ಸೀತಾರಾಮ ತಾಂಡಾದಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮ ಹೆಸರಿನವರದ್ದೇ ಪಾರುಪತ್ಯ!

KannadaprabhaNewsNetwork | Published : Jan 21, 2024 1:33 AM

ಸಾರಾಂಶ

ವಿಜಯನಗರ ಜಿಲ್ಲೆಯ ಸೀತಾರಾಮ ತಾಂಡಾದಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮನ ಹೆಸರಿನವರೇ ಹೆಚ್ಚಿದ್ದಾರೆ. ಸೀತಾರಾಮ ತಾಂಡಾದಲ್ಲಿ 500ಕ್ಕೂ ಹೆಚ್ಚು ಮನೆಗಳಿದ್ದು, ಅಂದಾಜು 2000 ಜನಸಂಖ್ಯೆ ಇದೆ. ಈ ಊರಿನಲ್ಲಿ ಶೇ. 70ರಷ್ಟು ಜನರು ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ಹೆಸರಿನವರು.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಜಯನಗರ ಜಿಲ್ಲೆಯ ಸೀತಾರಾಮ ತಾಂಡಾದಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮನ ಹೆಸರಿನವರೇ ಹೆಚ್ಚಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವ ಹೊತ್ತಿನಲ್ಲಿ ಈ ತಾಂಡಾ ವಾಸಿಗಳು ಕೂಡ ಶ್ರೀರಾಮ ಜಪ ಮಾಡುತ್ತಿದ್ದಾರೆ.ಈ ತಾಂಡಾದಲ್ಲಿ ಶ್ರೀರಾಮನವಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಸೀತಾರಾಮ ತಾಂಡಾದಲ್ಲಿ 500ಕ್ಕೂ ಹೆಚ್ಚು ಮನೆಗಳಿದ್ದು, ಅಂದಾಜು 2000 ಜನಸಂಖ್ಯೆ ಇದೆ. ಈ ಊರಿನಲ್ಲಿ ಶೇ. 70ರಷ್ಟು ಜನರು ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ಹೆಸರಿನವರು. ಈ ಹೆಸರಿನವರನ್ನು ಗೌರವದಿಂದ ಸಂಬೋಧಿಸಲಾಗುತ್ತದೆ. ಈ ತಾಂಡಾ ವಾಸಿಗಳು ಮೊದಲಿನಿಂದಲೂ ಈ ಹೆಸರುಗಳನ್ನೇ ಹೆಚ್ಚು ಇಡುತ್ತಾ ಬಂದಿದ್ದು, 70, 80 ವರ್ಷದ ಅಜ್ಜಂದಿರು ರಾಮ, ಲಕ್ಷ್ಮಣ, ಹನುಮ ಹೆಸರಿನವರು ಸಿಕ್ಕರೆ, ಸೀತೆ ಹೆಸರಿನ ಅಜ್ಜಿಯರೂ ಇದ್ದಾರೆ. ಈಗ ಬಾಲಕ, ಬಾಲಕಿಯರು, ಯುವಕರು, ಯುವತಿಯರು ಮಧ್ಯ ವಯಸ್ಸಿನವರು ಕೂಡ ರಾಮ, ಲಕ್ಷ್ಮಣ, ಹನುಮ, ಸೀತೆ ಹೆಸರಿನವರೇ ಸಿಗುತ್ತಾರೆ.

ಸೀತಾರಾಮ ತಾಂಡಾ:

ಈ ತಾಂಡಾ ಹಂಪಿ ಪರಿಸರದಲ್ಲಿ ಬರುತ್ತಿದ್ದು, ಶ್ರೀರಾಮಚಂದ್ರರು ಚಾತುರ್ಮಾಸ್ಯ ಕಳೆದಿದ್ದ ಮಾಲ್ಯವಂತ ರಘುನಾಥ ದೇವಾಲಯ ಸಮೀಪದಲ್ಲೇ ಈ ತಾಂಡಾ ಇದೆ. ಈ ತಾಂಡಾದ ಮೂಲ ಪುರುಷರಾದ ಸೀತ್‌ ಸಾದ್‌ ಹಾಗೂ ಲಕ್ಷ್ಮಣ ಸಾದ್‌ ಅವರು ಈ ತಾಂಡಾಕ್ಕೆ ಸೀತಾರಾಮ ತಾಂಡಾ ಎಂದು ನಾಮಕರಣ ಮಾಡಿದ್ದಾರೆ ಎಂದು ತಾಂಡಾದ ನಿವಾಸಿ ಸಂತೋಷ್‌ ನಾಯ್ಕ ಹೇಳುತ್ತಾರೆ.

