಅವರು ಬರ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳಾದ ಹರ್ಷರಾಜ್‌ ಯಾನೆ ಹರ್ಷಿತ್‌ ಫರಂಗಿಪೇಟೆ, ಮೋಹನ್‌ದಾಸ್‌ ಯಾನೆ ರವಿ ಮೂಡುಶೆಡ್ಡೆ, ಪುರಂದರ ಉಪ್ಪಳ, ಸಚಿನ್‌ ವಾಮಂಜೂರು, ರವೀಶ್‌ ಉಳಾಯಿಬೆಟ್ಟು, ಸುಕೇತ್‌ ಬೆಂಜನಪದವು, ಅಂಕಿತ್‌ ವಾಮಂಜೂರು, ಕಾಳಿಮುತ್ತು ಮೂಡುಶೆಡ್ಡೆ, ಅಭಿಲಾಶ್‌ ತಾರಿಗುಡ್ಡೆ, ದೀಪಕ್‌ ಮೂಡುಶೆಡ್ಡೆ, ಶರಣ್‌ರಾಜ್‌ ಮಂಕಿಸ್ಟ್ಯಾಂಡ್‌, ಪ್ರದೀಪ್‌ ಪೂಜಾರಿ ಮೂಡುಶೆಡ್ಡೆ ಹಾಗೂ ಪ್ರಸಾದ್‌ ಅತ್ತಾವರ ಬಂಧಿತರು. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 329(2), 324(5), 74, 351(3), 115(2), 109, 352 ಮತ್ತು 190 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ ಕಲರ್ಸ್‌ ಯುನಿಸೆಕ್ಸ್‌ ಸೆಲೂನ್‌ ಇದ್ದು, ಮಧ್ಯಾಹ್ನ 11.51ರ ಸಮಯ 9-10 ಮಂದಿ ಅಪರಿಚಿತರು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಡಿಸಿಪಿ ಸಿದ್ಧಾರ್ಥ ಗೋಯಲ್‌ ಮತ್ತು ತಂಡ ನೀಡಿ ಪರಿಶೀಲನೆ ನಡೆಸಿದೆ. ಸೆಲೂನ್‌ನ ಮಹಿಳಾ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ. ಗ್ರಾಹಕರು ಇಲ್ಲದ ವೇಳೆ ದಾಂದಲೆ ನಡೆಸಿದ ಬಗ್ಗೆ ಡಿಸಿಪಿಗೆ ಮಹಿಳಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಪ್ರಸಾದ್‌ ಅತ್ತಾವರ ಬಂಧನ: ಮಸಾಜ್‌ ಸೆಂಟರ್‌ ದಾಳಿಗೆ ಸಂಬಂಧಿಸಿ ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಕುಡುಪು ಬಳಿಯ ಆತನ ನಿವಾಸದಿಂದ ಬಂಧಿಸಿದ್ದಾರೆ. ಆತ ತನ್ನ ನಿವಾಸದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಸಿಸಿಬಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಈ ವೇಳೆ ಮಸಾಜ್ ಸೆಂಟರ್ ದಾಳಿ ನಾವೇ ನಡೆಸಿದ್ದಾಗಿ ಪ್ರಸಾದ್ ಅತ್ತಾವರ ಒಪ್ಪಿಕೊಂಡಿದ್ದಾನೆ. ಉಳಿದ ಕಾರ್ಯಕರ್ತರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಬೆದರಿಕೆ ಹಾಕಿದ ಆರೋಪಿಗಳು:

ಅಲ್ಲಿದ್ದ ಯುವತಿಯರಿಗೆ, ನೀವು ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೀರಾ ಎಂದು ದಾಳಿಕೋರರು ಆವಾಜ್ ಹಾಕಿದ್ದಾರೆ. ಯುವತಿಯರು ಕೈಮುಗಿದು ಹಲ್ಲೆ ಮಾಡಬೇಡಿ ಎಂದು ಬೇಡಿಕೊಳ್ಳುವ ವಿಡಿಯೋ ಇದೆ. ಕಾರ್ಯಕರ್ತರೇ ಜೊತೆಗೆ ಕ್ಯಾಮರಾಮನ್ ಒಬ್ಬನನ್ನು ಕರೆದೊಯ್ದು ದಾಳಿ ನಡೆಸಿರುವ ಸಾಧ್ಯತೆ ಇದ್ದು, ಇದರ ವಿಡಿಯೋವನ್ನು ದಾಳಿಕೋರರೇ ಬಿಡುಗಡೆ ಮಾಡಿದ್ದಾರೆ. ಮೂಲಗಳ ಪ್ರಕಾರ, ಈ ಮಸಾಜ್ ಪಾರ್ಲರ್‌ ಒಂದು ವರ್ಷದಿಂದ ಆರಂಭವಾಗಿದ್ದು, ಸುಧೀರ್ ಎಂಬವರಿಗೆ ಸೇರಿದ್ದಾಗಿದೆ.

