ಮುಜರಾಯಿ ಸೇರಿದಂತೆ ಇತರೆ ಎಲ್ಲಾ ದೇವಾಲಯಗಳಿಗೂ ವಿದ್ಯುತ್ ದೀಪಗಳಿಂದ ಅಲಂಕಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ ಬಾಲರಾಮನ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವನ್ನು ಕಾಫಿ ನಾಡಿನಾದ್ಯಂತ ಸಡಗರ, ಸಂಭ್ರಮದಿಂದ ಹಬ್ಬದ ರೀತಿಯಲ್ಲಿ ಸೋಮವಾರ ಆಚರಣೆ ಮಾಡಲಾಯಿತು.ಕಳೆದ ಒಂದು ವಾರಗಳಿಂದ ದೇವಾಲಯಗಳನ್ನು ಶುಚಿಗೊಳಿಸುವ ಕೆಲಸ ಭರದಿಂದ ನಡೆದಿತ್ತು. ಭಾನುವಾರ ರಾತ್ರಿಯೇ ಮುಜರಾಯಿ ಸೇರಿದಂತೆ ಇತರೆ ಎಲ್ಲಾ ದೇವಾಲಯಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸೋಮವಾರ ಬೆಳಗಾಗುತ್ತಿದ್ದಂತೆ ದೇವಾಲಯಗಳ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ಅವುಗಳಿಗೆ ಬಣ್ಣ ಹಾಕುವ ಮೂಲಕ ಇನ್ನಷ್ಟು ಸುಂದರಗೊಳಿಸಲಾಗಿತ್ತು. ತಳಿರು ತೋರಣಗಳನ್ನು ಕಟ್ಟಲಾಗಿತ್ತು. ದೇವಾಲಯಗಳ ಒಳಗೆ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ತೆರಳುತ್ತಿರುವುದು ಎಲ್ಲೆಡೆ ಕಂಡು ಬರುತ್ತಿತ್ತು.ಕೆಲವು ಬಡಾವಣೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ವಿಶೇಷ ವೇಷಭೂಷಣದೊಂದಿಗೆ ಮೆರವಣಿಗೆ ನಡೆಸಿದರು. ಸಂಜೆಯಾಗುತ್ತಿದ್ದಂತೆ ದೇವಾಲಯಗಳ ಹೊರ ವಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಚಿಕ್ಕಮಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮಚಂದ್ರ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ನಡೆಯಿತು. ಈ ಕಾರ್ಯವನ್ನು ಮುಜರಾಯಿ ಇಲಾಖೆಯಿಂದ ನೆರವೇರಿಸಲಾಗಿತ್ತು. ಶಾಸಕ ಎಚ್.ಡಿ. ತಮ್ಮಯ್ಯ, ಮಾಜಿ ಸಚಿವ ಸಿ.ಟಿ. ರವಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಸಂಜೆ ವೇಳೆಗೆ ಇಲ್ಲಿ ಮಾಡಲಾಗಿದ್ದ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯಿತು.ಇತರೆ ದೇವಾಲಯಗಳ ಮುಂಭಾಗದಲ್ಲೂ ದೀಪಾಲಂಕಾರ ಮಾಡಲಾಗಿತ್ತು. ನಗರ ಹಾಗೂ ಪಟ್ಠಣ ಪ್ರದೇಶಗಳು ವೃತ್ತಗಳು ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲೂ ದೇವಾಲಯಗಳ ಮುಂಭಾಗದಲ್ಲಿ ಪಟಾಕಿ ಸಿಡಿಸಲಾಯಿತು. ಸಂಜೆ ವೇಳೆಗೆ ದೇವಾಲಯಗಳಲ್ಲಿ ಭಜನೆ ಕೂಡ ಏರ್ಪಡಿಸಲಾಗಿತ್ತು. ಒಟ್ಟಾರೆ, ಕಾಫಿ ನಾಡಿನಲ್ಲಿ ಸೋಮವಾರ ಹಬ್ಬದ ವಾತಾವರಣ ಇತ್ತು.22 ಕೆಸಿಕೆಎಂ 3ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ವಿಗ್ರಹ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರ ದೇವಾಲಯದಲ್ಲಿ ಸೋಮವಾರ ರಾತ್ರಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.