ಹಂಪಿ ಮಾಲ್ಯವಂತ ರಘುನಾಥ ದೇವಾಲಯದ ರಥೋತ್ಸವ ಕೂಡ ತಾಂಡಾದ ನಿವಾಸಿಗಳು ಹೋದ ಬಳಿಕವೇ ನಡೆಯುತ್ತಿತ್ತು. ಇನ್ನು ರಥಕ್ಕೆ ತಾಂಡಾದ ಯುವಕರೇ ಸನ್ನೆ ಹಾಕುತ್ತಿದ್ದರು. ಕಾಲಾನಂತರ ಈ ಪರಂಪರೆ ಇಲ್ಲದಿದ್ದರೂ ಈಗಲೂ ಶ್ರೀರಾಮನವಮಿಯನ್ನು ತಾಂಡಾದ ನಿವಾಸಿಗಳು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ.

ರಾಮ, ಲಕ್ಷ್ಮಣ ಹೆಸರಿನವರೇ ಹೆಚ್ಚು:ಸೀತಾರಾಮ ತಾಂಡಾದಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮ ಎಂಬ ಹೆಸರಿನವರೇ ಹೆಚ್ಚು. ಒಂದು ಮನೆಯಲ್ಲಿ ಮೂವರು ಮಕ್ಕಳಿದ್ದರೆ, ಮೊದಲ ಪುತ್ರನಿಗೆ ರಾಮ, ಎರಡನೆ ಮಗನಿಗೆ ಲಕ್ಷ್ಮಣ ಮತ್ತು ಮೂರನೇ ಮಗನಿಗೆ ಹನುಮ ಎಂದು ಈ ತಾಂಡಾದಲ್ಲಿ ನಾಮಕರಣ ಮಾಡಿದ್ದಾರೆ. ಮಗಳಿದ್ದರೆ ಸೀತೆ ಎಂದು ನಾಮಕರಣ ಮಾಡಿದ್ದಾರೆ. ಹಾಗಾಗಿ ಈ ತಾಂಡಾದಲ್ಲಿ ರಾಮ ಎಂದು ಕೂಗಿದರೆ ಹತ್ತಾರು ಜನ ಒಮ್ಮಲೇ ತಿರುಗಿ ನೋಡುತ್ತಾರೆ. ಈ ಹೆಸರಿನವರಿಗೆ ಗೌರವದಿಂದ ಕಾಣಲಾಗುತ್ತದೆ. ಈ ತಾಂಡಾದ ಜನ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ಅಧ್ಯಾತ್ಮ, ಭಕ್ತಿ, ಭಾವದಲ್ಲೂ ಕಡಿಮೆ ಇಲ್ಲ. ತಾಂಡಾದಲ್ಲಿ ಹಿರಿಯರು ಹೇಳಿದ ಮಾತನ್ನೂ ಈಗಲೂ ಯುವಕರು ದಾಟಿ ಹೋಗುವುದಿಲ್ಲ. ತಾಂಡಾದ ಹಿರಿಯರು ಒಂದು ವಿಷಯದ ಮೇಲೆ ತೆಗೆದುಕೊಂಡ ನಿರ್ಣಯಕ್ಕೆ ಈಗಲೂ ಈ ತಾಂಡಾದಲ್ಲಿ ಬೆಲೆ ಇದೆ.

ನಮ್ಮ ಸೀತಾರಾಮ ತಾಂಡಾದಲ್ಲಿ ರಾಮ, ಲಕ್ಷ್ಮಣ, ಹನುಮಂತ, ಸೀತೆ ಹೆಸರಿನವರೇ ಹೆಚ್ಚಿದ್ದಾರೆ. ಈ ಹೆಸರುಗಳನ್ನು ಮೊದಲಿನಿಂದಲೂ ಇಡುತ್ತಾ ಬರಲಾಗುತ್ತಿದೆ. ಈ ಹಿಂದಿನಂತೆ ಈಗಲೂ ಹೆಚ್ಚಿದ್ದಾರೆ. ಹಂಪಿಯ ಮಾಲ್ಯವಂತ ರಘುನಾಥ ದೇವಾಲಯ ಪಕ್ಕದಲ್ಲೇ ನಮ್ಮ ತಾಂಡಾ ಬರುವುದರಿಂದ ತಾಂಡಾಕ್ಕೂ ಸೀತಾರಾಮ ತಾಂಡಾ ಎಂದೇ ಹೆಸರಿಡಲಾಗಿದೆ. ಈ ಹೆಸರು ನಮ್ಮ ತಾಂಡಾದಲ್ಲಿ ಹೆಚ್ಚಿರುವುದೇ ನಮಗೆ ಖುಷಿಯ ವಿಷಯವಾಗಿದೆ ಎಂದು ತಾಂಡಾ ನಿವಾಸಿ ರಾಮ, ಲಕ್ಷ್ಮಣ, ಸಂತೋಷ್‌ ನಾಯ್ಕ ಹೇಳುತ್ತಾರೆ.

Share this article