ತಮ್ಮದೇ ಆದ ನೀತಿ ಸಿದ್ಧಾಂತಗಳೊಂದಿಗೆ ರಾಜಕಾರಣ ಮಾಡಿದ ಮಾಜಿ ಸಚಿವ ರಾಮಚಂದ್ರಗೌಡರು ರಾಜಕೀಯ ವಲಯದಲ್ಲಿ ಯಾರೊಬ್ಬರ ಬಗ್ಗೆಯೂ ದ್ವೇಷವಿರಿಸಿಕೊಳ್ಳದ ಅಜಾತಶತ್ರು ಆಗಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ತಮ್ಮದೇ ಆದ ನೀತಿ ಸಿದ್ಧಾಂತಗಳೊಂದಿಗೆ ರಾಜಕಾರಣ ಮಾಡಿದ ಮಾಜಿ ಸಚಿವ ರಾಮಚಂದ್ರಗೌಡರು ರಾಜಕೀಯ ವಲಯದಲ್ಲಿ ಯಾರೊಬ್ಬರ ಬಗ್ಗೆಯೂ ದ್ವೇಷವಿರಿಸಿಕೊಳ್ಳದ ಅಜಾತಶತ್ರು ಆಗಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮೃತರ ನಿವಾಸದಲ್ಲಿ ರಾಮಚಂದ್ರಗೌಡರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ತಿನ ಸದಸ್ಯರಾಗಿ ಹಾಗೂ ಸರ್ಕಾರದ ಸಚಿವರಾಗಿ ಜನಸೇವೆ ಸಲ್ಲಿಸಿದ ರಾಮಚಂದ್ರಗೌಡರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ನಾಯಕರಾಗಿದ್ದರು ಎಂದು ಸ್ಮರಿಸಿದರು. ನಿಷ್ಠಾವಂತ ಪ್ರಾಮಾಣಿಕ ರಾಜಕಾರಣಿ. ನನಗೆ ಹತ್ತಿರದ ಸಂಬಂಧಿಯಾಗಿದ್ದರು. ಕಾರ್ಪೊರೇಟರ್ ಆಗಿ ಜನರ ನಡುವೆ ಬೆರತು ಅವರ ಕಷ್ಟಸುಖಗಳನ್ನು ಅರಿತು ಸೇವೆಯಲ್ಲಿ ತೊಡಗಿದ್ದವರು. ಬೆಂಗಳೂರು ನಗರದ ಎಲ್ಲ ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. 1985 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಸಾರ್ವಜನಿಕ ಬಸ್ಸುಗಳಲ್ಲಿ ಆಗಮಿಸಿ ಪ್ರಚಾರ ಕಾರ್ಯಗಳನ್ನು ಕೈಗೊಂಡಿದ್ದ ಸರಳ ವ್ಯಕ್ತಿತ್ವ ಅವರದು ಎಂದು ಗುಣಗಾನ ಮಾಡಿದರು. 2 ದಿನಗಳ ಹಿಂದೆ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದೆ. ದುರಾದೃಷ್ಟವಶಾತ್ ಅವರು ವಿಧಿವಶರಾಗಿದ್ದು ದುಃಖದ ವಿಷಯ ಎಂದು ಹೇಳಿದರು.
ಮತ್ತೋರ್ವ ಸೋದರನನ್ನು ನಾನು ಕಳೆದುಕೊಂಡಿದ್ದೇನೆ. ನನ್ನ ದಶಕಗಳ ಕಾಲದ ಆತ್ಮೀಯ ಒಡನಾಡಿ, ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರಗೌಡರು ಜನಸಂಘದ ದಿನಗಳಿಂದಲೂ ಹೆಗಲಿಗೆ ಹೆಗಲು ಕೊಟ್ಟು ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಜೊತೆಯಾಗಿ ಕಟ್ಟಿದ ಹೋರಾಟದ ದಿನಗಳು ಕಣ್ಣಮುಂದೆ ಸುಳಿಯುತ್ತಿವೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಮಾಜಿ ಸಚಿವ ರಾಮಚಂದ್ರಗೌಡರು ಸರಳತೆ ಹಾಗೂ ಸಜ್ಜನಿಕೆಗೆ ಹೆಸರಾಗಿದ್ದರು. ಅವರ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಭಗವಂತನು ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ, ಅವರ ಕುಟುಂಬವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರಗೌಡರು ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಬೆಳೆಸುವಲ್ಲಿ ವಹಿಸಿದ ಮಹತ್ತರ ಪಾತ್ರ ಮತ್ತು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಹಿರಿಯ ರಾಜಕಾರಣಿ, ಜನಸಂಘದ ಕಾಲದಿಂದಲೇ ಬೆಂಗಳೂರಿನಲ್ಲಿ ಬಿಜೆಪಿಗೆ ಭದ್ರ ಅಡಿಪಾಯ ಹಾಕಿದ ಮುತ್ಸದ್ದಿ ನಾಯಕ ರಾಮಚಂದ್ರೇಗೌಡರು ದಶಕಗಳಿಂದ ಲಕ್ಷಾಂತರ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆಯಿಂದ ಪಕ್ಷದ ಸಂಘಟನಾ ಶಕ್ತಿ ಮತ್ತು ಸೈದ್ಧಾಂತಿಕ ಬದ್ಧತೆಯ ಒಂದು ಸುದೀರ್ಘ ಯುಗವೇ ಅಂತ್ಯಗೊಂಡಂತಾಗಿದೆ.
-ಆರ್.ಅಶೋಕ್, ಪ್ರತಿಪಕ್ಷದ ನಾಯಕ
ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ರಾಮಚಂದ್ರಗೌಡರು ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ನನ್ನ ಸಂಪುಟ ಸದಸ್ಯರಾಗಿದ್ದರು. ಅವರು ಸ್ನೇಹಶೀಲರು, ಸರಳ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ರಾಮಚಂದ್ರಗೌಡರು ಒಬ್ಬ ನಿಷ್ಠಾವಂತ ಆರ್‌ಎಸ್‌ಎಸ್ ಸ್ವಯಂ ಸೇವಕರಾಗಿ, ನಗರ ಪಾಲಿಕೆ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಮಂತ್ರಿಗಳಾಗಿ ಸೇವೆ ಸಲ್ಲಿಸಿದ ಜೊತೆಗೆ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳಸಿದವರ ಪ್ರಮುಖರಲ್ಲಿ ಒಬ್ಬರಾಗಿದ್ದರು.
-ವಿ.ಸೋಮಣ್ಣ, ಕೇಂದ್ರ ಸಚಿವ
ಮಾಜಿ ಸಚಿವ, ಬಿಜೆಪಿಯ ಹಿರಿಯ ಮುತ್ಸದ್ದಿ ನಾಯಕ ರಾಮಚಂದ್ರಗೌಡರ ಸಂಘಟನಾ ಚತುರತೆ, ಸಾರ್ವಜನಿಕ ಬದುಕಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ರೀತಿ ಮತ್ತು ಪಕ್ಷದ ಮೇಲಿನ ಗೌರವ ಪ್ರತಿಯೊಬ್ಬ ಕಾರ್ಯಕರ್ತರಿಗೂ ಪ್ರೇರಣೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.