ಕಾರ್ಯಕರ್ತರೇ ಕಾಂಡೋಮ್‌ ತಂದರೇ ? ದಾಳಿ ನಡೆಸಿದ ರಾಮ ಸೇನೆ ಯುವಕರೇ 3 ಕಾಂಡೋಮ್‌ಗಳನ್ನು ತಂದು ಬೆಡ್‌ ಮೇಲೆ ಹಾಕಿ, ಸೆಲೂನ್‌ ಮಾಲೀಕರು, ಸಿಬ್ಬಂದಿಗಳ ಮೇಲೆ ಆರೋಪ ಮಾಡುತ್ತಿರುವ ಬಗ್ಗೆ ಆರೋಪವೂ ಕೇಳಿ ಬಂದಿದೆ. ಒಂದು ವೇಳೆ ಸೆಲೂನ್‌ಗೆ ಸಂಬಂಧಪಟ್ಟ ಕಾಂಡೋಮ್‌ ಆಗಿದ್ದರೆ ಎದುರಿನಲ್ಲಿ ಪ್ರದರ್ಶನಕ್ಕೀಡುತ್ತಾರೆಯೇ ಎಂದು ಸೆಲೂನ್‌ ಸಿಬ್ಬಂದಿಗಳೇ ಪ್ರಶ್ನಿಸುತ್ತಾರೆ.ಮಸಾಜ್‌ ಸೆಂಟರ್‌ಗಳ ಮೇಲೆ ನಿಗಾಕ್ಕೆ ದೂರು

ಮಂಗಳೂರು ನಗರದಲ್ಲಿ ಈ ರೀತಿಯ 16ಕ್ಕೂ ಅಧಿಕ ಮಸಾಜ್ ಸೆಂಟರ್‌ಗಳಿದ್ದು ಕೆಲವು ಪರವಾನಗಿ ಹೊಂದಿಲ್ಲದೆಯೂ ನಡೆಯುತ್ತಿದೆ ಎಂಬ ಆರೋಪಗಳಿವೆ. ಈ ಹಿಂದೆ ಮೇಯರ್‌ವೊಬ್ಬರು ಇದೇ ಮಸಾಜ್‌ ಸೆಂಟರ್‌ಗೆ ಅನಧಿಕೃತ ನೆಲೆಯಲ್ಲಿ ದಾಳಿ ನಡೆಸಿದ್ದರು. ಬಳಿಕ ಇದು ಪರವಾನಿಗೆಯಡಿ ಕಾರ್ಯನಿರ್ವಹಿಸುತ್ತಿರುವುದು ಅರಿವಿಗೆ ಬಂದಿತ್ತು. ಮಂಗಳೂರಿನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಇದೇ ರೀತಿ ಮಸಾಜ್‌ ಕೇಂದ್ರವೊಂದಕ್ಕೆ ದಾಳಿ ನಡೆಸಿದ್ದು ವಿಡಿಯೋ ವೈರಲ್ ಆಗಿತ್ತು. ಆದರೆ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಮಂಗಳೂರಲ್ಲಿರುವ ಅಕ್ರಮ ಮಸಾಜ್ ಪಾರ್ಲರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದು ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದವು.

15 ವರ್ಷ ಹಿಂದೆ ನಡೆದಿತ್ತು ಪಬ್‌ ದಾಳಿ

ಶ್ರೀರಾಮಸೇನೆ ಕಾರ್ಯಕರ್ತರು ಮಂಗಳೂರಲ್ಲಿ 15 ವರ್ಷಗಳ ಹಿಂದೆ ಈ ಹಿಂದೆಯೂ ಇದೇ ರೀತಿ ದಾಳಿ ನಡೆಸಿದ್ದು, ಅದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಪಬ್‌ಗೆ 2009ರ ಜನವರಿ 24ರಂದು ಸಂಜೆ ಶ್ರೀರಾಮಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಸುಮಾರು 40 ಮಂದಿ ಕಾರ್ಯಕರ್ತರು ಈ ದಾಳಿ ನಡೆಸಿದ್ದರು. ಅಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಯುವಕ-ಯುವತಿಯರು ಸ್ವೇಚ್ಛೆಯಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಈ ದಾಳಿ ನಡೆಸಿದ್ದರು.

2012ರ ಜುಲೈ 28ರಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಪಡೀಲಿನಲ್ಲಿ ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದರು. ಯುವಕ-ಯುವತಿ ಸೇರಿ ಬರ್ತ್‌ಡೇ ಪಾರ್ಟಿಯಲ್ಲಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಸುಮಾರು 12 ಮಂದಿಯ ತಂಡ ದಾಳಿ ನಡೆಸಿತ್ತು. ಈ ಎರಡು ಪ್ರಕರಣಗಳು ದೇಶಾದ್ಯಂತ ಸಾಕಷ್ಟು ಸುದ್ದಿಯಾಗಿತ್ತು. ಬಳಿಕ ಈ ಎರಡೂ ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೊಂಡಿತ್ತು. ಪ್ರಸಾದ್‌ ಅತ್ತಾವರ ಕ್ರಿಮಿನಲ್‌ ಹಿನ್ನೆಲೆ:

2009ರಲ್ಲಿ ಮಂಗಳೂರಿನಲ್ಲಿ ನಡೆದ ಪಬ್‌ ದಾಳಿ ಪ್ರಕರಣದ ಆರೋಪಿಯಾಗಿದ್ದ. 2015ರ ಸೆ. 3ರಂದು ಕನ್ನಡ ಸಾಹಿತಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಫೇಸ್‌ಬುಕ್‌ ಕಮೆಂಟ್‌ ಹಾಕಿದ ಆರೋಪದಲ್ಲಿ ಪ್ರಸಾದ್‌ ಅತ್ತಾವರನನ್ನು ಬಂಧಿಸಲಾಗಿತ್ತು. ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ 17.50 ಲಕ್ಷ ರು. ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಕೂಡ ಪ್ರಸಾದ್‌ ಅತ್ತಾವರನನ್ನು ಬಂಧಿಸಲಾಗಿತ್ತು.

Share this article