ವಿಜಯನಗರ ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್ ಆಚರಣೆ
ಕನ್ನಡಪ್ರಭ ವಾರ್ತೆ ಹೊಸಪೇಟೆವಿಜಯನಗರ ಜಿಲ್ಲೆಯಾದ್ಯಂತ ಮುಸ್ಲಿಮರು ಪವಿತ್ರ ರಂಜಾನ್ ಹಬ್ಬವನ್ನು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಸೋಮವಾರ ಆಚರಿಸಿದರು.
ಜಿಲ್ಲೆಯ ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕುಗಳಲ್ಲಿ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಪರಸ್ಪರ ಆಲಂಗಿಸುವ ಮೂಲಕ ಹಬ್ಬದ ಶುಭಾಶಗಳನ್ನು ವಿನಿಮಯ ಮಾಡಿಕೊಂಡರು.ನಗರದ ಆರ್.ಟಿ.ಓ. ಆಫೀಸ್ ಹಿಂಭಾಗದ ಈದ್ಗಾ ಮೈದಾನ, ಬಸ್ ಡಿಪೋ ಹತ್ತಿರ ಈದ್ಗಾ ಮೈದಾನ, ಗುಲಾಬ್ ಷಾ ವಲಿ ದರ್ಗಾ ಈದ್ಗಾ ಮೈದಾನ, ಚಿತ್ತವಾಡ್ಗಿ ಈದ್ಗಾ ಮೈದಾನ, ಕಾರಿಗನೂರು ಈದ್ಗಾ ಮೈದಾನ, ನಾಗೇನಹಳ್ಳಿ ಈದ್ಗಾ ಮೈದಾನ, ಟಿ.ಬಿ. ಡ್ಯಾಂ ಈದ್ಗಾ ಮೈದಾನ, ಕಮಲಾಪುರ, ಮರಿಯಮ್ಮನಹಳ್ಳಿ ಸೇರಿದಂತೆ ವಿವಿಧೆಡೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ನಗರದ ಅಂಬೇಡ್ಕರ್ ಸರ್ಕಲ್ ಹತ್ತಿರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಹಾಗೂ ಅಂಜುಮನ್ ಕಮಿಟಿ ಅಧ್ಯಕ್ಷ ಎಚ್.ಎನ್. ಮಹಮ್ಮದ ಇಮಾಮ್ ನಿಯಾಜಿ ಮಾತನಾಡಿ, ಎಲ್ಲಾ ಮುಸ್ಲಿಂ ಬಾಂಧವರು 30 ದಿನಗಳ ಉಪವಾಸವನ್ನು ಪೂರೈಸಿದ ನಂತರ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾ, ಪ್ರತಿಜ್ಞೆ ಮಾಡಿ, ಈ ಒಂದು ರಂಜಾನ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುತ್ತೇವೆ. ಈ ವರ್ಷದ ರಂಜಾನ್ ಹಬ್ಬವು ಸರ್ವರಿಗೂ ಸುಃಖ, ಶಾಂತಿ, ಸಂಪತ್ತು, ನೆಮ್ಮದಿ ತರಲಿ ಎಂದು ರಂಜಾನ್ ಹಾಗೂ ಯುಗಾದಿ ಹಬ್ಬದ ಶುಭಾಶಯ ತಿಳಿಸಿದರು. ನಂತರ ಅಂಜುಮನ್ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಶಾಸಕ ಎಚ್.ಆರ್. ಗವಿಯಪ್ಪನವರು ಆಗಮಿಸಿ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.ಅಂಜುಮನ್ ಕಮಿಟಿ ಉಪಾಧ್ಯಕ್ಷ ಎಂ.ಎಂ. ಫೈರೋಜ್ ಖಾನ್, ಕಾರ್ಯದರ್ಶಿ ಅಬೂಬಕ್ಕರ್ ಅಶ್ರಫಿ, ಖಜಾಂಚಿ ಅನ್ಸರ್ ಬಾಷಾ, ಜಂಟಿ ಕಾರ್ಯದರ್ಶಿ ದುರ್ವೆಶ್ ಮೈನುದ್ದೀನ್, ಸದ್ಯಸರಾದ ಸದ್ದಾಂ ಹುಸೇನ್, ಮೊಹಮ್ಮದ್ ಮೋಸಿನ್, ಗುಲಾಮ್ ರಸೂಲ್, ನಗರಸಭಾ ಸದಸ್ಯರಾದ ಖದೀರ್, ಗೌಸ್, ಮುಖಂಡ ದಾದಾ ಖಲಂದರ್, ಸಮಾಜದ ಹಿರಿಯ ಮುಖಂಡರು ಮತ್ತಿತರರಿದ್ದರು.