ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರು ತನ್ನ ಬೇಕು ಬೇಡಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಕಾಲ ಮೇಲೆ ನಿಲ್ಲುವಂತಾದಾಗಲೇ ಅವಳಿಗೆ ನಿಜವಾದ ಸ್ವಾತಂತ್ರ್ಯ ಸಿಗುವುದು. ಹೀಗಾಗಿ, ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ನೃಪತುಂಗಾ ಶಾಲೆಯ ಕಾರ್ಯದರ್ಶಿ ಸವಿತಾ ಪ. ಮಲ್ಲೇಶ್ ತಿಳಿಸಿದರು.ರಾಮಕೃಷ್ಣನಗರದ ರಮಾಗೋವಿಂದ ರಂಗಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಸಾಹಿತ್ಯ ಸಂಸ್ಕೃತಿ ಸಮ್ಮಿಲನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಆರ್ಥಿಕ ಸ್ವಾವಲಂಬನೆಯತ್ತ ಮೊದಲು ದಾಪುಗಾಲಿಟ್ಟಾಗ ಮಾತ್ರ ಅವಳಲ್ಲಿ ಸಂಪೂರ್ಣ ಬದಲಾವಣೆಯನ್ನು ಕಾಣಲು ಸಾಧ್ಯ. ಅವಳು ಎಲ್ಲದಕ್ಕೂ ಬೇರೆಯವರ ಮುಂದೆ ಕೈಚಾಚದೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಾಗ ಅವಳು ತನ್ನ ಬದುಕಿನ ನೆಲೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.ಮಹಿಳೆಯರ ಸಾಧನೆಯ ಹಾದಿ ಎಂದಿಗೂ ಕಠಿಣವಾಗಿರುತ್ತದೆ. ತಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ ಬಳಸಿಕೊಂಡು ಉನ್ನತ ಸ್ಥಾನಕ್ಕೇರಬೇಕು. ಹೆಣ್ಣು ಮಕ್ಕಳು ಬಹುಮುಖ ಪ್ರತಿಭೆಯನ್ನು ಹೊಂದಿದ್ದಾರೆ. ಪ್ರೋತ್ಸಾಹಿಸುವ ಮನಸ್ಸುಗಳೂ ಕಡಿಮೆಯಿವೆ. ಹೀಗಾಗಿಯೇ, ಮನೆಗೆ ಮಾತ್ರ ಸೀಮಿತ ಎಂಬ ಮನಸ್ಥಿತಿ ಸಮಾಜದಲ್ಲಿ ಬೇರೂರಿವೆ. ಸ್ವಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ಉನ್ನತ ಶಿಕ್ಷಣ ಪಡೆದು ಉದ್ಯೋಗ ಸೃಷ್ಟಿಸುವ ನವೋದ್ಯಮಿಗಳಾಗಬೇಕು ಎಂದು ಅವರು ಕರೆ ನೀಡಿದರು. ಸ್ವೇಚ್ಛೆ ಮಾಡಬಾರದುಲೇಖಕಿ ಡಾ.ಕೆ. ಲೀಲಾ ಪ್ರಕಾಶ್ ಮಾತನಾಡಿ, ಆತ್ಮಾಭಿಮಾನವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ಅಬಲೆ, ದುರ್ಬಲಳು ಎಂದೆಲ್ಲಾ ತೋರಿಸಿಕೊಳ್ಳದೇ ಉದ್ಯೋಗ ಪಡೆದು, ಆರ್ಥಿಕವಾಗಿ ಸಬಲರಾಗಬೇಕು. ಭಾರತೀಯ ಸಮಾಜವು ಮಹಿಳೆಯನ್ನು ಮನೆಯಲ್ಲಿರಿದ್ದರೂ, ಮಾತೃ ಸ್ಥಾನದಲ್ಲಿ ನೋಡುತ್ತದೆ, ಪೂಜಿಸುತ್ತದೆ. ದೈವತ್ವದ ಸ್ಥಾನವನ್ನು ಕಳೆದುಕೊಳ್ಳವಾರದು. ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸ್ವೇಚ್ಛೆ ಮಾಡಬಾರದು ಎಂದು ಕಿವಿಮಾತು ಹೇಳಿದರು.ಗಂಡಸರಿಗೆ ನೈಸರ್ಗಿಕವಾಗಿ ಬಾಹುಬಲವಿದೆ. ಒಂದೇ ಕೆಲಸವನ್ನು ಏಕಾಗ್ರತೆಯಿಂದ ಮಾಡುತ್ತಾರೆ. ಆದರೆ, ಮಹಿಳೆಯರಿಗೆ ಇರುವ ಮಾನಸಿಕ ಸಾಮರ್ಥ್ಯ ಪುರುಷರಿಗೆ ಇರುವುದಿಲ್ಲ. ಸಣ್ಣ ಮುಳ್ಳು ಚುಚ್ಚಿದರೂ ಪುರುಷರಿಗೆ ಸಹಿಸಲಾಗದು. ಆರ್ಥಿಕವಾಗಿ ಪುರುಷರಿಗೆ ಅಡಿಯಾಳಾಗಬಾರದು. ಯಾವುದೇ ಮೀಸಲಾತಿ, ರಿಯಾಯಿತಿಗಳೇ ಬೇಡ. ಶ್ರಮಕ್ಕೆ ತಕ್ಕಂತೆ ಸಂಬಳವು ಇನ್ನೂ ಸಿಕ್ಕಿಲ್ಲ. ಸಮಾನತೆಯು ಮಸುಕಾಗಿದೆ. ಮಕ್ಕಳು, ಜಾನುವಾರು, ಅತಿಥಿಗಳನ್ನು ನೋಡಿಕೊಳ್ಳುವ ಕೆಲಸ ಹೆಣ್ಣು ಮಕ್ಕಳ ಮೇಲೆಯೇ ಇದೆ. ವ್ಯಕ್ತಿ ಗೌರವ ಸಿಗುತ್ತಿಲ್ಲ. ವ್ಯಕ್ತಿಯನ್ನಾಗಿಯೇ ನೋಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಮಹಿಳಾ ಸಾಧಕರಿಯರಿಗೆ ಪ್ರಶಸ್ತಿಇದೇ ವೇಳೆ ರಂಗಕರ್ಮಿ ಶ್ರೀಮತಿ ಹರಿಪ್ರಸಾದ್, ಸಮಾಜ ಸೇವಕಿ ಅನುಸೂಯಮ್ಮ, ಹಿರಿಯ ಲೇಖಕಿ ಎಂ.ಎಸ್. ವಿಜಯಾ ಹರನ್, ವಿಶೇಷಚೇತನ ಶಾಲೆಯ ಶಿಕ್ಷಕಿ ಪರಿಮಳಾ ಮೂರ್ತಿ, ಆಧ್ಯಾತ್ಮ ಚಿಂತಕಿ ಸುಮತಿ ಸುಬ್ರಹ್ಮಣ್ಯ ಮತ್ತು ಕಥೆಗಾರ್ತಿ ಬಿ.ಕೆ. ಮೀನಾಕ್ಷಿ ಅವರಿಗೆ ಮಹಿಳಾ ಸಾಧಕಿ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಿಜ್ಞಾನ ಲೇಖಕ ಎಸ್. ರಾಮಪ್ರಸಾದ್, ಸಾಹಿತಿ ಡಾ.ಎಸ್. ಸುಧಾ ರಮೇಶ್, ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಕಸಾಪ ಕಾರ್ಯದರ್ಶಿ ಮ.ನ. ಲತಾ ಮೋಹನ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಹಾಲಪ್ಪಗೌಡ, ಸಮಾಜ ಸೇವಕಿ ಸುಶೀಲಾ ಶ್ಯಾಮಸುಂದರ, ವಿಜಯಾ ಸುದರ್ಶನ್, ಪದ್ಮಾ ಪಾಂಡುರಂಗ, ಪದ್ಮಜಾ, ರಾಜೇಶ್ವರಿ, ಅಮೀನಾ ಕಾಲೇಖಾನ್ ಮೊದಲಾದವರು ಇದ್ದರು.